ಗುರುವಾರ , ಏಪ್ರಿಲ್ 15, 2021
19 °C
ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗಕ್ಕೆ ಸ್ವಾಮೀಜಿ, ಮುಖಂಡರ ಒತ್ತಾಯ

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಅಧ್ಯಯನ ವರದಿ ಕಾಲಮಿತಿಯಲ್ಲಿ ಸಲ್ಲಿಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಅಧ್ಯಯನ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ಆಯೋಗ ಕಾಲಮಿತಿಯಲ್ಲೇ ವರದಿ ಸಲ್ಲಿಸುವಂತೆ ಸಮುದಾಯಗಳ ಸ್ವಾಮೀಜಿಗಳು ಮತ್ತು ಮುಖಂಡರು ಒತ್ತಾಯಿಸಿದರು.

ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರೊಂದಿಗೆ ನಾಗಮೋಹನದಾಸ್ ಅವರು ಗುರುವಾರ ಸಮಾಲೋಚನಾ ಸಭೆ ನಡೆಸಿದರು.

ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು. ಈ ಕುರಿತ ವರದಿಯನ್ನು ನಿಗದಿತ ಅವಧಿಯೊಳಗೇ ಆಯೋಗವು ಸರ್ಕಾರಕ್ಕೆ ನೀಡಬೇಕು’ ಎಂದು ಮನವಿ ಮಾಡಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಎಲ್ಲರ ಹಣೆಬರಹವನ್ನು ಬ್ರಹ್ಮ ಬರೆಯುತ್ತಾನೆ ಎಂಬ ನಂಬಿಕೆ ಇದೆ. ಆದರೆ, ಈಗ ನಮ್ಮ ಹಣೆಬರಹವನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಬರೆಯಲಿದ್ದಾರೆ. ವಿಳಂಬವಾದರೂ ಸಮಗ್ರ ಅಧ್ಯಯನ ನಡೆಸಿ ಪರಿಪೂರ್ಣ ವರದಿ ನೀಡಬೇಕು. ಖಾಸಗಿ ಕ್ಷೇತ್ರದಲ್ಲೂ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕಿದೆ. ಈ ಸಂಬಂಧವೂ ಆಯೋಗ ಪ್ರಸ್ತಾಪಿಸಬೇಕು’ ಎಂದು ಸಲಹೆ ನೀಡಿದರು.

ವಾಲ್ಮೀಕಿ ಸಮುದಾಯದ ಮುಖಂಡ ರಾದ ಬಿ.ವಿ. ಬಸವರಾಜನಾಯಕ, ಎಲ್.ಎನ್.ಮೂರ್ತಿ, ನರಸಿಂಹಯ್ಯ, ಕೆ.ಸಿ. ನಾಗರಾಜ, ಚಂದ್ರಶೇಖರ ಮಾತನಾಡಿ, ‘ಈಗಾಗಲೇ ವಿಳಂಬವಾಗಿದ್ದು, ನಿಗದಿತ ಅವಧಿಯೊಳಗೇ ಆಯೋಗ ವರದಿ ಸಲ್ಲಿಸುವ ಮೂಲಕ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಮೋಹನದಾಸ್, ‘ಆಯೋಗ ರಚಿಸಿ ಆದೇಶವಾಗಿ ಒಂದು ತಿಂಗಳ ಬಳಿಕ ಆದೇಶದ ಪತ್ರದೊಂದಿಗೆ ಅಧಿಕಾರಿಗಳು ಬಂದರು. ಅಷ್ಟರಲ್ಲಿ ಸರ್ಕಾರ ಬದಲಾಗಿತ್ತು. ಅದಕ್ಕೆ ಮತ್ತೊಂದು ತಿಂಗಳು ವಿಳಂಬವಾಯಿತು. ನಿಗದಿತ ಅವಧಿಯೊಳಗೆ ವರದಿ ಸಿದ್ಧಪಡಿಸುವ ತಯಾರಿಯಲ್ಲೇ ಇದ್ದೇನೆ’ ಎಂದರು

ಪ್ರಸ್ತಾವನೆ

ಆಯೋಗದ ಅವಧಿ ವಿಸ್ತರಣೆಗೆ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ. ‘ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಿರುವ ಆಯೋಗವು, ಅವುಗಳನ್ನು ಕ್ರೋಡೀಕರಿಸಿ ಕಾನೂನಿನ ಚೌಕಟ್ಟು ನೀಡಲು ಇನ್ನಷ್ಟು ಕಾಲವಕಾಶ ಬೇಕಾಗಲಿದೆ. ಹೀಗಾಗಿ ಅವಧಿ ವಿಸ್ತರಣೆಯಾಗಲಿದ್ದು, ಎಷ್ಟು ತಿಂಗಳು ಎಂಬುದು ಇನ್ನೂ ನಿರ್ಧಾರವಾಗಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

***

ಆಯೋಗದ ವರದಿಯನ್ನು ಸರ್ಕಾರ ಪಡೆಯುತ್ತದೋ, ಇಲ್ಲವೋ ಗೊತ್ತಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಫೆಬ್ರುವರಿ 8ರೊಳಗೆ ನಿರ್ಧಾರ ಪ್ರಕಟಿಸಬೇಕು

- ವಾಲ್ಮೀಕಿ ಪ್ರಸನ್ನಾನಂದಸ್ವಾಮೀಜಿ, ವಾಲ್ಮೀಕಿ ಗುರುಪೀಠ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು