ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ನೌಕರರ ಮುಂಬಡ್ತಿ: ರಾಜ್ಯ ಸರ್ಕಾರದ ಆದೇಶಕ್ಕೆ‌ ತಡೆ

Last Updated 1 ಮಾರ್ಚ್ 2019, 17:36 IST
ಅಕ್ಷರ ಗಾತ್ರ

ನವದೆಹಲಿ:ಬಡ್ತಿ ಮೀಸಲಾತಿ ಕಾಯ್ದೆ ರದ್ದತಿಯಿಂದ ಹಿಂಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಗಳ ನೌಕರರಿಗೆ ಮುಂಬಡ್ತಿಗೆ ಅನುಕೂಲ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

‘ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ನೂತನ ಕಾಯ್ದೆ ಜಾರಿಗೊಳಿಸಿರುವ ಸರ್ಕಾರದ ಆದೇಶಕ್ಕೆ ತಡೆ ಕೋರಿ ಸಾಮಾನ್ಯ ನೌಕರರ ಪರ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ಈ ತಡೆಯಾಜ್ಞೆ ನೀಡಿದೆ.

ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆ ರದ್ದುಪಡಿಸಿ 2017ರ ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ್ದ ಆದೇಶದಿಂದಾಗಿ ಹಿಂಬಡ್ತಿ ಪಡೆದಿರುವ ಎಸ್‌.ಸಿ, ಎಸ್‌.ಟಿ ನೌಕರರ ಹುದ್ದೆ ಮತ್ತು ವೇತನ ಶ್ರೇಣಿಯನ್ನು ಹಿಂಬಡ್ತಿ ದಿನದಿಂದ ಪೂರ್ವಾನ್ವಯ ಆಗುವಂತೆ ನಿಯೋಜಿಸಿ ಸರ್ಕಾರ ಕಳೆದ ತಿಂಗಳ 27ರಂದು ಆದೇಶ ಹೊರಡಿಸಿತ್ತು.

‘ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯು ಅಂತಿಮ ಹಂತ ತಲುಪಿದೆ. ಈ ಸಂದರ್ಭದಲ್ಲಿ ಸರ್ಕಾರವು ನೂತನ ಕಾಯ್ದೆ ಜಾರಿಗೆ ತಂದಿದ್ದು ಸರಿಯಲ್ಲ’ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

‘ಸರ್ಕಾರದ ಕ್ರಮ ಖಂಡಿಸಿ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಅಡ್ವೋಕೇಟ್‌ ಜನರಲ್‌ ಅವರೇ ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯು ಈ ನ್ಯಾಯಾಲಯದ ಸಾಂಸ್ಥಿಕ ಪ್ರತಿಷ್ಠೆಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ಯಥಾಸ್ಥಿತಿ ಬದಲಿಸಕೂಡದು’ ಎಂದು ಪೀಠ ಹೇಳಿತು.

ಅಲ್ಲದೆ, ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ಹಂತದ ವಿಚಾರಣೆಯನ್ನು ಮಾರ್ಚ್ 13ಕ್ಕೆ ಬದಲು ಮಾರ್ಚ್‌ 6ಕ್ಕೆ ನಿಗದಿಗೊಳಿಸಿತು.

ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿದ್ದಲ್ಲದೆ, ಯಥಾಸ್ಥಿತಿ ಕಾಪಾಡುವುದಾಗಿ ನೀಡಿದ್ದ ಹೇಳಿಕೆಯನ್ನು ಉಲ್ಲಂಘಿಸಿರುವ ಕರ್ನಾಟಕ ಸರ್ಕಾರ ಏಕಪಕ್ಷೀಯ ಕ್ರಮ ಕೈಗೊಂಡಿದೆ ಎಂದು ಅರ್ಜಿದಾರರ ಪರ ವಕೀಲ ರಾಜೀವ್ ಧವನ್ ದೂರಿದರು.

ಹಿಂಬಡ್ತಿ ಪಡೆದಿದ್ದ ಅಧಿಕಾರಿಗಳೆಲ್ಲ ಸರ್ಕಾರದ ಆದೇಶದಿಂದಾಗಿ ಮತ್ತೆ ಮುಂಬಡ್ತಿ ಪಡೆಯಲಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳೂ ಈ ಆದೇಶದ ಲಾಭ ಪಡೆಯಲಿದ್ದಾರೆ ಎಂದು ಅವರು ನ್ಯಾಯಪೀಠಕ್ಕೆ ವಿವರಿಸಿದರು.

ಎಸ್‌.ಸಿ, ಎಸ್‌.ಟಿ ಸಿಬ್ಬಂದಿ ಎದುರಿಸುತ್ತಿದ್ದ ಸಮಸ್ಯೆಯ ನಿವಾರಣೆ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಇತರ ಸಿಬ್ಬಂದಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಅಲ್ಲದೆ, ಈ ಆದೇಶದ ಸಿಂಧುತ್ವವು ನ್ಯಾಯಾಲಯದ ಅಂತಿಮ ತೀರ್ಪನ್ನು ಅವಲಂಬಿಸಿದೆ ಎಂದು ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ಹೇಳಿದರು.

ಪ್ರಕರಣದ ವಿಚಾರಣೆ ಬಾಗಶಃ ಪೂರ್ಣಗೊಂಡಿರುವ ಈ ಹಂತದಲ್ಲಿ ನೂತನ ಕಾಯ್ದೆಗೆ ತಡೆ ನೀಡಬಾರದು. ಅಲ್ಲದೆ, ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ನೀಡಿದ್ದ ಮುಚ್ಚಳಿಕೆಯನ್ನು ಹಿಂಪಡೆಯುವುದಾಗಿ ಸರ್ಕಾರ ಮನವಿ ಮಾಡಿತ್ತು. ಜ್ಯೇಷ್ಠತಾ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವ ಸುದೀರ್ಘ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಾರಿಗೂ ಹಿಂಬಡ್ತಿ ನೀಡುವುದು ಸೂಕ್ತವಲ್ಲ. ಈಗಾಗಲೇ ಹಿಂಬಡ್ತಿ ಪಡೆದ ನೌಕರರು ಸಾಕಷ್ಟು ಸಮಸ್ಯೆ ಎದುರಿಸಿಯಾಗಿದೆ ಎಂದು ಎಸ್‌.ಸಿ, ಎಸ್‌.ಟಿ ನೌಕರರ ಪರ ವಕೀಲೆ ಇಂದಿರಾ ಜೈಸಿಂಗ್‌ ತಿಳಿಸಿದರು.

‘ಸರ್ಕಾರ ಗುಪ್ತವಾಗಿ ಆದೇಶ ಹೊರಡಿಸಿಲ್ಲ ಎಂಬುದು ನಮಗೆ ಅರ್ಥವಾಗುತ್ತದೆ. ಆದರೂ ಯಥಾಸ್ಥಿತಿ ಕಾಪಾಡದಿರುವುದು ಸರಿಯಲ್ಲ. ಇನ್ನು ಕೇವಲ ಎರಡು ಅಥವಾ ಮೂರು ವಾರಗಳಲ್ಲಿ ಪ್ರಕರಣದ ತೀರ್ಪೇ ಹೊರಬೀಳಲಿದೆ’ ಎಂದು ಹೇಳಿದ ಪೀಠ ಈ ತಿಂಗಳಲ್ಲೇ ತೀರ್ಪು ಪ್ರಕಟಿಸುವ ಸುಳಿವು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT