ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೇಟಿಂಗ್ ಮೂಲಕ ಸುರಕ್ಷತಾ ಜಾಗೃತಿ

Last Updated 23 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಟೈಟನ್‌ ಸಂಸ್ಥೆ ಇಕೊ–‘ಎಜುಕೇಟ್ ಟು ಕ್ಯಾರಿ ಹರ್ ಆನ್ ವರ್ಡ್ಸ್‌’ (ECHO – educate to carry her onwards) ಎನ್ನುವ ಘೋಷವಾಕ್ಯದೊಂದಿಗೆ,ಐಇಂಪ್ಯಾಕ್ಟ್‌ ಮತ್ತು ನನ್‌ಹಿಕಲಿ ಸಂಸ್ಥೆಗಳ ಸಹಭಾಗಿತ್ವದಲ್ಲಿಆಂಧ್ರ ಪ್ರದೇಶದ ವಿಶಾಖಪಟ್ಟಣಂನರಾಣಾ ಉಪ್ಪಲಪಾಟಿ ದೇಶದ ವಿವಿಧ ರಾಜ್ಯಗಳಲ್ಲಿ 6 ಸಾವಿರ ಕಿ.ಮೀ ಸ್ಕೇಟಿಂಗ್‌ ಮಾಡಿದ್ದಾರೆ.

ಸ್ಕೇಟಿಂಗ್‌ನಲ್ಲಿ ಹಲವು ಹಳ್ಳಿಗಳಲ್ಲಿ ಜನರೊಂದಿಗೆ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ, ಹೆಣ್ಣು ಮಕ್ಕಳ ಶಿಕ್ಷಣ, ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ನ ಬಗ್ಗೆ ಅರಿವು ಮೂಡಿಸಿದ್ದಾರೆ.

ಹೊಸೂರಿನಲ್ಲಿರುವಮೊದಲ ಟೈಟನ್‍ನ ವಾಚ್ ಫ್ಯಾಕ್ಟರಿಯಿಂದ ಸೆಪ್ಟೆಂಬರ್ 5ಕ್ಕೆ ಪ್ರಾರಂಭವಾದ ಈ ಪಯಣ ಕರ್ನಾಟಕದ ತುಮಕೂರು, ಶಿರಾ, ಚಿತ್ರದುರ್ಗ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ, ಮುಂಬೈಗೆ ಸಾಗಿ ಅಲ್ಲಿಂದ ಗುಜರಾತ್‍ನ ಭರುಚ್, ವಡೋದರಾ, ದೆಹಲಿ, ಲಖನೌ, ವಾರಾಣಸಿ, ಪಟ್ನಾ, ಧನಬಾದ್, ಕೋಲ್ಕತ್ತ, ಭುವನೇಶ್ವರ, ವಿಶಾಖಪಟ್ಟಣಂ, ಹೈದರಾಬಾದ್, ಚೆನ್ನೈ ತಲುಪಿ ಅಂತಿಮವಾಗಿ 90 ದಿನಗಳ ನಂತರ ಡಿಸೆಂಬರ್‌ 19ಕ್ಕೆ ಹೊಸೂರಿನಲ್ಲಿ ಮುಕ್ತಾಯಗೊಂಡಿದೆ.

ಈ ಸ್ಕೇಟಿಂಗ್‌ನ ಉದ್ದೇಶ ಅರಿವು ಮೂಡಿಸುವುದರ ಜತೆಗೆ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಐಇಂಪ್ಯಾಕ್ಟ್‌ ಮತ್ತು ನನ್‌ಹಿಕಲಿ ಸಂಸ್ಥೆಗಳಿಗೆ ಹಣ ಸಂಗ್ರಹಿಸುವುದು ಸಹ ಆಗಿತ್ತು.ಬಡ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣ, ಮತ್ತಿತ್ತರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸಮಾಡುತ್ತಿರುವಐಇಂಪ್ಯಾಕ್ಟ್‌ ಮತ್ತು ನನ್‌ಹಿಕಲಿ ಸಂಸ್ಥೆಗಳಿಗೆ ನೆರವಾಗುವಂತೆ ಕೋರಲಾಗಿತ್ತು. ಈ ಪಯಣದಲ್ಲಿ₹20 ಸಾವಿರ ಹಣ ಸಂಗ್ರಹವಾಗಿದೆ.

ಈ ಹಿಂದೆ ಸಹ ರಾಣಾ ಅವರು ಕ್ಯಾನ್ಸರ್‌ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಅರಿವು ಮೂಡಿಸಿದ್ದಾರೆ. ಈ ಬಾರಿ ಚೈಲ್ಡ್‌ಲೈನ್‌ ಸಹಾಯದೊಂದಿಗೆ ಶಾಲೆಗಳಲ್ಲಿ ವಿಡಿಯೊ ಮತ್ತು ಸಂವಹನದ ಮೂಲಕ ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ನ ಬಗ್ಗೆ ಅರಿವು ಮೂಡಿಸಿದ್ದಾರೆ.

‘ಮಕ್ಕಳ ಶಿಕ್ಷಣ ಸೇರಿದಂತೆ ಹಲವು ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಾಗ ಯುವಕರು ತಾತ್ಸಾರ ಮನೋಭಾವದಿಂದ ವರ್ತಿಸುವುದು, ‘ನಾವೇನು ಮಾಡಲು ಸಾಧ್ಯ’ ಎನ್ನುವ ಉತ್ತರ ಬರುತ್ತಿತ್ತು ಹೀಗೂ ಸಹಾಯ ಮಾಡಬಹುದು ಎನ್ನುವುದನ್ನು ತೋರಿಸುವುದಕ್ಕೆ ಸ್ಕೇಟಿಂಗ್‌ ಆಯ್ದುಕೊಂಡೆ’ ಎಂದು ಈ ಪಯಣದ ಹಿಂದಿನ ಉದ್ದೇಶವನ್ನು ಹಂಚಿಕೊಳ್ಳುತ್ತಾರೆ ರಾಣಾ.

ವಿಶಾಖಪಟ್ಟಣಂನಲ್ಲಿ ಟೈಟನ್‌ ಮಳಿಗೆ ಒಂದನ್ನು ನಡೆಸುತ್ತಿರುವ ರಾಣಾ ಅವರು ಈ ಪಯಣದ ಬಗ್ಗೆ ಹೀಗೆ ವಿವರಿಸುತ್ತಾರೆ, ‘ಹಲವು ಹಳ್ಳಿಗಳಲ್ಲಿ ಸುತ್ತುತ್ತಿದ್ದಂತೆ, ಹಲವು ಒಳನೋಟಗಳು ತೆರೆದುಕೊಂಡವು. ಈ ಮೂರು ತಿಂಗಳಲ್ಲಿ ನಾನು 6 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಂವಾದ ನಡೆಸಿದ್ದೇನೆ.ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಒಲವು ಹೊಂದಿದ್ದಾರೆ. ಆದರೆ, ಅವರಿಗೆ ಹೆಣ್ಣು ಮಕ್ಕಳ ಶಿಕ್ಷಣ ಎನ್ನುವುದು ವಸತಿ, ಊಟ ನಂತರದ ಆಯ್ಕೆ. ‘ಒಪ್ಪೊತ್ತಿನ ಊಟಕ್ಕೂ ಇಲ್ಲದಿರುವಾಗ ಶಿಕ್ಷಣದ ಬಗ್ಗೆ ಕೇಳುತ್ತೀರಲ್ಲ’ ಎಂದು ಕೆಲವರು ಕೇಳಿದ್ದಿದೆ’ ಎನ್ನುತ್ತಾರೆ ರಾಣಾ.

‘ಸುತ್ತಾಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಯಿತು. ಏಳನೇ ತರಗತಿಯ ವಿದ್ಯಾರ್ಥಿನಿಗೆ ಮೂರನೇ ತರಗತಿಯ ಪಾಠಗಳನ್ನೂ ಓದಲು ಸಾಧ್ಯವಾಗುತ್ತಿರಲಿಲ್ಲ. ಇದು ಅವರು ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗದಿರುವುದು ಒಂದು ಕಾರಣ’ ಎನ್ನುತ್ತಾರೆ.

ಪಯಣ ಸುಲಭವಾಗಿರಲಿಲ್ಲ

‘6 ಸಾವಿರ ಕಿ.ಮೀ ವಿವಿಧ ರಾಜ್ಯಗಳಲ್ಲಿ ಸ್ಕೇಟಿಂಗ್‌ ಮಾಡಿವುದು ಸಲುಭವಾಗಿರಲಿಲ್ಲ. ಮೊದಲಿಗೆ ನಾನು ವೃತ್ತಿಪರ ಸ್ಕೇಟಿಂಗ್‌ ಮಾಡುವವನಲ್ಲ. ಮಕ್ಕಳೊಂದಿಗೆ ಹೆಚ್ಚು ಮಾತನಾಡುತ್ತಾ ಸಾಗಿದ್ದರಿಂದ ಅಷ್ಟು ಕಷ್ಟವೆನಿಸಲಿಲ್ಲ.ಸ್ಕೇಟಿಂಗ್‌ನಲ್ಲಿ ಸ್ಪರ್ಣ ಚತುರ್ಭುಜ ರಸ್ತೆಯನ್ನು ಪೂರೈಸುವುದು ಉದ್ದೇಶವಾಗಿತ್ತು ಅಂದರೆ ಭಾರತದ ನಾಲ್ಕೂ ಕೋನಗಳ ಪ್ರದೇಶಗಳನ್ನು ಮುಟ್ಟುವುದು. ಈ ಪಯಣದಿಂದ ಜನರಿಗೆ ಅರಿವು ಮೂಡಿಸಲು, ಅವರ ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯವಾಯಿತು’ ಎಂದು ತಮ್ಮ ಮಾತು ಮುಗಿಸುತ್ತಾರೆ ರಾಣಾ.

ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌ ಏಕೆ ಹೇಳಿಕೊಡಬೇಕು?

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯದಿಂದ ಮಕ್ಕಳಿಗೆ ಯಾವುದು ಗುಡ್‌ ಟಚ್‌, ಯಾವುದು ಬ್ಯಾಡ್‌ ಟಚ್‌ ಎಂದು ತಿಳಿಸುವುದು ಮುಖ್ಯವಾಗಿದೆ.ಮಕ್ಕಳನ್ನು ಯಾರಾದರೂ ಲೈಂಗಿಕ ಉದ್ದೇಶದಿಂದ ಸ್ಪರ್ಶಿಸಿದರೆ ಅದನ್ನು ಪ್ರತಿರೋಧಿಸುವ, ಪೋಷಕರ ಬಳಿ ತಿಳಿಸುವಂತೆ ತಿಳುವಳಿಕೆ ನೀಡಬೇಕು.

ಈ ಸ್ಪರ್ಶಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳುವುದರಿಂದ ಮುಂದೆ ಮಕ್ಕಳನ್ನು ಯಾರಾದರೂ ಕೆಟ್ಟ ಉದ್ದೇಶದಿಂದ ಮುಟ್ಟಿದರೆ ಅದನ್ನು ಪ್ರತಿರೋಧಿಸಿ, ಪೋಷಕರ ಬಳಿ ಆ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಬಹುತೇಕ ಪೋಷಕರು ಈ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುಲು ಹಿಂಜರಿಯುತ್ತಾರೆ. ಹಾಗಾಗಿ, ಮಕ್ಕಳನ್ನು ಯಾರಾದರೂ ಕೆಟ್ಟ ಉದ್ದೇಶ ದಿಂದ ಮುಟ್ಟಿದರೂ ತಿಳಿಯುವುದಿಲ್ಲ, ಪ್ರತಿರೋಧಿಸುವುದೂ ಇಲ್ಲ.

ಹೆಚ್ಚಿನ ವಿವರಗಳಿಗಾಗಿ: http://www.childlineindia.org.in

https://youtu.be/hWL0Lug4oNs

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT