ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭವಾಗದ ಋತುಮಾನ ಶಾಲೆಗಳು

ಹರಪನಹಳ್ಳಿ: ಗುಳೆ ಹೋದವರ‌ ಮಕ್ಕಳಿಗೆ ಸಿಗದ ಶಿಕ್ಷಣ ಸೌಲಭ್ಯ
Last Updated 4 ಜನವರಿ 2020, 20:17 IST
ಅಕ್ಷರ ಗಾತ್ರ

ಹರಪನಹಳ್ಳಿ: ಪ್ರತಿ ವರ್ಷ ಗುಳೆ ಹೋಗುವ ಮಕ್ಕಳಿಗಾಗಿ ಸರ್ಕಾರ ನಡೆಸುತ್ತಿದ್ದ ಋತುಮಾನ ಶಾಲೆಗಳು 2019-20ನೇ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಪ್ರತಿ ವರ್ಷ ಶಿಕ್ಷಣ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವ ಪ್ರದೇಶಗಳನ್ನು ಗುರುತಿಸಿ ಋತುಮಾನ ಶಾಲೆ ಸ್ಥಾಪಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿತ್ತು.

ಆದರೆ, ಈ ಬಾರಿ ಈ ಶಾಲೆ ಆರಂಭ ಆಗದಿರುವುದರಿಂದ ವಲಸೆ ಹೋಗಿರುವ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ವೃದ್ಧರ ಜೊತೆಗಿರುವ ಚಿಕ್ಕ ಮಕ್ಕಳು ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸೇವಾನಗರ, ಬೆಂಡಿಗೇರೆ ಸಣ್ಣತಾಂಡಾ, ಹಾರಕನಾಳು ಸಣ್ಣತಾಂಡಾ, ದೊಡ್ಡತಾಂಡಾ, ಚನ್ನಹಳ್ಳಿ ತಾಂಡಾದಲ್ಲಿ ಅಂದಾಜು 300 ಮಕ್ಕಳಿಗೆ ವಸತಿ, ಊಟ ಮತ್ತು ಕಲಿಕೆಯ ಸಾಮಗ್ರಿಗಳನ್ನು ಕೊಟ್ಟಿದ್ದರು.

ಈ ಶಾಲೆಗಳು ಡಿಸೆಂಬರ್‌ನಿಂದ ಆರಂಭವಾಗಿ ಮಾರ್ಚ್ ಅಂತ್ಯದವರೆಗೂ ಅಸ್ತಿತ್ವದಲ್ಲಿರುತ್ತಿದ್ದವು. ಸರ್ಕಾರಿ ಶಾಲೆಯ ವೇಳಾಪಟ್ಟಿಯ ಅನ್ವಯ ಓದುತ್ತಿದ್ದ ಮಕ್ಕಳು, ರಾತ್ರಿ ಸರ್ಕಾರ ನಿಗದಿಪಡಿಸಿದ ಬಾಡಿಗೆ ಕಟ್ಟಡ ಅಥವಾ ಶಾಲಾ ಕೊಠಡಿಯಲ್ಲಿಯೇ ವಸತಿ ಸೌಲಭ್ಯ ಪಡೆಯುತ್ತಿದ್ದರು. ರಾತ್ರಿ ಕಾವಲುಗಾರರನ್ನು ನೇಮಿಸಿ ಮಕ್ಕಳ ಬಗ್ಗೆ ಕಾಳಜಿ ವಹಿಸಲಾಗುತ್ತಿತ್ತು.

ಗುಣಮಟ್ಟದ ಸಾಮಗ್ರಿ ಇಡುವ ಪೆಟ್ಟಿಗೆ, ಹಾಸಿಗೆ, ಹೊದಿಕೆ ಹಾಗೂ ಹೆಚ್ಚುವರಿ ಎರಡು ಜೊತೆ ಸಮವಸ್ತ್ರಗಳನ್ನು ಕೊಡುತ್ತಿದ್ದರು.

ಪ್ರತಿ ವಿದ್ಯಾರ್ಥಿಗೆ ನಾಲ್ಕು ತಿಂಗಳಲ್ಲಿ ತಲಾ ₹ 10 ಸಾವಿರದಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡುತ್ತಿದ್ದರು.

‘ಸರ್ಕಾರ ಋತುಮಾನ ಶಾಲೆ ಆರಂಭಿಸುತ್ತದೆ ಎಂಬ ನಿರೀಕ್ಷೆಯಿಂದ ನಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದೇವೆ. ಮನೆಯಲ್ಲಿ ವೃದ್ಧ ತಂದೆ-ತಾಯಿಗಳಿದ್ದಾರೆ. ಶಾಲೆ ಆರಂಭವಾಗದೇ ಮಕ್ಕಳ ಬಗ್ಗೆಯೇ ಚಿಂತೆಯಾಗಿದೆ’ ಎನ್ನುತ್ತಾರೆ ಹಾರಕನಾಳ ದೊಡ್ಡತಾಂಡಾದ ಮಂಜ್ಯನಾಯ್ಕ.

ನಂಜುಂಡಪ್ಪ ವರದಿಯ ಅನ್ವಯ ಹರಪನಹಳ್ಳಿ ಹಿಂದುಳಿದ ಪ್ರದೇಶ. ದುಡಿಮೆಗಾಗಿ ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುತ್ತಾರೆ. ಅಂತಹವರ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಪ್ರತಿ ವರ್ಷ ಋತುಮಾನ ಶಾಲೆಗಳನ್ನು ಆರಂಭ ಮಾಡಿದೆ.

ಆದರೆ, ಈ ವರ್ಷ ಹರಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು, ಬಳ್ಳಾರಿ ಜಿಲ್ಲೆಗೆ ಸೇರಿದ ಪರಿಣಾಮವಾಗಿ ತಾಂತ್ರಿಕ ತೊಂದರೆ ಆಗಿ ಋತುಮಾನ ಶಾಲೆಗೆ ಅನುದಾನದ ಕೊರತೆಯಾಗಿದೆ.

***

ಜಿಲ್ಲೆ ಬದಲಾವಣೆಯ ವೇಳೆ ತಾಂತ್ರಿಕ ತೊಂದರೆಯಾದ ಪರಿಣಾಮವಾಗಿ ಋತುಮಾನ ಶಾಲೆ ಸ್ಥಾಪನೆಗೆ ಅಡಚಣೆ ಆಗಿದೆ. ಇಲಾಖೆಯ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ.

–ಎಸ್.ಎಂ.ವೀರಭದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT