ರಾಜ್ಯದ ಅದಿರು ಪೆಲೆಟ್‌ ರಫ್ತಿನ ನಿಲುವು ಪ್ರಕಟಿಸಿ: ‘ಸುಪ್ರೀಂ’ ಸೂಚನೆ

7

ರಾಜ್ಯದ ಅದಿರು ಪೆಲೆಟ್‌ ರಫ್ತಿನ ನಿಲುವು ಪ್ರಕಟಿಸಿ: ‘ಸುಪ್ರೀಂ’ ಸೂಚನೆ

Published:
Updated:

ನವದೆಹಲಿ: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣದ ಅದಿರಿನಿಂದ ತಯಾರಿಸಲಾದ ಪೆಲೆಟ್‌ಗಳ ರಫ್ತಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿ ಸ್ಪಷ್ಟ ನಿಲುವನ್ನು ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಆರ್ಥಿಕವಾಗಿ ಲಾಭದಾಯಕವಾಗಿರುವ ರಫ್ತು ಪ್ರಕ್ರಿಯೆಗೆ ಅನುಮತಿ ಕೋರಿರುವ ದಕ್ಷಿಣ ವಿಭಾಗದ ಭಾರತೀಯ ಖನಿಜೋದ್ಯಮ ಒಕ್ಕೂಟ (ಫಿಮಿ)ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್‌ ಗೋಗೊಯ್‌ ನೇತೃತ್ವದ ತ್ರಿಸದಸ್ಯ ಪೀಠವು, ಕೂಡಲೇ ಈ ಕುರಿತ ಅಭಿಪ್ರಾಯ ಘೋಷಿಸುವಂತೆ ಕೇಂದ್ರದ ಉಕ್ಕು ಸಚಿವಾಲಯಕ್ಕೆ ತಿಳಿಸಿತು.

ಸುಪ್ರೀಂ ಕೋರ್ಟ್‌ ನಿರ್ದೇಶಿತ ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿರುವ ವರದಿಯಲ್ಲಿ, ಪೆಲೆಟ್‌ಗಳ ರಫ್ತಿಗೆ ಸಂಬಂಧಿಸಿದ ನಿಷೇಧವನ್ನು ತೆರವುಗೊಳಿಸಬಹುದು ಎಂದು ಅಭಿಪ್ರಾಯಪಡಲಾಗಿದೆ ಎಂದು ಫಿಮಿ ಪರ ವಕೀಲ ಮುಕುಲ್‌ ರೋಹಟಗಿ ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ರಾಜ್ಯದ ಗಣಿಗಳಿಂದ ತಯಾರಿಸುವ ಪೆಲೆಟ್‌ಗಳ ರಫ್ತಿಗೆ ನಿಷೇಧ ಹೇರಿದ್ದರಿಂದ ತಯಾರಕರು ಬೇರೆ ರಾಜ್ಯಗಳಿಂದ ಅದಿರು ಖರೀದಿಸುತ್ತಿದ್ದಾರೆ. ಇದರಿಂದ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂದು ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಅರ್ಜಿದಾರ ಸ್ವಯಂಸೇವಾ ಸಂಸ್ಥೆಯಾದ ಧಾರವಾಡದ ಸಮಾಜ ಪರಿವರ್ತನಾ ಸಮುದಾಯಕ್ಕೆ ಸೂಚಿಸಿದ ಪೀಠ, ನಾಲ್ಕು ವಾರಗಳ ನಂತರ ಸ್ಪಷ್ಟನೆ ನೀಡುವಂತೆ ಫಿಮಿಗೆ ನಿರ್ದೇಶನ ನೀಡಿತು.

‘ಸಿ’ ಕೆಟಗರಿ ಗಣಿಗಳ ಹರಾಜು ಪ್ರಕ್ರಿಯೆ ಸೆ. 4ರಿಂದ ಆರಂಭವಾಗಲಿದೆ ಎಂಬ ಕರ್ನಾಟಕ ಸರ್ಕಾರದ ಪರ ವಕೀಲ ರಾಜು ರಾಮಚಂದ್ರನ್‌ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಪುನರ್ವಸತಿ ಮತ್ತು ಪುನರುಜ್ಜೀವನ (ಆರ್‌ ಅಂಡ್‌ ಆರ್‌) ಕಾಮಗಾರಿ ಪೂರ್ಣಗೊಳಿಸಿದ್ದಾಗಿ ತಿಳಿಸಿ ಖಾತರಿ ಠೇವಣಿಯನ್ನು ಮರಳಿಸುವಂತೆ ಕೋರಿರುವ 10 ಗಣಿ ಗುತ್ತಿಗೆ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ಸಿಇಸಿಗೆ ಸೂಚಿಸಿತು.

ಗಣಿಯಲ್ಲಿನ 13.20 ಹೆಕ್ಟೆರ್‌ ಪ್ರದೇಶಕ್ಕೆ ಅರಣ್ಯ ಅನುಮತಿ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಖನೀಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ಕ್ಕೂ ಇದೇ ವೇಳೆ ಸೂಚಿಸಿದ ನ್ಯಾಯಮೂರ್ತಿಗಳಾದ ಅಭಯ್‌ ಮನೋಹರ ಸಪ್ರೆ ಹಾಗೂ ನವೀನ್‌ ಸಿನ್ಹಾ ಅವರನ್ನು ಒಳಗೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 24ಕ್ಕೆ ಮುಂದೂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !