ಗಂಗೆ ಉಳಿಸಿ, ಸ್ವಚ್ಛಗೊಳಿಸಿ: ಪೇಜಾವರ ಶ್ರೀಗಳ ಆಗ್ರಹ

6
ಗಂಗೆ ಧ್ವನಿ ಎತ್ತಿದ ಪೂರ್ಣ ಪ್ರಮತಿ ವಿದ್ಯಾರ್ಥಿಗಳು

ಗಂಗೆ ಉಳಿಸಿ, ಸ್ವಚ್ಛಗೊಳಿಸಿ: ಪೇಜಾವರ ಶ್ರೀಗಳ ಆಗ್ರಹ

Published:
Updated:
Deccan Herald

ಬೆಂಗಳೂರು: ಗಂಗಾ ನದಿಯ ಉಳಿವಿಗಾಗಿ ಮತ್ತು ಅದರ ಸ್ವಚ್ಛತೆಗಾಗಿ ಯತಿಗಳು, ಶಾಲಾ ವಿದ್ಯಾರ್ಥಿಗಳು ಮತ್ತು ಪರಿಸರ ತಜ್ಞರು ಒಂದಾಗಿ ಮಂಗಳವಾರ ಗಾಂಧಿ ಪ್ರತಿಮೆ ಬಳಿ ಪ್ರಾರ್ಥನಾ ಸಭೆ ನಡೆಸಿದರು.

ನಗರದ ಪೂರ್ಣಪ್ರಮತಿ ಶಾಲೆಯ ವಿದ್ಯಾರ್ಥಿಗಳ ಜೊತೆ ಉಡುಪಿಯ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಸೋಸಲೆ ವಾದಿರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಗಂಗೆಯ ಪರವಾಗಿ ಧ್ವನಿ ಎತ್ತಿದರು. ರಾಜಕಾರಣಿಗಳು ಗಂಗೆಯನ್ನು ಉಳಿಸುವ ಬಗ್ಗೆ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಗಂಗಾನದಿಗೆ 32 ಕಡೆಗಳಲ್ಲಿ ಅಣೆಕಟ್ಟೆಗಳ ನಿರ್ಮಾಣ ಆಗುತ್ತಿದ್ದು. ಇದನ್ನು ತಡೆಯುವ ಮೂಲಕ ಗಂಗಾ ನದಿಯನ್ನು ಉಳಿಸಬೇಕು ಎಂದು ಹರಿದ್ವಾರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾನಂದ ಸ್ವಾಮೀಜಿಯವರಿಗೆ ನೈತಿಕ ಬೆಂಬಲ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

‘ಗಂಗಾ ತಪಸ್ಸು’ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವೇಶ ತೀರ್ಥ ಸ್ವಾಮೀಜಿ, ‘ಗಂಗಾ ಮಾತೆ ಬರಿ ನೀರಲ್ಲ. ಅವಳು ಅಮೃತವನ್ನು ನೀಡುವವಳು. ಅವಳಿಗೆ ಯಾವುದೇ ರೀತಿಯ ಆಘಾತ ಆಗಬಾರದು. ತಾಯಿಯ ರಕ್ಷಣೆ, ಅವಳ ಸೇವೆ ನಮ್ಮೆಲ್ಲರ ಕರ್ತವ್ಯವೂ ಆಗಿದೆ’ ಎಂದರು.

‘ಗಂಗೆಯ ಹರಿವಿಗೆ, ಅವಳ ಕುಣಿತಕ್ಕೆ ಧಕ್ಕೆ ಬರಬಾರದು. ಈ ಮಕ್ಕಳ ಪ್ರಾರ್ಥನೆಯನ್ನು ಗಮನಿಸಿ ಭಗವಂತ ಪ್ರಕೃತಿಗೆ ಹಾನಿ ಆಗದಂತೆ ನೋಡಿಕೊಳ್ಳಲಿ. ಇವತ್ತು ಗಾಂಧಿ ಜಯಂತಿ. ಗಾಂಧಿಜಿಯವರಿಗೆ ಗಂಗೆ ಎಂದರೆ ಬಹಳ ಪ್ರೀತಿ ಇತ್ತು’ ಎಂದೂ ಸ್ವಾಮೀಜಿ ತಿಳಿಸಿದರು.

‘ಕೃಷ್ಣ ಭಕ್ತಿ ಪೂರ್ವಕವಾಗಿ ಗೋವರ್ಧನ ಪೂಜೆ ಮಾಡಿದ. ನಾವೀಗ ಗಂಗೆಯ ಪೂಜೆ ಮಾಡಬೇಕಿದೆ. ದೇಶದ ಭಾಗ್ಯ ವಿಧಾತನಾದ ಕೃಷ್ಣ ನಮ್ಮ ಪ್ರಕೃತಿಗೆ ಹಾನಿಯಾಗದಂತೆ ರಕ್ಷಿಸಲು ರಾಜಕಾರಣಿಗಳಿಗೆ ಒಳ್ಳೆಯ ಬುದ್ಧಿ ಕೊಡಲಿ’ ಎಂದು ಪ್ರಾರ್ಥಿಸೋಣ ಎಂದರು.

ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಮಾತನಾಡಿ, ‘ನದಿ, ಕೆರೆ, ಕುಂಟೆಗಳು ಭೂಮಿಯ ಅತ್ಯಮೂಲ್ಯ ಅಂಗ. ಆದ್ದರಿಂದಲೇ ಕಿಡ್ನಿ ಆಫ್‌ ಮದರ್‌ ಅರ್ಥ್‌ ಎನ್ನುತ್ತಾರೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಕೊಳೆಯನ್ನು ತುಂಬಿ ಅವುಗಳನ್ನು ಹಾಳು ಮಾಡಲಾಗಿದೆ ಮನುಷ್ಯನ ಕಿಡ್ನಿ ಹಾಳಾದರೆ ಮರು ಜೋಡಣೆ ಮಾಡಬಹುದು. ಪ್ರಕೃತಿ ಕಿಡ್ನಿ ಹಾಳಾದರೆ ಅದರ ಮರು ಜೋಡಣೆ ಸಾಧ್ಯವಿಲ್ಲ. ಯಾರಾದರೂ ಒಂದು ನದಿಯನ್ನು ಸೃಷ್ಟಿಸಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

ವಿದ್ಯಾಶ್ರೀಶ ಸ್ವಾಮೀಜಿ ಮಾತನಾಡಿ, ಶುದ್ಧವಾದ ನೀರು ಇನ್ನು ಮುಂದೆ ದುರ್ಲಭ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ನದಿಯ ನಾಶಕ್ಕೆ ಸರ್ಕಾರಗಳೇ ಮುಂದಾಗಿರುವುದು ಶೋಚನೀಯ. ಪ್ರಕೃತಿ ನಾಶ ಮಾಡಿದರೆ ಏನಾಗಬಹುದು ಎಂಬುದಕ್ಕೆ ಕೇರಳವೇ ಸಾಕ್ಷಿ. ಗಂಗೆಯ ವಿಚಾರದಲ್ಲಿ ಸಾನಂದ ಸ್ವಾಮೀಜಿಯವರ ಬೇಡಿಕೆಗೆ ಸರ್ಕಾರ ಬೆಲೆ ಕೊಡಲೇ ಬೇಕು. ಆದರೆ, ಸರ್ಕಾರ ಕಿವಿಗೊಡದೇ ಇರುವುದು ದುಃಖದ ಸಂಗತಿ ಎಂದರು.

 

 

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !