ಗುರುವಾರ , ಆಗಸ್ಟ್ 5, 2021
25 °C
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದಿಂದ ವರದಿ ಸಲ್ಲಿಕೆ

ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 18ರಿಂದ ಶೇ 24ಕ್ಕೆ ಹೆಚ್ಚಿಸಬಹುದು ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗ ಶಿಫಾರಸು ಮಾಡಿದೆ.

ಪರಿಶಿಷ್ಟ ಜಾತಿಗೆ ಶೇ 2ರಷ್ಟು(ಈಗ 15ರಷ್ಟಿದೆ) ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 4ರಷ್ಟು(ಈಗ 3ರಷ್ಟಿದೆ) ಮೀಸಲಾತಿ ಹೆಚ್ಚಳ ಮಾಡಬಹುದೇ ಎಂಬುದನ್ನು ಪರಿಶೀಲಿಸಿ  ವರದಿ ಸಲ್ಲಿಸುವಂತೆ ಆಯೋಗ ರಚಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ ಆಯೋಗ ತನ್ನ ವರದಿ ಸಲ್ಲಿಸಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಈಗ ಒಟ್ಟು ಶೇ 50ರಷ್ಟು ಮೀಸಲಾತಿ ಇದ್ದು, ಈ ಪ್ರಮಾಣ ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬಹುದು ಎಂದು ಶಿಫಾರಸು ಮಾಡಲಾಗಿದೆ.

‘ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ಆಯೋಗ ರಚಿಸಬೇಕು. ಜಾತಿಗಣತಿ ನಡೆಸಿ ಒಳ ಮೀಸಲಾತಿ ಕಲ್ಪಿಸಬಹುದು’ ಎಂದೂ ವರದಿ ಶಿಫಾರಸು ಮಾಡಿದೆ. 

9ನೇ ಅನುಸೂಚಿ ಆತಂಕಕ್ಕೂ ಉತ್ತರ
ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿ, ರಾಜ್ಯ ವಿಧಾನ ಮಂಡಲದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕಾಗುತ್ತದೆ. ಕೇಂದ್ರ ಸರ್ಕಾರವೂ ಒಪ್ಪಿದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿಕೊಳ್ಳಬಹುದು.

‘ಆಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಅಥವಾ ಕಡಿಮೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೇ ಇರಲಿದೆ. ಇದರ ವಿರುದ್ಧ ಯಾರೊಬ್ಬರೂ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರುವುದಿಲ್ಲ. ಇದು ಮೀಸಲಾತಿ ಪಡೆಯುವ ಸಮುದಾಯಗಳಿಗೇ ಮುಂದೊಂದು ದಿನ ಮಾರಕವಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕಾನೂನು ತಜ್ಞರು. 

‘ಆದರೆ, 9ನೇ ಅನುಸೂಚಿಯಲ್ಲಿ ಎರಡು ರೀತಿಯ ಅವಕಾಶ ಇದೆ. ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ತೀರ್ಮಾನಗಳನ್ನು ಸರ್ಕಾರ ಕೈಗೊಂಡರೆ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಅವಕಾಶ ಇದೆ. ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ಮಾಡಿದೆ. ಹೀಗಾಗಿ ತೊಂದರೆ ಆಗಲಾರದು ಎಂಬ ಅಭಿಪ್ರಾಯವನ್ನು ಆಯೋಗ ನೀಡಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು