ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುರುವಾಯ್ತು ಸೀಲ್‌ಡೌನ್‌: ಜನ ಹೊರಬಂದರೆ ಕೇಸ್‌, ವಾಹನ ಓಡಾಟ ಬಂದ್

ರಾಜ್ಯದಲ್ಲೇ ಮೊದಲ ಪ್ರಯೋಗ
Last Updated 10 ಏಪ್ರಿಲ್ 2020, 22:01 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿ ಅಪಾಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ‘ಸೀಲ್ ಡೌನ್‌’ ರೂಪದ ಕಠಿಣಕ್ರಮಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಎರಡು ವಾರ್ಡ್‌ಗಳಲ್ಲಿ ಪ್ರಯೋಗಾತ್ಮಕವಾಗಿ ಶುಕ್ರವಾರದಿಂದಲೇ ಇದನ್ನು ಜಾರಿಗೊಳಿಸಲಾಗಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಅಲ್ಪಸ್ವಲ್ಪ ನಿರಾಳತೆ ಇತ್ತು. ಸೀಲ್‌ ಡೌನ್ ವೇಳೆಯಲ್ಲಿ ವಾಹನ ಮತ್ತು ಜನಸಂಚಾರಕ್ಕೆ ಕರ್ಫ್ಯೂ ಮಾದರಿ ಕಠೋರ ನಿರ್ಬಂಧವನ್ನು ಹೇರಲಾಗಿದೆ.

ಕೋವಿಡ್ –19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯಕ್ಕೆ ಕಾಲಿಟ್ಟು ತಿಂಗಳು ಕಳೆಯುವಷ್ಟರಲ್ಲೇ 207ಕ್ಕೆ ಮುಟ್ಟಿದೆ. ಕಠಿಣ ನಿರ್ಬಂಧ ಹೇರದೇ ಇದ್ದರೆ ಪರಿಸ್ಥಿತಿ ಕೈ ಮೀರಿ ಹೋಗಬಹುದೆಂಬ ಆತಂಕವೂ ಸರ್ಕಾರವನ್ನು ಕಾಡಿದೆ. ಹೀಗಾಗಿ, ಅಂತಹ ಪರಿಸ್ಥಿತಿ ಸೃಷ್ಟಿಯಾದರೆ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿರುವ 10 ಜಿಲ್ಲೆಗಳಲ್ಲಿ ರೆಡ್‌ ಝೋನ್‌ಗಳನ್ನು (ರೋಗಿಗಳ ಸಂಖ್ಯೆ ಹೆಚ್ಚಿರುವ) ಸೀಲ್ ಡೌನ್‌ಗೆ ಗುರಿಪಡಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಅದಕ್ಕೆ ಪೂರ್ವಭಾವಿ ಸಿದ್ಧತೆ ನಡೆಸುವುದು ಹಾಗೂ ಸೀಲ್‌ ಡೌನ್ ಹೇರಿದರೆ ಅದರಪರಿಣಾಮ ಏನಾಗಲಿದೆ ಎಂದು ಪರಿಶೀಲಿಸಲು ಎರಡು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ.

ಜನನಿಬಿಡ ಪ್ರಮುಖ ಪ್ರದೇಶಗಳ ಪಟ್ಟಿಯಲ್ಲಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರದ ಬಾಪೂಜಿನಗರ ವಾರ್ಡ್‌ಗಳಲ್ಲಿ ಈ ಪ್ರಯೋಗ ಜಾರಿಯಾಗಿದೆ.ಒಂದೇ ಪ್ರದೇಶದಲ್ಲಿ ಹೊಸದಾಗಿ ಐದು ಪ್ರಕರಣಗಳು ದೃಢಪಟ್ಟ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಮೈಸೂರು ರಸ್ತೆ, ಕೆ.ಆರ್.ಮಾರುಕಟ್ಟೆ, ಸ್ಯಾಟ್‌ಲೈಟ್‌ ಬಸ್ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಈ ವಾರ್ಡ್‌ಗಳಲ್ಲಿ ಸೋಂಕು ಹರಡಿದರೆ ಸಮುದಾಯವನ್ನೇ ಆವರಿಸಿಕೊಂಡು, ನಿಯಂತ್ರಣಕ್ಕೆ ಸಿಗಲಾರದಂತೆ ಹರಡುವ ಸಾಧ್ಯತೆ ಇರುವ ಕಾರಣ ಈ ಕಟ್ಟುನಿಟ್ಟನ ಕ್ರಮವನ್ನು ಕೈಗೊಳ್ಳಲಾಗಿದೆ.

ಎರಡೂ ವಾರ್ಡ್‌ನಲ್ಲಿ ವಾಹನ ಮತ್ತು ಜನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಎಲ್ಲಾ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್‌ ಅಳವಡಿಸಿ ಪೊಲೀಸರು ಬಂದ್ ಮಾಡಿದ್ದಾರೆ. ಎರಡು ಕಡೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.ಈ ವಾರ್ಡ್‌ಗಳ ನಿವಾಸಿಗಳಲ್ಲದವರಿಗೆ ಪ್ರವೇಶವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

‘ಭಯಪಡಬೇಕಿಲ್ಲ’: ‘ಮುಂಜಾಗ್ರತಾ ಕ್ರಮವಾಗಿ ನಗರದ ಎರಡು ವಾರ್ಡ್‌ಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಸೀಲ್‌ಡೌನ್ ಮಾಡಲಾಗಿದೆ. ನಗರದ ಉಳಿದ ಪ್ರದೇಶಗಳಲ್ಲೂ ಸೀಲ್‌ಡೌನ್ ಮಾಡುವ ಸುದ್ದಿ ಹರಿದಾಡುತ್ತಿದ್ದು, ಇದನ್ನು ಜನ ನಂಬಬಾರದು. ಇಂಥಯಾವುದೇ ನಿರ್ಧಾರವನ್ನು ಇದುವರೆಗೂ ತೆಗೆದುಕೊಂಡಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಮನೆಮನೆಗೆ ಆರೋಗ್ಯ ಸಿಬ್ಬಂದಿ: ಸೀಲ್ ಡೌನ್ ಘೋಷಿತ ಪ್ರದೇಶದ ಪ್ರತಿ ಮನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಎಲ್ಲರ ಮಾಹಿತಿ ಸಂಗ್ರಹಿಸಿ, ಅಗತ್ಯವುಳ್ಳವರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ.

ಹೇಗಿರುತ್ತದೆ?

* ನಿವಾಸಿಗಳು ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ಎಲ್ಲಾ ಅಗತ್ಯ ವಸ್ತುಗಳನ್ನೂ ಮನೆಮನೆಗೆ ಪೂರೈಸಲಾಗುವುದು

* ಸೀಲ್‌ಡೌನ್‌ ಜಾರಿಯಲ್ಲಿರುವ ಪ್ರದೇಶದ ಎಲ್ಲಾ ರಸ್ತೆಗಳು ಬಂದ್ ಮಾಡಲಾಗುತ್ತದೆ. ಒಂದು ಅಥವಾ ಎರಡುಪ್ರವೇಶ ದ್ವಾರಗಳು ಇರುತ್ತವೆ. ಅಲ್ಲಿ ಪೊಲೀಸರು ಸದಾ ಕಣ್ಗಾವಲಿನಲ್ಲಿ ಇರುತ್ತಾರೆ.

* ಆಂಬುಲೆನ್ಸ್‌, ವೈದ್ಯಕೀಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ.

* ಅನುಮತಿ ಇಲ್ಲದೆ ಮನೆಯಿಂದ ಹೊರಗೆ ಬಂದರೆ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗುತ್ತದೆ.

* ಈಗಾಗಲೇ ವಿತರಿಸಿರುವ ಪಾಸ್‌ಗಳು ಅನೂರ್ಜಿತಗೊಳ್ಳುತ್ತವೆ. ಅಗತ್ಯವಿರುವವರಿಗೆ ಹೊಸದಾಗಿ ಪಾಸ್‌ ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT