ಶುಕ್ರವಾರ, ನವೆಂಬರ್ 22, 2019
26 °C

ಅನರ್ಹ ಶಾಸಕರ ಅರ್ಜಿ ವಿಚಾರಣೆ; ಆತುರ ಏಕೆ -‘ಸುಪ್ರೀಂ’ ಪ್ರಶ್ನೆ

Published:
Updated:

ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ 17 ಅನರ್ಹರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಮತ್ತೆ ನಿರಾಕರಿಸಿರುವ ಸುಪ್ರೀಂ ಕೋರ್ಟ್‌, ‘ಇದಕ್ಕಾಗಿ ಆತುರ ಏಕೆ’ ಎಂದು ಪ್ರಶ್ನಿಸಿದೆ.

ಅನರ್ಹರ ಪರ ವಕೀಲರಾದ ರಾಕೇಶ್‌ ದ್ವಿವೇದಿ, ಅನುಪಮ್‌ ಲಾಲ್‌ದಾಸ್‌ ಹಾಗೂ ವಿ.ಗಿರಿ ಅವರು ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಎದುರು ಗುರುವಾರ ಪ್ರಕರಣದ ತ್ವರಿತ ವಿಚಾರಣೆ ಕೋರಿ ಮೌಖಿಕವಾಗಿ ಮನವಿ ಮಾಡಿದರು. ಆದರೆ, ಮನವಿಯನ್ನು ಪುರಸ್ಕರಿಸದ ಪೀಠವು ‘ಈ ಮೇಲ್ಮನವಿ ವಿಚಾರಣೆ ಪಟ್ಟಿಯಾಗಲಿ’ ಎಂದು ಹೇಳಿತು.

ಸೆಪ್ಟೆಂಬರ್‌ 11ಕ್ಕೆ ವಿಚಾರಣೆಯನ್ನು ನಿಗದಿ ಮಾಡಿದ್ದ ಸುಪ್ರೀಂ ಕೋರ್ಟ್‌, ನಂತರ ಪಟ್ಟಿಯಿಂದ ತೆಗೆದುಹಾಕಿತ್ತು. ಹಾಗಾಗಿ ಅನರ್ಹರ ಪರ ವಕೀಲರು ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ ಹಾಗೂ ಅಜಯ್‌ ರಸ್ತೋಗಿ ಅವರನ್ನೂ ಒಳಗೊಂಡಿರುವ ಪೀಠದ ಎದುರು ತುರ್ತು ವಿಚಾರಣೆ ಕೋರಿ ಮತ್ತೆ ಮನವಿ ಸಲ್ಲಿಸಿದರು.

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಜನ ಜುಲೈ 29 ಹಾಗೂ ಆಗಸ್ಟ್‌ 1ರಂದು ಮೇಲ್ಮನವಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)