ಗುರುವಾರ , ಸೆಪ್ಟೆಂಬರ್ 23, 2021
27 °C

ಕೋವಿಡ್‌ ಉಪಕರಣ ಖರೀದಿಯಲ್ಲಿ ಅಕ್ರಮ; ₹ 2200 ಕೋಟಿ ಅವ್ಯವಹಾರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ ಸುಮಾರು
₹ 2,200 ಕೋಟಿಯಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ವೈದ್ಯಕೀಯ ಉಪಕರಣಗಳ ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಖರೀದಿಸಿದ ದರದ ಪಟ್ಟಿಯನ್ನು ಬಿಡುಗಡೆ ಮಾಡಿದರು.

‘ಕೋವಿಡ್ ಚಿಕಿತ್ಸೆಗಾಗಿ ಸರ್ಕಾರ ಸುಮಾರು ₹ 3 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಯಾವುದಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಜೊತೆಗೆ ಕೊರೊನಾ ನಿರ್ವಹಣೆ, ವೆಚ್ಚ ಕುರಿತು ನಿಗಾ ವಹಿಸಲು ಸರ್ವಪಕ್ಷಗಳನ್ನು ಒಳಗೊಂಡ ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್‍ನಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ವಿವರ ನೀಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಗೆ ₹290 ಕೋಟಿ ಬಂದಿದೆ. ಅದರಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಡಿರುವ ವೆಚ್ಚ ಎಷ್ಟು ಎಂಬುದರ ಕುರಿತು ಮಾಹಿತಿ ಒದಗಿಸಬೇಕು. ಜೊತೆಗೆ ಪಿಎಂ ಕೇರ್ಸ್‌ಗೆ ₹60 ಸಾವಿರ ಕೋಟಿ ಸಂದಾಯವಾಗಿದೆ. ಅದರಲ್ಲಿ ರಾಜ್ಯಕ್ಕೆ ಒದಗಿಸಿರುವ ನೆರವು ಎಷ್ಟು ಎಂಬುದನ್ನೂ ಬಹಿರಂಗಪಡಿಸಬೇಕು‘ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಭ್ರಷ್ಟಾಚಾರ ಮುಚ್ಚಿಹಾಕುವ ಯತ್ನ: ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆ ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲರು ಈ ಕುರಿತು ಮಾತನಾಡಿದರೆ ಸಭಾಧ್ಯಕ್ಷರು ಅವರಿಗೆ ಪತ್ರಬರೆಯುತ್ತಾರೆ. ತಪಾಸಣೆ ಮಾಡಬಾರದು ಎಂದು ತಡೆಯಾಜ್ಞೆ ಕೊಡುತ್ತಾರೆ. ಇದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ’ ಎಂದು ಅವರು ದೂರಿದರು.

‘ಉಪಕರಣಗಳ ಖರೀದಿ ಕುರಿತು ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ದರ ನೀಡಿ ಏಕೆ ಉಪಕರಣಗಳನ್ನು ಖರೀದಿ ಮಾಡಿದಿರಿ ಎಂದು ಪ್ರಶ್ನೆ ಮಾಡಿದೆ. ಕೊರೊನಾದಿಂದ ಜನ ನರಳುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಇವರು ಮನುಷ್ಯರೇ? ಅಧಿಕಾರ ನಡೆಸುತ್ತಿರುವವರಿಗೆ ಮಾನವೀಯತೆ ಎಂಬುದು ಏನಾದರೂ ಇದೆಯೇ?’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ನಮ್ಮೊಂದಿಗೆ ಪ್ರವಾಸಕ್ಕೆ ಬರಲಿ’
ಬಳ್ಳಾರಿ:
‘ಕೊರೊನಾ ಉಪಕರಣಗಳ ಖರೀದಿ ಕುರಿತು ನಮ್ಮ ಬಳಿ ಪ್ರತಿ ಪೈಸೆಗೂ ಲೆಕ್ಕವಿದೆ. ಸಿದ್ದರಾಮಯ್ಯ ಬೇಕಾದರೆ ನಮ್ಮೊಂದಿಗೆ ರಾಜ್ಯದಾದ್ಯಂತ ಪ್ರವಾಸಕ್ಕೆ ಬರಲಿ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸವಾಲೆಸೆದರು.

ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಸ್ಮಶಾನಗಳಲ್ಲಿ ಶವಸಂಸ್ಕಾರ ನಡೆಸುವ ವಿಚಾರದಲ್ಲಿ ದೂರುಗಳು ಹೆಚ್ಚಾಗಿವೆ. ಶವಸಂಸ್ಕಾರವನ್ನು ಇನ್ನು ಮುಂದೆ ವಿದ್ಯುತ್‌ ಚಿತಾಗಾರದಲ್ಲಿ ನಡೆಸಲಾಗುವುದು. ಮೊದಲಿಗೆ ಬೆಂಗಳೂರಿನಲ್ಲಿ ನಾಲ್ಕು ಕಡೆ ಶವಸಂಸ್ಕಾರಕ್ಕೆ ಸ್ಥಳ ಗುರುತಿಸಲಾಗಿದೆ’ಎಂದರು.

‘ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದವರಿಗೆ ₹50 ಸಾವಿರ ದಂಡ ವಿಧಿಸುವ ಕುರಿತು ಚರ್ಚೆ ನಡೆದಿದೆ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತರಿಗಾಗಿ ಪ್ರತಿ ವಾರ್ಡ್‌ಗೆ ಎರಡರಂತೆ 400 ಆಂಬ್ಯುಲೆನ್ಸ್‌ಗಳನ್ನು ಖರೀದಿಸಿ ಮೀಸಲಿಡಲು ಉದ್ದೇಶಿಸಲಾಗಿದ್ದು, ಐಪಿಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ 10 ಸಾವಿರ ಬೆಡ್ ಮೀಸಲಿಡಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು