ಶುಕ್ರವಾರ, ಫೆಬ್ರವರಿ 21, 2020
26 °C
ಗ್ರಾಮೀಣ ಶಾಲೆಯಂಗಳದಲ್ಲಿ ‘ತಾರೇ ಜಮೀನ್‌ ಪರ್‌’

ಜಿಲ್ಲೆಗೊಂದು ಸಿಕ್ಕೀತೇ ಸಂಚಾರಿ ತಾರಾಲಯ?

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತಾರೇ ಜಮೀನ್ ಪರ್‌’ ಹೆಸರಿನ ಸಂಚಾರಿ ಡಿಜಿಟಲ್‌ ತಾರಾಲಯ ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಶಾಲೆಗಳಿಗೆ ತೆರಳಿ ತಾರಾ ಲೋಕವನ್ನು ತೋರಿಸುತ್ತಿದ್ದರೆ, ರಾಜ್ಯದ ಇತರ ಭಾಗದ ವಿದ್ಯಾರ್ಥಿಗಳಿಗೂ ಈ ಭಾಗ್ಯ ಸಿಗಬಹುದೇ ಎಂಬ ನಿರೀಕ್ಷೆ ತೀವ್ರಗೊಂಡಿದೆ.

ಬಜೆಟ್ ಪೂರ್ವ ಚರ್ಚೆಗಳು, ಸಭೆಗಳಲ್ಲಿ ತಾರಾಲಯ ವಿಷಯವೂ ಪ್ರಸ್ತಾಪವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗೊಂದು ಮೇಲಾಗಿ ಇನ್ನೊಂದು (ಒಟ್ಟು 7) ಸಂಚಾರಿ ತಾರಾಲಯಗಳಿದ್ದರೆ, ಇತರ 24 ಜಿಲ್ಲೆಗಳಿಗೆ ಇರುವುದು ಕೇವಲ ನಾಲ್ಕು ತಾರಾಲಯಗಳು. ಜಿಲ್ಲೆಗೊಂದಾದರೂ ಸಿಗಲಿ ಎಂಬ ಒತ್ತಾಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಂದ ಕೇಳಿಬರುತ್ತಿದೆ.

‘ಎರಡು ವರ್ಷದ ಹಿಂದೆ ಆರಂಭವಾದ ಯೋಜನೆ ಇದು. ಇದುವರೆಗೆ ಕೇವಲ ಸರ್ಕಾರಿ ಶಾಲೆಗಳ ಶೇ 7.5ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ತಲುಪುವುದು ಸಾಧ್ಯವಾಗಿದೆ, ಈ ಬಜೆಟ್‌ನಲ್ಲಿ ಕನಿಷ್ಠ 19 ನೂತನ ಸಂಚಾರಿ ತಾರಾಲಯದ ವ್ಯವಸ್ಥೆ ಮಾಡುವ ಪ್ರಸ್ತಾಪ ಇಟ್ಟಿದ್ದೇವೆ. ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳನ್ನೂ ತಲುಪಬೇಕಾದರೆ ಇನ್ನಷ್ಟು ತಾರಾಲಯಗಳು ಬೇಕಾಗುತ್ತದೆ’ ಎಂದು ತಾರಾಲಯ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿರುವ ವರ್ಣಾಸ್‌ ಟೆಕ್ನಾಲಜೀಸ್ ಸಂಸ್ಥೆಯ ‘ತಾರೇ ಜಮೀನ್‌ ಪರ್‌’ ಯೋಜನೆಯ ಸಿಇಒ ದಿನೇಶ್‌ ಬಾಡಗಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಚಾರಿ ಡಿಜಿಟಲ್‌ ತಾರಾಲಯಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ನಮ್ಮ ಶಾಲೆಯಲ್ಲಿ ಪ್ರದರ್ಶನ ನಡೆಸಿ ಎಂದು ಹಲವಾರು ಕಡೆಗಳಿಂದ ಕರೆಗಳು, ಒತ್ತಡಗಳು ಬರುತ್ತಿವೆ. ಸದ್ಯ ಸರ್ಕಾರಿ ಶಾಲೆಗಳಿಗೆ ಮಾತ್ರ ಉಚಿತವಾಗಿ ಪ್ರದರ್ಶನ ನೀಡುವ ಯೋಜನೆ ಇದೆ, ಅದನ್ನು ಸಾಧಿಸುವುದಕ್ಕಾದರೂ ಜಿಲ್ಲೆಗೊಂದು ಸಂಚಾರಿ ತಾರಾಲಯ ಬೇಕೇ ಬೇಕು’ ಎಂದು ಅವರು ಹೇಳಿದರು.

ಯಾವ ರೀತಿ ಕೆಲಸ?: ಟೆಂಪೊ ಟ್ರಾವೆಲರ್‌ನಲ್ಲಿ ಈ ಸಂಚಾರಿ ತಾರಾಲಯ ಇರುತ್ತದೆ. ಮಡಚಬಹುದಾದ ತಾರಾಲಯ ಗುಮ್ಮಟ ಒಂದು ಪೆಟ್ಟಿಗೆಯಲ್ಲಿದ್ದರೆ, ಡೀಸೆಲ್‌ ಜನರೇಟರ್‌, ಯುಪಿಎಸ್‌, ಜಿಪಿಎಸ್‌, ಹವಾನಿಯಂತ್ರಿತ ವ್ಯವಸ್ಥೆ, ಪ್ರಾಜೆಕ್ಟರ್‌, ಕಂಪ್ಯೂಟರ್‌, 55 ಇಂಚಿನ ಎಲ್‌ಇಡಿ ಟಿವಿ ಇರುತ್ತದೆ. ಇಬ್ಬರು ಸಿಬ್ಬಂದಿ ಇರುತ್ತಾರೆ. ಶಾಲೆಗೆ ಹೋದ ಬಳಿಕ 45 ನಿಮಿಷ ಅದನ್ನು ವ್ಯವಸ್ಥೆಗೊಳಿಸಲು ಸಮಯ ಬೇಕಾಗುತ್ತದೆ. ಒಂದು ದಿನಕ್ಕೆ 10 ಪ್ರದರ್ಶನ ನೀಡಲಾಗುತ್ತದೆ. ಈ ಮೂಲಕ 500 ಮಂದಿಗೆ ತಾರಾಲಯ ವೀಕ್ಷಣೆ ಮಾಡಿಸಲಾಗುತ್ತದೆ. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ವಯೋಮಾನ, ಪಠ್ಯಕ್ರಮಕ್ಕೆ ತಕ್ಕಂತೆ ಸುಮಾರು 13 ತಾರಾಲಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ತೋರಿಸಲಾಗುತ್ತದೆ.

* ₹1 ಕೋಟಿ - ಒಂದು ಸಂಚಾರಿ ತಾರಾಲಯದ ವೆಚ್ಚ

* ₹36 ಲಕ್ಷ - ಒಂದು ತಾರಾಲಯದ ವಾರ್ಷಿಕ ನಿರ್ವಹಣೆ ವೆಚ್ಚ

* 7.5 ಲಕ್ಷ - ಇದುವರೆಗೆ ಪ್ರದರ್ಶನ ವೀಕ್ಷಿಸಿರುವ ವಿದ್ಯಾರ್ಥಿಗಳು

* ಶೇ 7 - ವಿದ್ಯಾರ್ಥಿಗಳನ್ನಷ್ಟೇ ತಲುಪಿರುವ ತಾರಾಲಯ

* 19 - ಸಂಚಾರಿ ತಾರಾಲಯ ಅಗತ್ಯ

ಸಂಚಾರಿ ಪ್ರಯೋಗಾಲಯವೂ ಸಾಧ್ಯ

ಸಂಚಾರಿ ಡಿಜಿಟಲ್‌ ತಾರಾಲಯದೊಂದಿಗೆ ಸಂಚಾರಿ ವಿಜ್ಞಾನ ಪ್ರಯೋಗಾಲಯವನ್ನೂ ಶಾಲೆಗಳಿಗೆ ಕೊಂಡೊಯ್ದು ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಬಹಳಷ್ಟು ಮಾಹಿತಿ ನೀಡಬಹುದು. ಇದಕ್ಕೆ ತಗಲುವ ವೆಚ್ಚ ಬಹಳ ಕಡಿಮೆ. ಗ್ರಾಮೀಣ ಭಾಗದಲ್ಲಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಕ್ರಮಗಳು ಅಗತ್ಯವಾಗಿದ್ದು, ಸರ್ಕಾರ ಇದಕ್ಕೆ ಮನಸ್ಸು ಮಾಡಬೇಕು ಎಂದು ದಿನೇಶ್ ಬಾಡಗಂಡಿ ಹೇಳಿದರು.

***

ತಾರಾಲಯಕ್ಕೆ ₹19 ಕೋಟಿ, ನಿರ್ವಹಣಾ ವೆಚ್ಚಕ್ಕೆ ₹5.50 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲು ಪ್ರಸ್ತಾವ ಸಲ್ಲಿಸಲಾಗಿದೆ, ಮುಖ್ಯಮಂತ್ರಿಯವರು ಸ್ಪಂದಿಸಿದ್ದಾರೆ.

- ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವಿಜ್ಞಾನ, ತಂತ್ರಜ್ಞಾನ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು