ತಾತ್ಕಾಲಿಕ ಶೆಡ್‌ನಲ್ಲಿ ಮಕ್ಕಳ ಕಲಿಕೆ

7
ಶಾಲೆಯ ಚಾವಣಿ ಕಲ್ಲುಚಪ್ಪಡಿ ಉರುಳಿ ಬೀಳುವ ಭೀತಿಯಲ್ಲಿ ಪೋಷಕರ ಆತಂಕ

ತಾತ್ಕಾಲಿಕ ಶೆಡ್‌ನಲ್ಲಿ ಮಕ್ಕಳ ಕಲಿಕೆ

Published:
Updated:
Deccan Herald

ಮಾಲೂರು: ತಾಲ್ಲೂಕಿನ ಗಡಿ ಗ್ರಾಮವಾದ ಚೌರಮಂಗಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡು ಯಾವುದೇ ಸಂದರ್ಭದಲ್ಲಾದರೂ ಬೀಳುವ ಹಂತದಲ್ಲಿದ್ದು, ಮಕ್ಕಳು ತಮ್ಮ ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೌರಮಂಗಲ ತಮಿಳುನಾಡಿನ ಬೇರಿಕೆ ಪಟ್ಟಣಕ್ಕೆ ಕೇವಲ ಕೂಗಳತೆ ದೂರದಲ್ಲಿದೆ.

1ರಿಂದ 5ನೇ ತರಗತಿಯವರೆಗೆ 13 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯ ಕಟ್ಟಡ ಶಿಥಿಲಗೊಂಡು 3 ವರ್ಷ ಕಳೆದಿವೆ. ಆದರೆ ಇಲ್ಲಿಯವರೆಗೂ ಕಟ್ಟಡ ದುರಸ್ತಿ ಕಾರ್ಯ ನಡೆದಿಲ್ಲ.

ಕಟ್ಟಡದ ಚಾವಣಿಗೆ ಕಲ್ಲು ಚಪ್ಪಡಿ ಹಾಸಿದ್ದು, ಗೊಡೆಗಳು ಶಿಥಿಲಗೊಂಡಿರುವುದರಿಂದ ಒಂದು ಕಲ್ಲು ಉರುಳಿದರೆ ಎಲ್ಲ ಕಲ್ಲು ಚಪ್ಪಡಿಗಳು ಉರುಳಿ ಬೀಳುತ್ತವೆ ಎಂಬ ಭೀತಿ ಪೋಷಕರನ್ನು ಆವರಿಸಿದೆ. ಶಿಕ್ಷಣ ಇಲಾಖೆಗೆ ಗ್ರಾಮಸ್ಥರು ಕಳೆದ ವರ್ಷ ಮನವಿ ಮಾಡಿದ್ದರಿಂದ ಶಾಲಾ ಕಟ್ಟಡದ ಮುಂಭಾಗ ತಾತ್ಕಾಲಿಕ ಶೀಟ್ ಚಾವಣಿ ನಿರ್ಮಿಸಿ ಅಡ್ಡ ಗೋಡೆ ಹಾಕಿ ಪಾಠ ಪ್ರವಚನಗಳನ್ನು ನಡೆಸಲಾಗುತ್ತಿದೆ. ಆದರೆ ಇದರಿಂದ ಮಕ್ಕಳಿಗೆ ಸರ್ಕಾರದ ಸಂಪೂರ್ಣ ಕಲಿಕೆ ಭಾಗ್ಯ ದೊರೆತಿಲ್ಲ. ಕಪ್ಪು ಬೋರ್ಡ್ ಮುಖ ನೋಡದ ಮಕ್ಕಳು ಯಾವ ರೀತಿ ತಮ್ಮ ಕಲಿಕೆಯನ್ನು ಮುಂದುವರಿಸಲು ಸಾಧ್ಯ. ಶಿಥಿಲವಾಗಿರುವ ಕಟ್ಟಡ ಕುಸಿದರೆ ಪಕ್ಕದಲ್ಲೇ ಇರುವ ತಾತ್ಕಾಲಿಕ ಕಟ್ಟಡದ ಮೇಲೆ ಬೀಳುವ ಸಾಧ್ಯತೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

ಧರಣಿ ಎಚ್ಚರಿಕೆ ನೀಡಿದ ತಾ.ಪಂ ಸದಸ್ಯೆ

‘ಶಿಥಿಲಗೊಂಡಿರುವ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿ ಬಗ್ಗೆ ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದೇನೆ. ಇಲ್ಲಿಯವರೆಗೂ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ಸಹಕಾರದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ಆಶಾ ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಆತಂಕದಲ್ಲಿ ಮಕ್ಕಳು

‘ತಮಿಳು ನಾಡು ಗಡಿ ಭಾಗದಲ್ಲಿರುವ ನಮ್ಮ ಗ್ರಾಮಕ್ಕೆ ಸರ್ಕಾರದ ಅನುದಾನಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯ ಕಟ್ಟಡ ಬೀಳುವ ಹಂತದಲ್ಲಿದ್ದು, ಮಕ್ಕಳನ್ನು ಶಾಲೆಗೆ ದಾಖಲಿಸಲು ಭಯವಾಗುತ್ತದೆ’ ಎಂದು ಗ್ರಾಮಸ್ಥರಾದ ಮಂಜುನಾಥ ಆತಂಕ ವ್ಯಕ್ತಪಡಿಸಿದರು.

* ದುರಸ್ತಿ ಮಾಡಿಸುವಂತೆ ಕಳೆದ ವರ್ಷ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಟ್ಟಡ ಕಾಮಗಾರಿ ನಡೆಸಲಾಗುವುದು.

- ವೆಂಕಟಸ್ವಾಮಿ, ಶಿಕ್ಷಣ ಇಲಾಖೆಯ ಬಿಆರ್‌ಸಿ

ಅಂಕಿ ಅಂಶಗಳು
320 ಒಟ್ಟು ತಾಲ್ಲೂಕಿನಲ್ಲಿರುವ ಶಾಲೆಗಳು
40 ನಿರ್ಲಕ್ಷ್ಯಕ್ಕೊಳಗಾದ ಗಡಿ ಗ್ರಾಮಗಳ ಸರ್ಕಾರಿ ಶಾಲೆಗಳು
3 ವರ್ಷ ಕಳೆದರೂ ದುರಸ್ತಿಗೊಳ್ಳದ ಚೌರಮಂಗಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !