ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶವಾಣಿಯ ‘ಪರೀಕ್ಷಾ ಸಿದ್ಧತೆ’ ಬಂದ್!

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸುವ ರಾಜ್ಯ ಸರ್ಕಾರದ ಯತ್ನಕ್ಕೆ ತೀವ್ರ ಹಿನ್ನಡೆ
Last Updated 19 ಫೆಬ್ರುವರಿ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಆಕಾಶವಾಣಿಯ ‘ಪರೀಕ್ಷಾ ಸಿದ್ಧತೆ’ಕಾರ್ಯಕ್ರಮ ಈ ಬಾರಿ ಬಂದ್ ಆಗಿದ್ದು, ಫಲಿತಾಂಶವನ್ನು ಸುಧಾರಿಸುವ ಯತ್ನ ಸರ್ಕಾರದಿಂದ ಆಗುತ್ತಿರುವುದು ನಿಜವೇ ಎಂದು ಪ್ರಶ್ನಿಸುವಂತೆ ಮಾಡಿದೆ.

ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವುದಕ್ಕೆ ಅಗತ್ಯವಾದಷ್ಟು ಮಾಹಿತಿ ನೀಡುತ್ತಿದ್ದ ಹಾಗೂ ಶಿಕ್ಷಕರ ಕೊರತೆ ಇದ್ದ ಶಾಲೆಗಳಲ್ಲಿ ಇತರ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಬಹಳ ಪ್ರಯೋಜನಕಾರಿಯಾಗಿದ್ದಈ ಕಾರ್ಯಕ್ರಮವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಹಯೋಗದಲ್ಲಿ ಶಿಕ್ಷಣ ಇಲಾಖೆ ಮತ್ತು ಆಕಾಶವಾಣಿಗಳು ಜಂಟಿಯಾಗಿ ಹಮ್ಮಿಕೊಂಡಿದ್ದವು. ಆದರೆ ವಿದ್ಯಾರ್ಥಿಗಳಿಗೆ ಇಂತಹ ಸುಲಭ ದಾರಿ ಬೇಡ, ಇಡೀ ಪುಸ್ತಕವನ್ನು ಓದಿಕೊಂಡೇ ಅವರು ಪರೀಕ್ಷೆಗೆ ಸಿದ್ಧರಾಗಬೇಕು ಎಂಬ ಐಎಸ್‌ ಅಧಿಕಾರಿಯೊಬ್ಬರ ಹಟದಿಂದಾಗಿ ಕಾರ್ಯಕ್ರಮಕ್ಕೆ ಈ ಬಾರಿ ಎಳ್ಳುನೀರು ಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿದ್ಯುತ್‌ ಸಂಪರ್ಕವೇ ಇಲ್ಲದ ಸಾವಿರಾರು ಊರುಗಳು ಈಗಲೂ ಇದ್ದು, ಅಲ್ಲಿನ ಏಕೈಕ ಸಂವಹನ ಸಾಧನ ಎಂದರೆ ರೇಡಿಯೊ.ಕಳೆದ 20 ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತ ಬಂದಿದೆ. ವಿದ್ಯಾರ್ಥಿಗಳು ಶಾಲೆಯಲ್ಲೇ ರೇಡಿಯೊ ಕೇಳಿಕೊಂಡು, ಅಲ್ಲೇ ತಮ್ಮ ಸಂಶಯಗಳನ್ನು ಶಿಕ್ಷಕರ ಮೂಲಕ ಪರಿಹರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಮಧ್ಯಾಹ್ನ 2.30ರಿಂದ 3 ಗಂಟೆಯವರೆಗೆ ಈ ಕಾರ್ಯಕ್ರಮವ ಪ್ರಸಾರವಾಗುತ್ತಿತ್ತು.

‘ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಅವರ ಪೋಷಕರಿಗೆ ತಿಳಿವಳಿಕೆ ನೀಡುವುದು ಅಧಿಕ ಇದೆ, ಶಿಕ್ಷಕರಿಗೂ ಸಂಶಯ ಬಗೆಹರಿಸುವ ಕೆಲಸವನ್ನು ರೇಡಿಯೊ ಮಾಡಿದೆ. ಕೇವಲ ರೇಡಿಯೊ ಕೇಳಿಕೊಂಡೇ ಪರೀಕ್ಷೆ ಪಾಸಾದ ಸಾವಿರಾರು ನಿದರ್ಶನ ಇದೆ. ಹೀಗಿರುವಾಗ ಸರ್ಕಾರ ಈ ಯೋಜನೆ ಕೈಬಿಟ್ಟದ್ದು ಎಷ್ಟು ಸರಿ’ ಎಂದು ಹಲವಾರು ಪೋಷಕರು ದೂರಿದ್ದಾರೆ.

ಆಧುನಿಕ ಸ್ಪರ್ಶ: ‘ರೇಡಿಯೊ ಕಾರ್ಯಕ್ರಮವನ್ನು ಈ ಬಾರಿ ಯೂಟ್ಯೂಬ್‌ ಮೂಲಕವೂ ಪ್ರಸಾರ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಈ ಬಾರಿ ಕಾರ್ಯಕ್ರಮಕ್ಕೆ ಅನುಮತಿ ನೀಡದೆ ಇಡೀ ಯೋಜನೆಯೇ ಸ್ಥಗಿತಗೊಳ್ಳುವಂತಾಗಿದೆ. ಇದರಿಂದ ಆಕಾಶವಾಣಿಗೆ ಯಾವುದೇ ನಷ್ಟ ಇಲ್ಲ, ನಷ್ಟವಾಗಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ’ ಎಂದು ಆಕಾಶವಾಣಿ ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯೆಗೆ ಡಿಎಸ್‌ಇಆರ್‌ಟಿ ನಿರ್ದೇಶಕರು ಸಿಗಲಿಲ್ಲ. ಶಿಕ್ಷಣ ಸಚಿವರಿಂದಲೂ ಪ್ರತಿಕ್ರಿಯೆ ಲಭಿಸಲಿಲ್ಲ.

ಈಗಲೂ ಪ್ರಸಾರ ಸಾಧ್ಯ
ಪ್ರತಿ ವರ್ಷ ಜನವರಿಯಿಂದ ಮಾರ್ಚ್‌ ವರೆಗೆ ‘ಪರೀಕ್ಷಾ ಸಿದ್ಧತೆ’ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಮಾರ್ಚ್‌ ತಿಂಗಳಲ್ಲಿ ಅಂತಿಮ ಹಂತದ ಪರೀಕ್ಷಾ ಸಿದ್ಧತೆಯ ಪಾಠವನ್ನು ಪ್ರಸಾರ ಮಾಡಲಾಗುತ್ತಿತ್ತು. ಸರ್ಕಾರ ಮನಸ್ಸು ಮಾಡಿದರೆ ಹಾಗೂ ಒಪ್ಪಿಗೆ ನೀಡಿದರೆ ಬಾನುಲಿ ಪಾಠ ಸಿದ್ಧಗೊಳಿಸಿ, ಪ್ರಸಾರ ಮಾಡಲು ಆಕಾಶವಾಣಿ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.

ಅಂಕಿ – ಅಂಶಗಳು

₹ 22 ಲಕ್ಷ:58 ವಾರದ ಕಾರ್ಯಕ್ರಮದ ವೆಚ್ಚ

₹ 10 ಲಕ್ಷ:ಮಾರ್ಚ್‌ ತಿಂಗಳ ಕಾರ್ಯಕ್ರಮದ ವೆಚ್ಚ

14:ಆಕಾಶವಾಣಿ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರ

4,500:ಶಾಲೆಗಳಲ್ಲಿ ಇದೆ ರೇಡಿಯೊ ಸೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT