ನೀರುನಾಯಿ ಬೇಟೆ: ಬೋನು ಪತ್ತೆ

7

ನೀರುನಾಯಿ ಬೇಟೆ: ಬೋನು ಪತ್ತೆ

Published:
Updated:
Prajavani

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ನೀರುನಾಯಿ (ಆಟರ್) ಬೇಟೆಗೆ ಸಂಚು ರೂಪಿಸಿರುವುದು ಸೋಮವಾರ ಬೆಳಕಿಗೆ ಬಂದಿದೆ.

ಪಟ್ಟಣದಿಂದ ಪಾಲಹಳ್ಳಿಗೆ ಸಂಪರ್ಕ ಕಲ್ಪಿಸುವ ಹಳೆ ರೈಲ್ವೆ ಸೇತುವೆ (ದಕ್ಷಿಣ ಕಾವೇರಿ ಸೇತುವೆ) ಕೆಳಗೆ ಮೂರು ಕಬ್ಬಿಣದ ಬೋನುಗಳು ಪತ್ತೆಯಾಗಿವೆ. ಈ ಪೈಕಿ ಒಂದರಲ್ಲಿ ಸುಮಾರು 2 ಕೆ.ಜಿ. ತೂಕದ ಮೀನು ಇತ್ತು. ಮೂರು ದಿನಗಳ ಹಿಂದೆಯೇ ಬೋನುಗಳನ್ನು ಇರಿಸಿರಬಹುದು ಎಂದು ಶಂಕಿಸಲಾಗಿದೆ.

ವನ್ಯಜೀವಿ ತಜ್ಞ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ರಾಜಕುಮಾರ್, ಸ್ಥಳೀಯರಾದ ಕೆ.ಚಂದನ್, ರಾಮಚಂದ್ರ ದೀಕ್ಷಿತ್ ಈ ಬೋನುಗಳನ್ನು ಪತ್ತೆಹಚ್ಚಿದ್ದಾರೆ.

'ಕಾವೇರಿ ನದಿಯಲ್ಲಿ ಮೀನು ಹಿಡಿಯುವ ಸೋಗಿನಲ್ಲಿ ನೀರುನಾಯಿಗಳ ಬೇಟೆಗೆ ಹೊಂಚು ಹಾಕಿದ್ದ ವ್ಯಕ್ತಿಯೊಬ್ಬರು ಬೋನುಗಳು ಸಿಕ್ಕ ಸ್ಥಳದಿಂದ ಕೆಳಮುಖವಾಗಿ ಹರಿಗೋಲಿನಲ್ಲಿ ತೆರಳಿದರು. ಸಾಕಷ್ಟು ಅಂತರ ಇದ್ದುದರಿಂದ ಅವರನ್ನು ಗುರುತಿಸಲು ಆಗಲಿಲ್ಲ' ಎಂದು ಕೆ.ಚಂದನ್ ಹೇಳಿದರು.

'ನೀರು ನಾಯಿಗಳು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಸಂಕುಲ. ಮಾಂಸ, ಚರ್ಮಕ್ಕಾಗಿ ಬೇಟೆಯಾಡಲಾಗುತ್ತಿದೆ. ನೀರುನಾಯಿ ಚರ್ಮಕ್ಕೆ ಹೆಚ್ಚಿನ ಬೇಡಿಕೆ ಇದೆ. ವಿದೇಶಗಳಿಗೆ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು ತನಿಖೆ ನಡೆಸಬೇಕು' ಎಂದು ರಾಜಕುಮಾರ್ ಒತ್ತಾಯಿಸಿದ್ದಾರೆ.

'ವನ್ಯಜೀವಿ ಕಾಯ್ದೆ 1972ರ ಪ್ರಕಾರ ನೀರುನಾಯಿ ಬೇಟೆಯಾಡುವುದು ಹುಲಿ ಬೇಟೆಯಾಡಿದಷ್ಟೇ ಶಿಕ್ಷಾರ್ಹ ಅಪರಾಧ' ಎಂದು ಅವರು ಅಭಿಪ್ರಾಯಪಟ್ಟರು.

'ಕಾವೇರಿ ನದಿಯಲ್ಲಿ ನೀರುನಾಯಿ ಬೇಟೆಯಾಡಲು ಬೋನು ಇರಿಸಿರುವುದು ಗೊತ್ತಾಗಿದ್ದು, ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ’ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಎಫ್ಒ ಸಿದ್ದರಾಮಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !