7
ಚಾಮರಾಜನಗರ ಜಿಲ್ಲಾಡಳಿತದ ವಿಶಿಷ್ಟ ಪ್ರಯೋಗ ಫಲಪ್ರದ

ಗರ್ಭಿಣಿಯರಿಗೆ ಬಲ ತುಂಬಿದ ‘ಸತ್ವ’

Published:
Updated:

ಚಾಮರಾಜನಗರ: ರಕ್ತಹೀನತೆಯಿಂದ (ಅನೀಮಿಯಾ) ಬಳಲುವ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಜಾರಿಗೆ ತಂದಿದ್ದ ವಿಶಿಷ್ಟ ಕಾರ್ಯಕ್ರಮ ‘ಸತ್ವ’ ಫಲ ನೀಡಿದೆ.

2016–17ರಲ್ಲಿ ಜಿಲ್ಲೆಯ 11,871 ಗರ್ಭಿಣಿಯರ ರಕ್ತದಲ್ಲಿ ಹಿಮೋಗ್ಲೋಬಿನ್‌ (ಎಚ್‌ಬಿ) ಪ್ರಮಾಣ 11 ಗ್ರಾಂಗಿಂತಲೂ ಕಡಿಮೆ ಇತ್ತು. ಕಳೆದ ವರ್ಷ (2017–18) 7,263 ಗರ್ಭಿಣಿಯರಲ್ಲಿ ಮಾತ್ರ ಈ ಸಮಸ್ಯೆ ಕಂಡು ಬಂದಿದೆ.

‌ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜೀವನ್‌ ಜ್ಯೋತಿ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಒಟ್ಟಾಗಿ ‘ಸತ್ವ’ (ಸಿಸ್ಟಮ್ಯಾಟಿಕ್‌ ಅಪ್ರೋಚ್‌ ಟುವರ್ಡ್ಸ್‌ ಹೆಲ್ತ್‌ ಆಫ್‌ ವುಮೆನ್‌, ಚಿಲ್ಡ್ರನ್‌ ಅಂಡ್‌ ಅನೀಮಿಯಾ) ಕಾರ್ಯಕ್ರಮವನ್ನು ರೂಪಿಸಿದ್ದವು. 2017ರ ಸೆಪ್ಟೆಂಬರ್‌ನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟೆಂಬರ್‌ನಿಂದ 2018ರ ಮಾರ್ಚ್‌ವರೆಗೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಕಲೆಹಾಕಿದ್ದು, ರಕ್ತಹೀನತೆ ಹೊಂದಿರುವ ಗರ್ಭಿಣಿಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಕಂಡುಬಂದಿದೆ.

ಏನಿದು ‘ಸತ್ವ’?: ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣವು ರಾಜ್ಯ ಸರಾಸರಿಗಿಂತ ಕಡಿಮೆ ಇದ್ದರೂ, ಗರ್ಭಿಣಿಯರು ಮತ್ತು ಮಕ್ಕಳು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುವ ಪ್ರಮಾಣ ಹೆಚ್ಚಿದೆ. ಬಹುತೇಕ ರೋಗಗಳಿಗೆ ರಕ್ತಹೀನತೆಯೇ ಕಾರಣ ಎಂಬುದು ವಿಶ್ಲೇಷಣೆಯಿಂದ ತಿಳಿದು ಬಂದಿತ್ತು. ಹಾಗಾಗಿ, ರಕ್ತಹೀನತೆಯನ್ನೇ ಗುರಿಯಾಗಿಸಿಕೊಂಡು ವಿಶಿಷ್ಟ ಯೋಜನೆಯನ್ನು ರೂಪಿಸಲಾಗಿತ್ತು.

(ಸತ್ವ ಲೋಗೋ)

‘ಗರ್ಭಿಣಿಯರು ಮತ್ತು ಮಕ್ಕಳಲ್ಲಿ ರಕ್ತಹೀನತೆಯನ್ನು ಪತ್ತೆ ಹಚ್ಚುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ರಕ್ತದಲ್ಲಿರುವ ಹಿಮೋಗ್ಲೋಬಿನ್‌ (ಎಚ್‌ಬಿ) ಪ್ರಮಾಣ ಪತ್ತೆ ಮಾಡಲು ಜಿಲ್ಲೆಯಲ್ಲಿ ಏಕರೂಪದ ಪರೀಕ್ಷಾ ವ್ಯವಸ್ಥೆ ಮಾಡಿದ್ದೇವೆ. ‘ಹಿಮಕ್ಯೂ’ ಎಂಬ ಯಂತ್ರದ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ. ನಮಗೆ ಸುಮಾರು 100 ಯಂತ್ರಗಳು ಬೇಕಿತ್ತು. ಜೀವನ್‌ ಜ್ಯೋತಿ ಟ್ರಸ್ಟ್‌ 10 ಯಂತ್ರಗಳನ್ನು ನೀಡಿದ್ದರೆ, ಉಳಿದವನ್ನು ಇಲಾಖೆವತಿಯಿಂದ ಪೂರೈಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಸ್ಥಳೀಯ ದಾದಿಯರ ಕೈಗೆ ಯಂತ್ರಗಳನ್ನು ಕೊಟ್ಟಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಚ್‌.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಕ್ತಹೀನತೆ ಇರುವುದು ಪತ್ತೆಯಾದರೆ, ಪ್ರತ್ಯೇಕ ‘ಸತ್ವ’ ಕಾರ್ಡ್‌ ಮಾಡಿಸಿ ಅವರ ಆರೋಗ್ಯದ ಮೇಲೆ ಸತತ ನಿಗಾ ಇಡಲಾಗುತ್ತದೆ. ಹಿಮೋಗ್ಲೋಬಿನ್‌ (ಎಚ್‌ಬಿ) ಪ್ರಮಾಣ ಕಡಿಮೆ ಇದ್ದವರಿಗೆ ಈ ಹಿಂದೆ ಸರ್ಕಾರದಿಂದ ‘ಫೆರಸ್‌ ಸಲ್ಫೇಟ್‌’ ಎಂಬ ಕಬ್ಬಿಣದ ಅಂಶದ ಮಾತ್ರೆ ಕೊಡುತ್ತಿದ್ದೆವು. ಈ ಕಾರ್ಯಕ್ರಮದ ಅಡಿಯಲ್ಲಿ ‘ಫೆರಸ್ ಫ್ಯೂಮರೇಟ್‌’ ಎಂಬ ಮಾತ್ರೆಯನ್ನು ಕೊಡುತ್ತಿದ್ದೇವೆ. ಜೀವನ್‌ ಜ್ಯೋತಿ ಟ್ರಸ್ಟ್‌ ಈ ಮಾತ್ರೆ ಪೂರೈಸುತ್ತಿದೆ’ ಎಂದು ಅವರು ವಿವರಿಸಿದರು.

‘ಇದಲ್ಲದೇ ಸುಕ್ರೋಸ್‌ ಇಂಜೆಕ್ಷನ್‌, ರಕ್ತ ನೀಡುವುದು, ನಿಯಮಿತ ತಪಾಸಣೆ ಮಾಡುವುದರ ಮೂಲಕ ಗರ್ಭಿಣಿಯರ ಆರೋಗ್ಯದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಕಾರ್ಯಕ್ರಮ ಜಾರಿಗೊಳಿಸುವುದಕ್ಕೂ ಮುನ್ನ ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು’ ಎಂದು ಅವರು ಹೇಳಿದರು.

ರಕ್ತಹೀನತೆ ಗಂಭೀರ ಸಮಸ್ಯೆ

ಗರ್ಭಿಣಿಯರಲ್ಲಿ ಕಂಡು ಬರುವ ಹಲವು ಆರೋಗ್ಯ ಸಮಸ್ಯೆಗಳಿಗೆ ರಕ್ತಹೀನತೆಯೇ ಕಾರಣ ಎಂದು ವೈದ್ಯರು ಹೇಳುತ್ತಾರೆ.

ರಕ್ತಹೀನತೆ ಇದ್ದರೆ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಕಡಿಮೆ ತೂಕದ ಮಗು ಹುಟ್ಟುವ ಸಾಧ್ಯತೆ ಇರುತ್ತದೆ. ಗರ್ಭಪಾತ ಆಗುವ ಅಪಾಯವೂ ಜಾಸ್ತಿ. ತಾಯಿ–ಮಗುವಿನ ಮರಣಕ್ಕೂ ಇದು ಕಾರಣವಾಗುತ್ತದೆ.

‘ಗರ್ಭಿಣಿಯರ ರಕ್ತದಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ 11ರಿಂದ 14 ಗ್ರಾಂ ನಡುವೆ ಇದ್ದರೆ ಯಾವುದೇ ಸಮಸ್ಯೆ ಇಲ್ಲ. 11ಕ್ಕಿಂತ ಕಡಿಮೆ ಇದ್ದರೆ ಚಿಕಿತ್ಸೆ ಅಗತ್ಯ’ ಎಂದು ಹೇಳುತ್ತಾರೆ ಡಾ.ಕೆ.ಎಚ್‌. ಪ್ರಸಾದ್‌.

* ಜಿಲ್ಲೆಯಲ್ಲಿರುವ ಮಹಿಳೆಯರ ಸಂಖ್ಯೆ – 5 ಲಕ್ಷ

* ಜಿಲ್ಲೆಯಲ್ಲಿ ಪ್ರತಿ ವರ್ಷ ಗರ್ಭಿಣಿಯರಾಗುವ ಮಹಿಳೆಯರ ಸರಾಸರಿ ಸಂಖ್ಯೆ – 13,000

‘ಸತ್ವ’ದ ಫಲಿತಾಂಶ ಸಕಾರಾತ್ಮಕವಾಗಿದೆ. ಇದರಿಂದಾಗಿ ರಕ್ತಹೀನತೆಯ ಸಮಸ್ಯೆ ದೂರವಾಗಲಿದೆ.

– ಡಾ.ಕೆ.ಎಚ್‌.ಪ್ರಸಾದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಚಾಮರಾಜನಗರ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !