ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಶುಲ್ಕ ಪಾವತಿ: ಕರಡು ನೀತಿಗೆ ಹೈಕೋರ್ಟ್ ಆದೇಶ

ಖಾಸಗಿ ಶಾಲೆ: ಏಕರೂಪ ಶುಲ್ಕ ಪಾವತಿ ವ್ಯವಸ್ಥೆ
Last Updated 23 ಏಪ್ರಿಲ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವರೆಗೆ ವಿದ್ಯಾರ್ಥಿಗಳ ಶುಲ್ಕ ನೀಡಿಕೆ ವ್ಯವಸ್ಥೆಯನ್ನು ಸರಳಗೊಳಿಸುವ ದಿಸೆಯಲ್ಲಿ ಕರಡು ನೀತಿ ತಯಾರಿಸಿ ಸಲ್ಲಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಕೀಲ ಎನ್‌.ಪಿ.ಅಮೃತೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಕೋರ್ಟ್‌ಗೆ ಖುದ್ದು ಹಾಜರಾಗಿ ಶುಲ್ಕ ನಿಯಂತ್ರಣ ವಿಷಯದಲ್ಲಿ ಸದ್ಯ ಅನುಸರಿಸಲಾಗುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.

‘ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ), ಇಂಡಿಯನ್‌ ಸರ್ಟಿಫೀಕೇಟ್ ಆಫ್‌ ಸೆಕೆಂಡರಿ ಎಜುಕೇಷನ್‌ (ಐಸಿಎಸ್ಇ) ಹಾಗೂ ಅಂತರರಾಷ್ಟ್ರೀಯ ಪಠ್ಯಕ್ರಮ ಅನುಸರಿಸುತ್ತಿರುವ 14 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಇವುಗಳಿಗೆ ಏಕರೂಪ ವ್ಯವಸ್ಥೆ ಅಳವಡಿಸುವುದು ತುಸು ಕಷ್ಟದಾಯಕ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಶಾಲೆಗೊಂದು ಕೋಡ್‌ ನಂಬರ್ ನೀಡಿ. ಪಾವತಿಸುವ ಹಣ ನೇರವಾಗಿ ಶಾಲೆಗೆ ಸೇರುವಂತಾಗಲಿ. ವಿದ್ಯುತ್‌, ನೀರಿನ ಬಿಲ್‌ ಪಾವತಿಸುವ ರೀತಿಯಲ್ಲೇ ವಲಯವಾರು ಮಟ್ಟದಲ್ಲಿ ಕೇಂದ್ರಗಳನ್ನು ತೆರೆಯಬಹುದಲ್ಲವೇ’ ಎಂದು ಪ್ರಶ್ನಿಸಿತು.

‘ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಯಾವುದೇ ಸಂವಹನಕ್ಕೆ ಅವಕಾಶ ಇರಕೂಡದು. ಇಂತಹ ವ್ಯವಸ್ಥೆ ಜನಪರವಾಗಿರಬೇಕು. ಇದು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತಾಗಬೇಕು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

‘ಶೀಘ್ರವೇ ಸರ್ಕಾರದ ಮಟ್ಟದಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಿ ಮತ್ತು ಕರಡು ನೀತಿ ರೂಪಿಸಿ ಅದನ್ನು ಕೋರ್ಟ್‌ಗೆ ಸಲ್ಲಿಸಿ. ಈ ನೀತಿ 2019-20ರ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರುವಂತೆ ಮಾರ್ಗಸೂಚಿ ತಯಾರು ಮಾಡಿ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತನ್ನಿ. ಶುಲ್ಕ ಪಾವತಿ ಪದ್ಧತಿಯನ್ನು ಸರಳಗೊಳಿಸಿ’ ಎಂದು
ಆದೇಶಿಸಿತು.

ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT