ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು?

ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಆಯೋಗದ ವರದಿ ಸಿದ್ಧ
Last Updated 18 ಜೂನ್ 2020, 21:03 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿರುವ ಮೀಸಲಾತಿ ಪ್ರಮಾಣ ಹೆಚ್ಚಿಸಲು ಇರುವ ಕಾನೂನಿನ ತೊಡಕು ನಿವಾರಣೆಗೆ ಮಾರ್ಗೋಪಾಯಗಳನ್ನು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್ ಆಯೋಗ ಕಂಡುಕೊಂಡಿದೆ.

ಪರಿಶಿಷ್ಟ ಜಾತಿಗೆ ಶೇ 2ರಷ್ಟು ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 4ರಷ್ಟು ಮೀಸಲಾತಿ ಹೆಚ್ಚಿಸುವ ಸಂಬಂಧ (ಸದ್ಯ ಪರಿಶಿಷ್ಟ ಜಾತಿಯವರಿಗೆ ಶೇ 15, ಪರಿಶಿಷ್ಟ ಪಂಗಡದವರಿಗೆ ಶೇ 3ರಷ್ಟು ಮೀಸಲಾತಿ ಇದೆ) ಅಧ್ಯಯನ ನಡೆಸಿ ವರದಿ ಸಲ್ಲಿಸಲು ನವೆಂಬರ್‌ನಲ್ಲಿ ಸರ್ಕಾರ ಆಯೋಗ ರಚನೆ ಮಾಡಿತ್ತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಶೇ 50ರಷ್ಟು ಮೀಸಲಾತಿ ಹಂಚಿಕೆಯನ್ನು ರಾಜ್ಯ ಸರ್ಕಾರ ಈಗಾಗಲೇ ಮಾಡಿದೆ. ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂ ಕೋರ್ಟ್‌ ಆದೇಶ ಇದೆ. ಇದನ್ನು ಮೀರಿ ಮೀಸಲಾತಿ ಏರಿಕೆ ಹೇಗೆ ಮಾಡಬೇಕು ಎಂಬುದು ಆಯೋಗಕ್ಕೆ ದೊಡ್ಡ ಸವಾಲಾಗಿತ್ತು.

ಈ ಹಿನ್ನೆಲೆಯಲ್ಲಿಯೇಕಾನೂನು ತಜ್ಞರಿಂದ ಸಂಶೋಧನೆಗಳನ್ನು ಆಯೋಗ ಮಾಡಿಸಿದೆ.ಹಿಂದುಳಿದ ವರ್ಗಗಳ ಬುಟ್ಟಿಗೆ ಕೈ ಹಾಕದೆ ಮೀಸಲಾತಿ ಪ್ರಮಾಣದ ಹೆಚ್ಚಳ ಹೇಗೆ ಮಾಡಬಹುದು ಎಂಬ ಶಿಫಾರಸುಗಳನ್ನು ಆಯೋಗ ಮಾಡುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಅವರು, ‘ಎಲ್ಲಾ ಪ್ರಶ್ನೆಗಳಿಗೂ ಕಾನೂನಿನ ಪರಿಮಿತಿಯಲ್ಲಿ ಆಯೋಗವು ಉತ್ತರ ಕಂಡುಕೊಂಡಿದೆ. ವರದಿಯಲ್ಲಿ ಈ ಎಲ್ಲವೂ ಅಡಕವಾಗಿರಲಿದೆ’ ಎಂದು ಹೇಳಿದರು.

‘850 ಲಿಖಿತ ಅಹವಾಲುಸ್ವೀಕರಿಸಲಾಗಿದೆ. 42 ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಕಲಬುರ್ಗಿ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ವಿಭಾಗ ಮಟ್ಟದ ಸಮಾಲೋಚನಾ ಸಭೆಗಳನ್ನು ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.ಸಂಗ್ರಹವಾದ ಮಾಹಿತಿಯನ್ನು ವಿಶ್ಲೇಷಣೆ ಮಾಡಲಾಗಿದ್ದು, ವರದಿ ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

‘ಲಾಕ್‌ಡೌನ್ ಇದ್ದರೂ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡೇ ಕೆಲಸ ಮಾಡಿದ್ದೇವೆ. ಸಂಶೋಧಕರು, ಕಾನೂನು ತಜ್ಞರು, ಆಯೋಗದ ಸಿಬ್ಬಂದಿ ಸಹಕಾರದಿಂದ ಕಾಲಮಿತಿಯಲ್ಲಿ ಅಧ್ಯಯನ ಪೂರ್ಣಗೊಳಿಸಲು ಸಾಧ್ಯವಾಯಿತು. ಮುಖ್ಯಮಂತ್ರಿ ಅವರು ಸಮಯ ನೀಡಿದರೆ ಈ ತಿಂಗಳ ಅಂತ್ಯದಲ್ಲೇ ವರದಿ ಸಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT