ದ್ವಿತೀಯ ಪಿಯುಸಿ ಮೌಲ್ಯಮಾಪನ: ಮೊದಲ ದಿನವೇ ಶೇ 30 ಉಪನ್ಯಾಸಕರು ಗೈರು

ಮಂಗಳವಾರ, ಏಪ್ರಿಲ್ 23, 2019
31 °C
ದ್ವಿತೀಯ ಪಿಯು ಉತ್ತರಪತ್ರಿಕೆ ಡಿಕೋಡಿಂಗ್‌, ಮೌಲ್ಯಮಾಪನಕ್ಕೆ ಗೈರಾದರೆ ಕ್ರಿಮಿನಲ್‌ ಮೊಕದ್ದಮೆ

ದ್ವಿತೀಯ ಪಿಯುಸಿ ಮೌಲ್ಯಮಾಪನ: ಮೊದಲ ದಿನವೇ ಶೇ 30 ಉಪನ್ಯಾಸಕರು ಗೈರು

Published:
Updated:

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಸೋಮವಾರದಿಂದ ಆರಂಭವಾಗಲಿದ್ದು, ಸಹಾಯಕ ಮೌಲ್ಯಮಾಪಕರು ಮತ್ತು ಉಪ ಮುಖ್ಯ ಮೌಲ್ಯಮಾಪಕರಲ್ಲಿ ಶೇ 30 ರಷ್ಟು ಮಂದಿ ಗೈರಾಗಿದ್ದಾರೆ.

ಮೌಲ್ಯಮಾಪನದ ಡಿಕೋಡಿಂಗ್‌ ಕಾರ್ಯ ಶನಿವಾರ ಆರಂಭಗೊಂಡಿದ್ದು ಮೊದಲ ದಿನವೇ  ಉಪನ್ಯಾಸಕರು ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆ, ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗದಿದ್ದರೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ. 

ಉಪ ಮುಖ್ಯ ಮೌಲ್ಯಮಾಪಕರು ಮತ್ತು ಸಹಾಯಕ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸಬೇಕಾಗಿರುವ ಎಲ್ಲ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ತಕ್ಷಣವೇ ಹಾಜರಾಗಲು ಸೂಚನೆ ನೀಡಬೇಕು ಎಂದು ಡಿಡಿಪಿಯುಗಳಿಗೆ ಶನಿವಾರ ಇಲಾಖೆ ನಿರ್ದೇಶಕ ಡಾ. ಪಿ.ಸಿ.ಜಾಫರ್‌ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ.

ಒಂದು ವೇಳೆ ಗೈರಾದರೆ ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಈ ಬಾರಿ ಮೌಲ್ಯ ಮಾಪನ ಕಾರ್ಯಕ್ಕೆ 18,005 ಸಹಾಯಕ ಮೌಲ್ಯಮಾಪಕರು ಮತ್ತು 3114 ಉಪಮುಖ್ಯ ಮೌಲ್ಯಮಾಪಕರುಗಳಿಗೆ ಇಲಾಖೆ ಆದೇಶ ಕಳುಹಿಸಿತ್ತು.

ಅಲ್ಲದೆ, ಎಲ್ಲಾ ಪ್ರಾಂಶುಪಾಲರಿಗೆ ಆನ್‌ಲೈನ್‌ ಮೂಲಕ ಸಹಾಯಕ ಮೌಲ್ಯಮಾಪಕರು ಹಾಗೂ ಉಪ ಮುಖ್ಯ ಮೌಲ್ಯಮಾಪಕರು ನೇಮಕಾತಿ ಪಟ್ಟಿಯನ್ನು ಆನ್‌ಲೈನ್‌ ಪೋರ್ಟಲ್‌ನಲ್ಲಿ ಕಳುಹಿಸಿತ್ತು.

ಯಾವುದೇ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗದೇ ಉಳಿಯುವ ಸಂದರ್ಭದಲ್ಲಿ ಪ್ರಾಂಶುಪಾಲರನ್ನು
ಹೊಣೆಗಾರರನ್ನಾಗಿಸಲಾಗುವುದು. ಮೌಲ್ಯಮಾಪನ ಕಾರ್ಯವು ಒಂದು ಸೂಕ್ಷ್ಮ ಹಾಗೂ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದ್ದು, ಈ ಕಾರ್ಯವನ್ನು ಅತ್ಯಂತ ಶ್ರದ್ಧೆ ಹಾಗೂ ಜಾಗರೂಕತೆಯಿಂದ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಾಫರ್‌ ಹೇಳಿದ್ದಾರೆ.

ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಖಡಕ್ ಸೂಚನೆ

ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಸಾಮೂಹಿಕ ನಕಲು, ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಶನಿವಾರ  ಎಲ್ಲಾ ಜಿಲ್ಲೆಗಳ ಡಿಡಿಪಿಐಗಳು ಮತ್ತು ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ವಿಡಿಯೊ ಕಾನ್ಫೆರೆನ್ಸಿಂಗ್‌ ಮೂಲಕ ಮಾತುಕತೆ ನಡೆಸಿದ ಅವರು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮಗಳ ಪ್ರಕರಣನ್ನು ಉಲ್ಲೇಖಿಸಿ ಮುಂದೆ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ತಾಕೀತು ಮಾಡಿದರು.

ಮುಂದೆ ನಡೆಯುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು 35 ಅಂಕಗಳಿಗೆ ಉತ್ತರ ಬರೆಸುವುದು, ನಕಲು ಮಾಡಲು ಅವಕಾಶ ನೀಡುವುದು, ಚೀಟಿ ಸರಬರಾಜು ಮಾಡುವುದು ಕಂಡು ಬಂದಂತೆ ವಿದ್ಯಾರ್ಥಿಗಳಿರಲಿ, ಶಿಕ್ಷಕರಿರಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

ಪರೀಕ್ಷಾ ಕೇಂದ್ರಗಳ ಮೇಲೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ನಿಗಾ ಇರಿಸಲಾಗುವುದು. ಯಾರೇ ತಪ್ಪು ಮಾಡಿದರೂ ಸುಮ್ಮನಿರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !