ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗವಾಗದ ಶಾಲಾ ಶುಲ್ಕ ವಿವರ

ಪಿಐಎಲ್‌ ವಿಚಾರಣೆ ವೇಳೆ ಹೈಕೋರ್ಟ್ ಅತೃಪ್ತಿ
Last Updated 4 ಜನವರಿ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದ ವಿವರವನ್ನುಶಾಲೆಗಳ ನೋಟಿಸ್‌ ಬೋರ್ಡ್‌ನಲ್ಲಿ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಉತ್ಸುಕವಾಗಿಲ್ಲ’ ಎಂದು ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

ಈ ಕುರಿತಂತೆ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಶಿವಪ್ರಭು ಹಿರೇಮಠ ಅವರು, ‘ರಾಜ್ಯದಲ್ಲಿ, ರಾಜ್ಯ ಪಠ್ಯಕ್ರಮದ 15,706 ಶಾಲೆಗಳು, 754 ಸಿಬಿಎಸ್‌ಇ ಮತ್ತು 277 ಐಸಿಎಸ್‌ಇ ಶಾಲೆಗಳಿವೆ. ಅವುಗಳಲ್ಲಿ 13,727 ರಾಜ್ಯ ಪಠ್ಯಕ್ರಮ, 639 ಸಿಬಿಎಸ್‌ಇ ಮತ್ತು 242 ಐಸಿಎಸ್‌ಇ ಶಾಲೆಗಳಲ್ಲಿ ಫಲಕಗಳನ್ನು ಅಳವಡಿಸಲಾಗಿದೆ. ಇನ್ನೂ 2,129 ಶಾಲೆಗಳಲ್ಲಿ ಫಲಕ ಅಳವಡಿಸಿಲ್ಲ. ಈ ಕುರಿತಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ’ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯ ನ್ಯಾಯಮೂರ್ತಿಗಳು ‘ನಿಮ್ಮ ಇಲಾಖೆಯ ಆದೇಶವನ್ನು ಪರಿಪೂರ್ಣವಾಗಿ ನೀವೇ ಪಾಲಿಸಲಿಲ್ಲ ಎಂದರೆ ಹೇಗೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಇದೇ 23ರೊಳಗೆ ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಮುಂದೆ ಫಲಕ ಇರುವಂತೆ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಎಲ್ಲ ಉಪ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಮತ್ತು ಆ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವಾದರೆ ಇದೇ 23ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಖುದ್ದು ಹಾಜರಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿದರು.

ಕೋರಿಕೆ ಏನು?: ‘ಕರ್ನಾಟಕ ಶಿಕ್ಷಣ ಕಾಯ್ದೆ (ವರ್ಗೀಕರಣ ಮತ್ತು ನಿಯಂತ್ರಣ) ಕಾಯ್ದೆ 1995ರ ನಿಯಮ 10 (4) ಹಾಗೂ 14 (2)ರ ಅನ್ವಯ ಎಲ್ಲ ಶಾಲೆಗಳ ಮುಂದೆ ಶುಲ್ಕದ ವಿವರ ಫಲಕ ಅಳವಡಿಸುವುದು ಕಡ್ಡಾಯ. ಆದರೆ, ಬಹಳಷ್ಟು ಶಾಲೆಗಳು ಈ ಆದೇಶ ಪಾಲನೆ ಮಾಡುತ್ತಿಲ್ಲ. ಆ ಕುರಿತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT