ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ 7.31 ಲಕ್ಷ ಪಠ್ಯ ಪುಸ್ತಕ ನೀರು ಪಾಲು

ಧಾರವಾಡ ಶೈಕ್ಷಣಿಕ ವಲಯದಲ್ಲಿ 10,914 ಶಾಲಾ ಕೊಠಡಿಗಳು ಶಿಥಿಲ, ಭಾಗಶಃ ಹಾನಿ
Last Updated 19 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಧಾರವಾಡ ವಲಯ ವ್ಯಾಪ್ತಿಯ ಸಾವಿರಾರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಜಲಾವೃತಗೊಂಡ ಪರಿಣಾಮ 7,31,164 ಪಠ್ಯಪುಸ್ತಕಗಳು ನೀರುಪಾಲಾಗಿದ್ದು, ವಿದ್ಯಾರ್ಥಿ ಸಮೂಹ ಆತಂಕಕ್ಕೆ ಒಳಗಾಗಿದೆ.

ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಧಾರವಾಡ, ಗದಗ, ಹಾವೇರಿ, ಶಿರಸಿ, ಕಾರವಾರ ಮತ್ತು ವಿಜಯಪುರ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದರಿಂದ 10ನೇ ತರಗತಿ ವರೆಗಿನ ಕನ್ನಡ, ಉರ್ದು ಮತ್ತು ಮರಾಠಿ ಮಾಧ್ಯಮಕ್ಕೆ ಸೇರಿದ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ನೋಟ್‌ಬುಕ್‌ ಹಾಳಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂಬತ್ತು ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಅಧಿಕ ಶಾಲೆಗಳು ಜಲಾವೃತವಾದ ಕಾರಣ 10,914 ಶಾಲಾ ಕೊಠಡಿಗಳು ಶಿಥಿಲ, ಭಾಗಶಃ ಹಾನಿಗೊಳಗಾಗಿವೆ. ಅಲ್ಲದೇ, ಅಂಗನವಾಡಿ ಕೇಂದ್ರಗಳು, ಬಿಸಿಯೂಟದ ಅಡುಗೆ ಮನೆಗಳು, ಆಟದ ಮೈದಾನಗಳಿಗೂ ಹಾನಿಯಾಗಿದೆ ಎಂದು ಹೇಳಿದರು.

ಚಿಕ್ಕೋಡಿ ಹೆಚ್ಚು:

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ, 3,003 ಶಾಲಾ ಕಟ್ಟಡಗಳಿಗೆ ಹಾಗೂ ಬೆಳಗಾವಿ ಜಿಲ್ಲೆಯ 2,631 ಮತ್ತು ಬಾಗಲಕೋಟೆ ಜಿಲ್ಲೆಯ 1,416 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ ಎಂದರು. ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಇನ್ನೂ ಕೆಲವು ಶಾಲೆಗಳು ಜಲಾವೃತ ಸ್ಥಿತಿಯಲ್ಲೇ ಇವೆ.

ಹಾನಿಗೊಳಗಾದ, ಶಿಥಿಲಗೊಂಡ ಕಟ್ಟಡಗಳ ದುರಸ್ತಿ ಕಾರ್ಯ ಆಯಾ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ನಡೆಯಲಿದೆ ಎಂದರು.

ವಿದ್ಯಾರ್ಥಿಗಳ ಆತಂಕ:

ಹಾಳಾಗಿರುವ ಪಠ್ಯಪುಸ್ತಕಗಳನ್ನು ಸರ್ಕಾರ ಹೊಸದಾಗಿ ನೀಡಬಹುದು. ಆದರೆ, ನೋಟ್‌ಬುಕ್‌ ಹಾಳಾಗಿವೆ. ಪರೀಕ್ಷೆಗೆ ತಯಾರಿ ನಡೆಸಲು ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT