ಮಂಗಳವಾರ, ಡಿಸೆಂಬರ್ 10, 2019
26 °C
ಮಲೆನಾಡು ಉಳಿಸಿ ಹೋರಾಟ ಸಮಿತಿಯ ಸಭೆ l ಪಶ್ಚಿಮ ಘಟ್ಟ ಸಂರಕ್ಷಣಾ ವರದಿಗಳ ಚರ್ಚಿಸಿದ ಪರಿಸರವಾದಿಗಳು

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಂದಲೇ ಕಾಡು ನಾಶ: ಪರಿಸರವಾದಿಗಳ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೇ(ಐಎಫ್‌ಎಸ್‌) ಪಶ್ಚಿಮ ಘಟ್ಟ ನಾಶವಾಗುತ್ತಿದೆ’ ಎಂಬ ಬಹುಮತದ ಅಭಿಪ್ರಾಯವನ್ನು ಪರಿಸರ ಪ್ರೇಮಿಗಳು, ಪರಿಸರವಾದಿಗಳು ಮತ್ತು ಯೋಜನಾ ನಿರಾಶ್ರಿತರು ವ್ಯಕ್ತಪಡಿಸಿದರು.

ಮಲೆನಾಡು ಉಳಿಸಿ ಹೋರಾಟ ಸಮಿತಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಮಾಧವ ಗಾಡ್ಗೀಳ್‌ ಮತ್ತು ಕಸ್ತೂರಿ ರಂಗನ್‌ ವರದಿಗಳ ಅನುಷ್ಠಾನದಿಂದ ಪಶ್ಚಿಮಘಟ್ಟ ಮತ್ತು ಮಲೆನಾಡನ್ನು ರಕ್ಷಿಸಲು ಸಾಧ್ಯವೇ?’ ಎಂಬ ವಿಷಯದ ಕುರಿತ ಸಭೆಯಲ್ಲಿ ಈ ರೀತಿಯ ಅಭಿಪ್ರಾಯ ಮೂಡಿ ಬಂತು.

‘ಐಎಫ್‌ಎಸ್‌ ಅಧಿಕಾರಿಗಳು ಪರಿಜ್ಞಾನವಿಲ್ಲದೆ ಹೂ–ಹಣ್ಣು ಬಿಡದ, ಪ್ರಾಣಿಗಳು ತಿನ್ನಲಾಗದ ತಪ್ಪಲು ಇರುವ ಗಿಡಗಳನ್ನು ಘಟ್ಟ ಪ್ರದೇಶದಲ್ಲಿ ಬೆಳೆಸಿದರು. ಅದನ್ನೇ ಅರಣ್ಯೀಕರಣವೆಂದು ಪ್ರತಿಪಾದಿಸಿದರು. ಅಕೇಷಿಯಾ ಗಿಡಗಳು ಪರಿಸರಕ್ಕೆ ಮಾರಕವಾಗಿವೆ. ಈ ಗಿಡಗಳ ನಾಟಿಯ ಹಿಂದೆ ಟಿಂಬರ್‌ ಮಾಫಿಯಾದ ದುರಾಸೆಯಿದೆ’ ಎಂಬ ಮಾತನ್ನು ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಆಡಿದಾಗ, ಬಹುತೇಕರು ಸಹಮತ ವ್ಯಕ್ತಪಡಿಸಿದರು. 

‘ಸರ್ಕಾರಗಳೇ ಘಟ್ಟದಲ್ಲಿನ ಬಂಡೆಗಳನ್ನು ಪುಡಿಮಾಡಿ ಎಂ–ಸ್ಯಾಂಡ್‌ ತಯಾರಿಸಲು ಅನುಮತಿ ನೀಡುತ್ತಿವೆ. ಅಕೇಷಿಯಾ, ಸಾಗುವಾನೆ, ಮ್ಯಾಂಜಿಯಮ್‌ ಮರಗಳು ನಮ್ಮ ಪರಿಸರಕ್ಕೆ ಬೇಕಿರಲಿಲ್ಲ. ಅವುಗಳಿಂದಾಗಿಯೇ ವನ್ಯಜೀವಿಗಳಿಗೆ ಆಹಾರ ಸಿಗುತ್ತಿಲ್ಲ. ಹಾಗಾಗಿ ಜೀವಿಗಳು ಅಡಿಕೆ, ತೆಂಗು, ಬಾಳೆ ತೋಟಕ್ಕೆ ಲಗ್ಗೆ ಇಡುತ್ತಿವೆ. ಈಗಿರುವ ಅರಣ್ಯ ಹಕ್ಕು ಕಾಯ್ದೆಯನ್ನೆ ಸರಿಯಾಗಿ ಅನುಷ್ಠಾನಕ್ಕೆ ತಂದಿದ್ದರೆ, ಇಂತಹ ಬಹುತೇಕ ಸಮಸ್ಯೆಗಳನ್ನು ತಡೆಯಬಹುದಿತ್ತು’ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಹಿರಿಯ ವಕೀಲ ಎ.ಕೆ.ಸುಬ್ಬಯ್ಯ, ‘ಮಲೆನಾಡಿನಲ್ಲಿ ರಸ್ತೆ, ಶಾಲೆ, ಆಸ್ಪತ್ರೆ ನಿರ್ಮಾಣ, ವಿದ್ಯುತ್‌ ಸಂಪರ್ಕದ ಅಭಿವೃದ್ಧಿಯು ಆಗಬೇಕು. ಪರಿಸರವು ಉಳಿಯಬೇಕು' ಎಂದು ಸಲಹೆ ನೀಡಿದರು.

‘ಇಂತಹ ವರದಿಗಳ ಕುರಿತು ಆದೇಶ ಹೊರಡಿಸುವ ನ್ಯಾಯಾಧೀಶರಿಗೆ ಹವಾನಿಯಂತ್ರಿತ ಕಾರು, ಮನೆಗಳೇ ಬೇಕು. ಮೂಲಸೌಲಭ್ಯಗಳನ್ನು ತ್ಯಜಿಸಲು ಅವರು ಸಿದ್ಧರಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ಹೋರಾಟ ಸಮಿತಿ ಸದಸ್ಯ ಕಲ್ಕುಳಿ ವಿಠ್ಠಲ ಹೆಗ್ಡೆ, ‘ಹೊರಗಿನಿಂದ ಬಂದವರು ಸಿದ್ಧಪಡಿಸಿರುವ ವರದಿಗಳು ನಮಗೆ ಬೇಕಾಗಿಲ್ಲ. ನಗರವಾಸಿಗಳ ವಿಲಾಸಿ ಜೀವನದಿಂದ ಕಾಡಿನ ಸಂಪನ್ಮೂಲ ಕರಗುತ್ತಿದೆ. ಕಾಡಿನೊಂದಿಗೆ ಬದುಕಲು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ. ರಾಷ್ಟ್ರೀಯ ಉದ್ಯಾನಗಳ ಘೋಷಣೆಯಿಂದ ನಿರ್ಗತಿಕರಾದವರಿಗೆ ಒಂದಿಷ್ಟು ಜಮೀನಿನ ಹಕ್ಕುಪತ್ರ ನೀಡಿ’ ಎಂದು ಆಗ್ರಹಿಸಿದರು.

‘ಅಧಿಕಾರಿಗಳನ್ನು ಶಿಕ್ಷಿಸಿ’

‘ಕೆಲವು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿಯಿಂದಾಗಿಯೇ ಘಟ್ಟ ಪ್ರದೇಶ ನಾಶವಾಗುತ್ತಿದೆ. ಜರ್ಮನಿಯಲ್ಲಿ ಒಂದು ಮರವನ್ನು ಅಕ್ರಮವಾಗಿ ಕಡಿದರೆ, ಅದನ್ನು ಕಡಿದವನಿಗಿಂತ ಹೆಚ್ಚಿನ ಶಿಕ್ಷೆಯನ್ನು ಆ ಪ್ರದೇಶದ ಅರಣ್ಯ ಅಧಿಕಾರಿಗೆ ನೀಡುತ್ತಾರೆ. ಕಾರಣ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಮರ ನಾಶವಾಯಿತು ಎಂಬುದು ಅಲ್ಲಿನ ಸರ್ಕಾರದ ವಾದ. ಅಂತಹ ನಿಯಮವನ್ನು ನಮ್ಮ ದೇಶದಲ್ಲೂ ಪರಿಚಯಿಸಬೇಕು’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್‌.ಟ್ಯಾಗೂರ್‌ ಒತ್ತಾಯಿಸಿದರು.

**

ಕಸ್ತೂರಿ ರಂಗನ್‌ ವರದಿ ಹವಾನಿಯಂತ್ರಿಕ ಕೊಠಡಿಯಲ್ಲಿ ಕೂತು ಸಿದ್ಧಪಡಿಸಲಾಗಿದೆ. ಮಾಧವ ಗಾಡ್ಗೀಳ್‌ ವರದಿಯನ್ನು ಕ್ಷೇತ್ರ ಅಧ್ಯಯನದಿಂದ ರಚಿಸಲಾಗಿದೆ
– ಶ್ರೀಹರ್ಷ ಹೆಗ್ಗಡೆ, ಪರಿಸರ ಪ್ರೇಮಿ

**

ಮಲೆನಾಡಿಗೆ ಪೂರಕವಾದ ಕೃಷಿಗೆ ಅವಕಾಶ ನೀಡಿ. ಇಲ್ಲದಿದ್ದರೆ, ಸರ್ಕಾರದಿಂದ ಕಾಡನ್ನು ರಕ್ಷಿಸುವ ಹೋರಾಟ ಮುಂದುವರಿಸುತ್ತೇವೆ
– ಕಲ್ಕುಳಿ ವಿಠ್ಠಲ ಹೆಗ್ಡೆ, ಹೋರಾಟ ಸಮಿತಿ ಸದಸ್ಯ

**

ಇಂತಹ ವರದಿಗಳ ಕುರಿತು ಆದೇಶಗಳನ್ನು ಹೊರಡಿಸುವ ನ್ಯಾಯಾಧೀಶರಿಗೆ ಹವಾನಿಯಂತ್ರಿತ ಕಾರು, ಮನೆಗಳೇ ಬೇಕು. ಸರಿಯಾದ ರಸ್ತೆ, ವಿದ್ಯುಚ್ಛಕ್ತಿಯಂತ ಮೂಲಸೌಲಭ್ಯಗಳನ್ನು ತ್ಯಜಿಸಲು ನ್ಯಾಯಾಧೀಶರು ಸಿದ್ಧರಿದ್ದಾರೆಯೇ?
– ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು