ದೇಣಿಗೆಯಿಂದ ಶಾಲೆಗೆ ಸೌಕರ್ಯ ಭಾಗ್ಯ

7
ಎರಡೇ ತಿಂಗಳಲ್ಲಿ ಸಿಕ್ಕಿತು ₹ 54 ಲಕ್ಷ ಮೌಲ್ಯದ ಮೂಲಸೌಕರ್ಯ l ಬಹುತೇಕ ಶಾಲೆಗಳಿಗೆ ದಾನಿಗಳ ನೆರವು

ದೇಣಿಗೆಯಿಂದ ಶಾಲೆಗೆ ಸೌಕರ್ಯ ಭಾಗ್ಯ

Published:
Updated:
Deccan Herald

ದಾವಣಗೆರೆ: ಸರ್ಕಾರ ಅನುದಾನವನ್ನು ಸಕಾಲಕ್ಕೆ ನೀಡದಿರುವುದರಿಂದ ದುರಸ್ತಿ ಭಾಗ್ಯ ಕಾಣದ ಶಾಲೆಗಳ ಕಥಾನಕಗಳನ್ನು ಕೇಳಿದ್ದೇವೆ. ಆದರೆ, ಸರ್ಕಾರದ ಅನುದಾನಕ್ಕೆ ಕಾಯದೆ ದಾನಿಗಳ ದೇಣಿಗೆಯಿಂದಲೇ ಶಾಲೆಗಳ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸಿಕೊಂಡ ಕಥೆ ದಾವಣಗೆರೆ ಜಿಲ್ಲೆಯದು.

ಜಿಲ್ಲೆಯಲ್ಲಿ 1,650 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಇವುಗಳಲ್ಲಿ ಶೇ 80ರಷ್ಟು ಶಾಲೆಗಳು ದಾನಿಗಳಿಂದ ಒಂದಿಲ್ಲೊಂದು ನೆರವು ಪಡೆದಿವೆ. ಇದೇ ಜೂನ್‌, ಜುಲೈ ಎರಡೇ ತಿಂಗಳಲ್ಲಿ ದಾನಿಗಳಿಂದ ₹54 ಲಕ್ಷ ಮೌಲ್ಯದ ಮೂಲಸೌಕರ್ಯಗಳನ್ನು ಶಾಲೆಗಳು ಪಡೆದುಕೊಂಡಿವೆ. ನೀರಿನ ಫಿಲ್ಟರ್, ಬೆಂಚು, ತಟ್ಟೆ–ಲೋಟ, ಕಂಪ್ಯೂಟರ್‌, ಟ್ಯೂಬ್‌ಲೈಟ್, ಫ್ಯಾನ್ ದಾನವಾಗಿ ಶಾಲೆಗಳಿಗೆ ಸಿಕ್ಕಿವೆ. ಶಾಲಾ ಕಟ್ಟಡ, ಚಾವಣಿ ರಿಪೇರಿ, ಶೌಚಾಲಯ ನಿರ್ಮಾಣದ ಕೆಲಸಗಳು ನಡೆದಿವೆ.

2017–18ರ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು ₹48 ಮೌಲ್ಯದ ಮೂಲಸೌಕರ್ಯಗಳು ಶಾಲೆಗೆ ದೇಣಿಗೆಯಾಗಿ ಸಿಕ್ಕಿದ್ದವು. ಈ ವರ್ಷದ ಎರಡೇ ತಿಂಗಳಿಗೆ ₹54 ಲಕ್ಷ ಮೌಲ್ಯದ ಸೌಕರ್ಯ ಸಿಕ್ಕಿರುವುದು ಆಶಾದಾಯಕ. ಇದಕ್ಕೆ ಶಾಲಾ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಇಲಾಖೆ ಅಧಿಕಾರಿಗಳ ಒಟ್ಟು ಪ್ರಯತ್ನವಿದೆ ಎನ್ನುತ್ತಾರೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಿರಿಯ ಉಪನ್ಯಾಸಕ ಜಿ.ಎಸ್‌. ರಾಜಶೇಖರಪ್ಪ.

ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಇಬ್ಬರು ಉಪ ನಿರ್ದೇಶಕರು ಸೇರಿದಂತೆ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಾ ಸೇರಿ 280 ಅಧಿಕಾರಿಗಳು ಇದ್ದೆವು. ಜಿಲ್ಲಾ ಡಯಟ್‌ನ ಶಾಲಾ ದತ್ತು ಯೋಜನೆಯಡಿ ಪ್ರತಿಯೊಬ್ಬರಿಗೂ ನಾಲ್ಕು ಶಾಲೆಗಳನ್ನು ದತ್ತು ನೀಡಲಾಗಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಜತೆಗೆ ಭೌತಿಕ ಸೌಲಭ್ಯಗಳನ್ನೂ ಕಲ್ಪಿಸಲು ನೆರವಾಗುವುದು ದತ್ತು ಯೋಜನೆ ಉದ್ದೇಶ.

ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದಾಗ, ವಸ್ತು ರೂಪದಲ್ಲಿ ಅಥವಾ ನಗದು ರೂಪದಲ್ಲಿ ದಾನಿಗಳಿಂದ ಹೇಗೆ ನೆರವು ಪಡೆದುಕೊಳ್ಳಬೇಕು ಎಂಬ ಬಗ್ಗೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.

ಹಲವು ಕಡೆ ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳೇ ದೇಣಿಗೆ ನೀಡಿದ್ದಾರೆ. ಹಳೇ ವಿದ್ಯಾರ್ಥಿಗಳ ಸಂಘಗಳೂ ಕೆಲವು ಕಡೆ ನೆರವು ನೀಡಿವೆ ಎನ್ನುತ್ತಾರೆ ರಾಜಶೇಖರಪ್ಪ.

‘ಸರ್ಕಾರದ ಅನುದಾನದಲ್ಲಿ ಏಳು ಕೊಠಡಿ ಕಟ್ಟಿಸಿದೆವು. ಇನ್ನೊಂದು ಕೊಠಡಿ ಕಟ್ಟಿಸಬೇಕಿತ್ತು. ಅನುದಾನ ಸಾಕಾಗುತ್ತಿರಲಿಲ್ಲ. ₹3.5 ಲಕ್ಷ ಬೇಕಾಗಿತ್ತು. ಜೈನ ಯುವಕ ಸಂಘದವರಲ್ಲಿ ನೆರವು ಕೇಳಿದೆವು. ₹2 ಲಕ್ಷ ಕೊಟ್ಟರು. ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳ ಸಂಘದಿಂದ ₹ 1 ಲಕ್ಷ ದೇಣಿಗೆ ಸಿಕ್ಕಿತು. ಇನ್ನೂ ₹50 ಸಾವಿರ ಬೇಕಾಗಿದೆ.

ಅದನ್ನೂ ದಾನಿಗಳಿಂದ ಇನ್ನೊಂದು ವಾರದಲ್ಲಿ ಸಂಗ್ರಹಿಸುತ್ತೇವೆ’ ಎನ್ನುತ್ತಾರೆ ದಾವಣಗೆರೆ ತಾಲ್ಲೂಕು ಆನಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ. ಈ ಆನಗೋಡು ಶಾಲೆ ಕಳೆದ ಮೂರು ವರ್ಷಗಳಲ್ಲಿ ದಾನಿಗಳಿಂದ ಸುಮಾರು ₹8 ಲಕ್ಷ ಮೌಲ್ಯದ ಮೂಲಸೌಕರ್ಯಗಳನ್ನು ದೇಣಿಗೆಯಾಗಿ ಪಡೆದಿದೆ. 1ರಿಂದ 8ನೇ ತರಗತಿವರೆಗೆ ಇರುವ ಈ ಶಾಲೆಗೆ ಸುಮಾರು 15 ಹಳ್ಳಿಗಳಿಂದ 396 ವಿದ್ಯಾರ್ಥಿಗಳು ಬರುತ್ತಾರೆ. ತಟ್ಟೆ, ಲೋಟ, ಕಂಪ್ಯೂಟರ್, ಎಲ್‌ಸಿಡಿ ಪರದೆ, ಫ್ಯಾನ್ ಎಲ್ಲವನ್ನೂ ದಾನಿಗಳಿಂದಲೇ ಈ ಶಾಲೆ ಪಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !