ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಶಾ ಸಾಫ್ಟ್’ ಸಂಪೂರ್ಣ ರದ್ದುಗೊಳಿಸಿ

ಆಶಾ ಕಾರ್ಯಕರ್ತರ ಸಮಾವೇಶದಲ್ಲಿ ನಾಗಲಕ್ಷ್ಮೀ
Last Updated 31 ಮಾರ್ಚ್ 2018, 7:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲು ಅಳವಡಿಸಿರುವ ‘ಆಶಾ ಸಾಫ್ಟ್’ ತಂತ್ರಾಂಶವನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ಆಗ್ರಹಿಸಿದರು.ಇಲ್ಲಿನ ತರಾಸು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಆಶಾ ಸಾಫ್ಟ್ ಅಳವಡಿಕೆಯಿಂದಾಗಿ ಆಶಾ ಕಾರ್ಯಕರ್ತೆಯರು ನಿರ್ವಹಿಸುವ ಕೆಲಸಕ್ಕೆ ಸರಿಯಾದ ಪ್ರೋತ್ಸಾಹ ಧನ ಸಿಗುತ್ತಿಲ್ಲ. ನಾವು ಮಾಡಿದಂತಹ ಕೆಲಸದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸೇರಿಸುವ ಸಮಯದಲ್ಲಿ ಅನೇಕ ಸಮಸ್ಯೆಗಳು ಎದುರಾಗಲಿವೆ. ಇದಕ್ಕೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರೂ ಈವರೆಗೂ ಈಡೇರಿಲ್ಲ ಎಂದು ದೂರಿದರು. ಆನ್‌ಲೈನ್‌ನಲ್ಲಿ ₹ 3,000 ಅಂಥ ದಾಖಲು ಮಾಡಿದರೆ, ನಮಗೆ ಸಿಗುವುದು ಕೇವಲ ₹ 2,000 ಆಗುತ್ತಿದ್ದು, ಇದರಲ್ಲಿ ಏನೋ ಗೋಲ್‌ಮಾನ್ ನಡೆಯುತ್ತಿದೆ ಎಂಬ ಅನುಮಾನವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಯುಕ್ತರು (ಕಮೀಷನರ್) ಈ ತಿಂಗಳಲ್ಲಿ ಸಭೆ ಕರೆಯಬೇಕಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿರುವ ಸಭೆಯಲ್ಲಿ ಆಶಾ ಸಾಫ್ಟ್ ಅನ್ನು ರದ್ದುಪಡಿಸಬೇಕು ಎಂದು ನಾವೆಲ್ಲರೂ ಆಗ್ರಹಿಸುತ್ತೇವೆ ಎಂದರು.ಕಳೆದ ಎಂಟತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ರಾಜ್ಯ ಸರ್ಕಾರಕ್ಕೆ ನಾವು ₹ 6,000 ವೇತನ ನಿಗದಿ ಪಡಿಸುವಂತೆ ಒತ್ತಾಯಿಸಿದ್ದೇವೆ. ಆದರೆ, ಬೇಡಿಕೆ ಈಡೇರಿಸಲು ಕಾಳಜಿ ತೋರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಕಾರ್ಮಿಕ ಕಾಯ್ದೆ ಪ್ರಕಾರ ₹ 12,000 ಕನಿಷ್ಟ ವೇತನ ನೀಡಬೇಕು. ರಾಜ್ಯ ಸರ್ಕಾರ ತನ್ನ ಪಾಲು ನೀಡಿದರೆ, ಉಳಿದದ್ದನ್ನು ಕೇಂದ್ರ ಕೊಡಲೇಬೇಕು ಎಂದು ಕೋರುತ್ತೇವೆ. ಆದರೀಗ ರಾಜ್ಯ ಸರ್ಕಾರ ₹ 3.500 ನಿಗದಿ ಪಡಿಸಿದೆ. ಆದ್ದರಿಂದ ಹೊಸ ಸರ್ಕಾರ ಬಂದ ಮೇಲೆ ನಮ್ಮ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಕರೆ ನೀಡಿದರು.ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ಸೌಲಭ್ಯಗಳ ಅಗತ್ಯವಿದೆ. ಎಷ್ಟೋ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವ ವೇಳೆ ಅಪಘಾತಗಳಾಗಿ ಸಾವನ್ನಪ್ಪಿದ್ದಾರೆ. ತೀವ್ರತರವಾದ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದಿದ್ದಾರೆ. ಅದಕ್ಕಾಗಿ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದೇವೆ ಎಂದರು.

ಎಐಯುಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಸರ್ಕಾರ ಮನಸ್ಸು ಮಾಡಿದರೆ, ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬಹುದು. ಸೇವೆ ಕಾಯಂ ಆದರೆ, ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಅದನ್ನು ತಡೆಯುವ ಉದ್ದೇಶದಿಂದ ಅತ್ಯಂತ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ದೊಡ್ಡದು. ಹೀಗಿದ್ದರೂ ಕನಿಷ್ಟ ವೇತನ ನಿಗದಿ ಪಡಿಸಿಲ್ಲ. ಸರ್ಕಾರಗಳು ನಮ್ಮ ಪರವಾಗಿಲ್ಲ. ಆದ್ದರಿಂದ ಆಶಾ, ಅಂಗನವಾಡಿ, ಬಿಸಿಯೂಟ, ಗುತ್ತಿಗೆ ಕಾರ್ಮಿಕರಿಗೆ ಕಾನೂನಿನ ಪ್ರಕಾರ ಕನಿಷ್ಟ ಸೌಲಭ್ಯ ಒದಗಿಸಬೇಕು. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ದೇವದಾಸ್, ಜಿಲ್ಲಾ ಅಧ್ಯಕ್ಷೆ ಗಿರಿಜಮ್ಮ, ಮಮತಾ, ಗುರುಶಾಂತ, ಮಂಜುಳಾ, ಗುರು ಸಿದ್ದಮ್ಮ, ನಿಂಗಮ್ಮ, ಎಐಡಿವೈಓ ಜಿಲ್ಲಾಧ್ಯಕ್ಷ ರವಿಕುಮಾರ್, ಗೋವಿಂದ್, ಮಂಜುನಾಥ್, ಪ್ರದೀಪ್, ಕುಮಾರ್ ಇದ್ದರು.

**

ಆಶಾ ಕಾರ್ಯಕರ್ತೆಯರನ್ನು ಮುಂಬರುವ ರಾಜ್ಯ ಸರ್ಕಾರ ಸರ್ಕಾರಿ ನೌಕರರೆಂದು ಪರಿಗಣಿಸಿ, ಸೇವಾ ನಿಯಮದಂತೆ ನಿಗದಿತ ವೇತನ ನೀಡಬೇಕು.
- ಸೋಮಶೇಖರ್, ಎಐಯುಟಿಯುಸಿ ರಾಜ್ಯ ಘಟಕದ ಕಾರ್ಯದರ್ಶಿ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT