ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗುವುದು ಅನುಮಾನ

ಶೈಕ್ಷಣಿಕ ಅವಧಿಗೆ ತಕ್ಕಂತೆ ಪಠ್ಯ ಕಡಿತಕ್ಕೆ ಕ್ರಮ: ಸಚಿವ ಸುರೇಶ್‌ ಕುಮಾರ್
Last Updated 7 ಮೇ 2020, 21:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾದಿಂದಾಗಿ ಜೂನ್‌ 1ರಿಂದಲೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆ ಕಡಿಮೆ ಇದೆ. ಶೈಕ್ಷಣಿಕ ದಿನಗಳು ಕಡಿತವಾಗುವುದಕ್ಕೆ ತಕ್ಕಂತೆ ಪಠ್ಯದಲ್ಲೂ ಕಡಿತ ಮಾಡಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚಿಸಿದರು.

ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ‘ಈ ಶೈಕ್ಷಣಿಕ ಸಾಲಿನ ಪ್ರಾರಂಭದ ಬಗ್ಗೆ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಾಗದ ಕಾರಣ 1ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿ ಎನ್ನುವ ಪಠ್ಯವನ್ನು ಗುರುತಿಸುವ ಕಾರ್ಯಕ್ಕೆ ಕೂಡಲೇ ಚಾಲನೆ ನೀಡಬೇಕು’ ಎಂದರು.

‘ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನವಶ್ಯಕ ಹಾಗೂ ಪುನರಾವರ್ತಿತವಾದ ಪಠ್ಯವನ್ನು ಕೈಬಿಡಬೇಕು. ಕಡಿತವಾಗಬಹುದಾದ ಅವಧಿಯ ಆಧಾರದಲ್ಲಿ ಪ್ರತಿ ತರಗತಿ ಹಾಗೂ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳ, 1 ತಿಂಗಳ, ಒಂದೂವರೆ ತಿಂಗಳ, 2 ತಿಂಗಳ ಹಂತವಾರು ಹೆಚ್ಚುವರಿಯಾಗಬಹುದಾದ ಪಠ್ಯಗಳನ್ನು ಗುರುತಿಸಿ ಅವುಗಳನ್ನು ಕೈಬಿಡುವ ಬಗ್ಗೆ ವಿಸ್ತ್ರತ ವರದಿ ತಯಾರಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಮಕ್ಕಳವಾಣಿ ಯೂ ಟ್ಯೂಬ್ ಚಾನೆಲ್‌ನಲ್ಲಿ 1ರಿಂದ 10ನೇ ತರಗತಿವರೆಗೆ ವಿಷಯವಾರು, ಅಧ್ಯಾಯವಾರು ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಬೋಧನೆಯನ್ನು, ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಚಿತ್ರೀಕರಿಸಿ ಯೂ-ಟ್ಯೂಬ್ ಚಾನೆಲ್ ನಲ್ಲಿ ಶಾಶ್ವತವಾಗಿ ಲಭ್ಯವಿರುವಂತೆ ಮಾಡಬೇಕು’ ಎಂದರು.

ಪ್ರತಿ ತರಗತಿ ಪಠ್ಯದಲ್ಲೂ ಕೊರೊನಾ
‘ಈ ಶೈಕ್ಷಣಿಕ ಸಾಲಿನಿಂದಲೇ ಕೊರೊನಾ ಕುರಿತ ಪಠ್ಯವನ್ನು ಎಲ್ಲ ತರಗತಿಗಳ ಪಠ್ಯದಲ್ಲಿ ಸೇರಿಸಬೇಕು. ಆಯಾ ವಯೋಮಾನದ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗುವ ರೀತಿಯಲ್ಲಿ ಕಿರುಪಠ್ಯ ರಚನೆ ಮಾಡಿ ಶಾಲೆಗಳಿಗೆ ಪೂರೈಸುವುದರ ಜೊತೆಗೆ ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿಯೂ ಈ ಕುರಿತಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಇದು ಪಠ್ಯಕ್ರಮದ ಒಂದು ಭಾಗವಾಗಿ ಕಡ್ಡಾಯವಾಗಿ ಕಲಿಯಬೇಕಾದ ವಿಷಯವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಸುರೇಶ್‌ ಕುಮಾರ್‌ ಸೂಚಿಸಿದರು.

**

ಶಾಲೆಗಳಲ್ಲಿ ಇನ್ನು ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇದು ಇನ್ನು ಕಲಿಕಾ ಕ್ರಮವೂ ಆಗಿರಲಿದ್ದು, ಪೋಷಕರಲ್ಲಿ ವಿಶ್ವಾಸ ತರಬೇಕಾಗಿದೆ.
-ಎಸ್‌.ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT