ಗುರುವಾರ , ನವೆಂಬರ್ 21, 2019
20 °C
ಶಿಕ್ಷಣ ಸಚಿವರಿಂದ ಶಾಲಾ ವಾಸ್ತವ್ಯ l ವಿದ್ಯಾರ್ಥಿ– ಶಿಕ್ಷಕರ ಜತೆ ಸಂವಾದ l ಕಾಯಕಲ್ಪ ಉದ್ದೇಶ

ಗಡಿಭಾಗದ ಸರ್ಕಾರಿ ಶಾಲೆಯಲ್ಲೊಂದು ದಿನ!

Published:
Updated:
Prajavani

ಬೆಂಗಳೂರು: ರಾಜ್ಯದ ಗಡಿ ಪ್ರದೇಶ ಮತ್ತು ಹಿಂದುಳಿದ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿಗತಿ ಅರಿತು ಅವುಗಳಿಗೆ ಕಾಯಕಲ್ಪ ನೀಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ‘ಸರ್ಕಾರಿ ಶಾಲೆಯಲ್ಲಿ ಒಂದು ದಿನ’ ಕಾರ್ಯಕ್ರಮ ಇದೇ ತಿಂಗಳು ಆರಂಭಿಸಲಿದ್ದಾರೆ.

ಈ ತಿಂಗಳ ಮೂರನೇ ವಾರದಿಂದ ಪಾವಗಡ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಮೂಲಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ. ಬಳಿಕ ನಿರಂತರವಾಗಿ ರಾಜ್ಯದ ವಿವಿಧೆಡೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವರು.

‘ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಯಲ್ಲಿ ವರದಿಯಾದ ರಾಮನಗರ ಜಿಲ್ಲೆ ಕೈಲಾಂಚ ವಸತಿ ಶಾಲೆಯ ಹೀನಾಯ ಸ್ಥಿತಿ ಮತ್ತು ಅಲ್ಲಿಗೆ ಭೇಟಿ ನೀಡಿ ಬಂದ ಮೇಲೆ ಆದ ಗಮನಾರ್ಹ ಬದಲಾವಣೆ ಪ್ರೇರಣೆ ನೀಡಿದೆ. ಅಲ್ಲದೆ ಹಿಂದೆಯೂ ಶಾಲೆಗಳಿಗೆ ಸ್ಥಿತಿಗಳ ಬದಲಾವಣೆಗಳಿಗೆ ಕಾರಣವಾದ ಪತ್ರಿಕಾ ವರದಿಗಳು ನನ್ನ ನೆನಪಿನಲ್ಲಿ ಇತ್ತು’ ಎಂದು ಸುರೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಡಿ ಭಾಗದ ಮತ್ತು ಹಿಂದುಳಿದ ಪ್ರದೇಶಗಳ ಶಾಲೆಗಳತ್ತ ಮಾಧ್ಯಮಗಳ ಗಮನ ಅಷ್ಟಾಗಿ ಇರುವುದಿಲ್ಲ. ಅಲ್ಲಿನ ಶಾಲೆಗಳ ಸ್ಥಿತಿ ಶೋಚನೀಯವಾಗಿರುತ್ತದೆ. ಅಂತಹ ಕಡೆಗಳಿಗೆ ಹೋಗಿ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಒಂದು ರಾತ್ರಿ ಉಳಿಯುವುದರ ಜತೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಜತೆಗೆ ಸಮಾಲೋಚನೆ ನಡೆಸುತ್ತೇನೆ’ ಎಂದು ವಿವರಿಸಿದರು.

 

ಪ್ರತಿಕ್ರಿಯಿಸಿ (+)