ತರಗತಿಯೊಳಗೆ ರಹಸ್ಯ ಕೆಮರಾ–ಆತಂಕ

7
ಪ್ರಾಧ್ಯಾಪಕರ ವಿರುದ್ಧ ಸಾಲು ಸಾಲು ದೂರು

ತರಗತಿಯೊಳಗೆ ರಹಸ್ಯ ಕೆಮರಾ–ಆತಂಕ

Published:
Updated:

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಅಧ್ಯಾಪ‍ನ ಮತ್ತು ಪ್ರೋಗ್ರಾಂ ಕುರಿತು ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನದಲ್ಲಿ ಹಲವಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿಯಲ್ಲಿ ರಹಸ್ಯ ಕೆಮರಾ ಅಳವಡಿಸಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

2015–16ನೇ ಸಾಲಿನ ವಿದ್ಯಾರ್ಥಿಗಳು ನೀಡಿದ ಮೌಲ್ಯಮಾಪನ ಪತ್ರಗಳಲ್ಲಿ ವಿವಿಯ ಬೋಧನಾ ಪದ್ಧತಿ ಮತ್ತು ಪ್ರೋಗ್ರಾಂ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರವನ್ನು ಟಿಕ್‌ ಮಾಡುವ ಅವಕಾಶ ನೀಡಲಾಗಿದೆ. ಆದರೆ ಕೋರ್ಸಿನ ಬಗ್ಗೆ ಅಥವಾ ಅಧ್ಯಾಪಕರ ಬಗ್ಗೆ ಟೀಕೆ ಟಿಪ್ಪಣಿ ಬರೆಯಲು ಮೀಸಲಿಟ್ಟ ಜಾಗದಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಉಮೇಶ್‌ ನಾಯ್ಕ್‌ ಅವರು ಕಿರುಕುಳ ನೀಡುತ್ತಿರುವ ಬಗ್ಗೆ ವಿವರಿಸಿದ್ದಾರೆ.

‘ತರಗತಿ ನಡೆಯುವಾಗ ಹಿಡನ್‌ ಕ್ಯಾಮೆರಾ ಇಡುತ್ತಾರೆ. ಇದು ವಿದ್ಯಾರ್ಥಿನಿಯರಿಗೆ ತುಂಬ ಕಿರಿಕಿರಿ ಉಂಟು ಮಾಡುತ್ತಿದೆ’ ಎಂದು ಒಂದು ಪತ್ರದಲ್ಲಿ ವಿವರಿಸಿದ್ದರೆ, ವಿಭಾಗ ಮುಖ್ಯಸ್ಥರ ಅನುಮತಿ ಇಲ್ಲದೇ ರಹಸ್ಯ ಕ್ಯಾಮೆರಾ ಬಳಸುವುದು ತಪ್ಪು ಎಂದು ಮತ್ತೊಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಈ ಆರೋಪಗಳನ್ನು ಡಾ.ಉಮೇಶ್‌ ನಾಯ್ಕ್ ಅಲ್ಲಗಳೆದಿದ್ದು, ವಿದ್ಯಾರ್ಥಿನಿಯರು ನಕಲು ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರಿಂದಲೇ ಇಂತಹ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ದೂರು: ವಿಶ್ವವಿದ್ಯಾಲಯದ ‘ಸ್ಪರ್ಶ್‌’ ಸಮಿತಿಗೆ (ಸೆನ್ಸಿಟೈಸೇಷನ್‌, ಪ್ರಿವೆಂಷನ್‌ ಆಂಡ್‌ ರಿಡ್ರೆಸ್‌ ಆಫ್‌ ಸೆಕ್ಸುವಲ್ ಹರಾಸ್‌ಮೆಂಟ್‌) ದೂರುಗಳು ಬಂದಿದ್ದು, ಡಾ. ಉಮೇಶ್‌ ನಾಯ್ಕ್‌ ಅವರು ಕಿರುಕುಳ ನೀಡುತ್ತಿರುವ ಬಗ್ಗೆ ವಿವರವಾದ ಪತ್ರವನ್ನು ವಿದ್ಯಾರ್ಥಿಗಳು ಬರೆದಿದ್ದಾರೆ.

‘ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ತಾವು ರಹಸ್ಯ ಕೆಮರಾ ಅಳವಡಿಸಿರುವುದಾಗಿ ಹೇಳಿ ವಿದ್ಯಾರ್ಥಿನಿಯರನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ವಿವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಾಗ  ಇದೇ ತರಗತಿಯಲ್ಲಿ ಬಟ್ಟೆ ಬದಲಿಸುವುದು ವಾಡಿಕೆ. ಕ್ಯಾಮೆರಾ ಇರಬಹುದು ಎಂಬ ಆತಂಕ ವಿದ್ಯಾರ್ಥಿನಿಯರನ್ನು ಖಿನ್ನರನ್ನಾಗಿ ಮಾಡುತ್ತಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಈ ಪ್ರಾಧ್ಯಾಪಕರು ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ, ಪ್ರವಾಸ ಹೋದ ಸಂದರ್ಭದಲ್ಲಿ ಕಿರುಕುಳ ನೀಡಿದ ಬಗ್ಗೆ ಹಾಗೂ ಪ್ರಯೋಗಾಲಯದಲ್ಲಿ ಅನುಚಿತ ವರ್ತನೆ ಮತ್ತು ಪಾಠ ಮಾಡುವಾಗ ಪಕ್ಷಪಾತ ಧೋರಣೆಯನ್ನು ಅನಸರಿಸುತ್ತಿರುವ ಕುರಿತು ದೂರುಗಳು ವಿವರಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸ್ಪರ್ಶ್‌ ಸಮಿತಿಯು ಆಂತರಿಕ ತನಿಖೆ ನಡೆಸಿದ್ದು 2018ರ ಏಪ್ರಿಲ್‌ 4ರಂದು ಕುಲಸಚಿವರಿಗೆ ವರದಿ ಸಲ್ಲಿಸಿದೆ. ತನಿಖೆಯ ಸಂದರ್ಭದಲ್ಲಿ ಆರೋಪಿಯು ಸಮಿತಿಯ ಅಸ್ತಿತ್ವವನ್ನೇ ಪ್ರಶ್ನಿಸಿದ್ದು ತನಿಖೆಗೆ ಸಹಕರಿಸಿಲ್ಲ ಎಂಬ ಅಸಮಾಧಾನವನ್ನು ಸಮಿತಿ ವ್ಯಕ್ತಪಡಿಸಿದೆ.

‘ಪ್ರತಿಭಾ ದಿನಾಚರಣೆಯಂದು ವೇಷಭೂಷಣ ಬದಲಿಸಲು ವಿದ್ಯಾರ್ಥಿನಿಯರು ತರಗತಿಯನ್ನು ಬಳಸಿಕೊಂಡಿದ್ದಾರೆ.  ಈ ಸಂದರ್ಭ ತಾನು ರಹಸ್ಯ ಕೆಮರಾ ಅಳವಡಿಸಿದ್ದು, ವಿದ್ಯಾರ್ಥಿನಿಯರನ್ನು ಗಮನಿಸುತ್ತಿದ್ದೇನೆ ಎಂದೂ ಪ್ರಾಧ್ಯಾಪಕರು ಹೇಳಿದ್ದಾರೆ. ಪ್ರಯೋಗಾಲಯದಲ್ಲಿ ಅನುಚಿತ ವರ್ತನೆ, ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಬೆದರಿಕೆಯ ಕರೆ ಮಾಡಿರುವುದು ಗಮನಕ್ಕೆ ಬಂದಿದೆ. ಆರೋಪಿಯು ಲೈಂಗಿಕ ದೌರ್ಜನ್ಯದ ದುರ್ವರ್ತನೆಯನ್ನು ತೋರಿದ್ದು, ವಿವಿ ಆಡಳಿತವು ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಡಾ. ಮುಸ್ತಿಯಾರಿ ಬೇಗಂ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದೆ. ಗ್ರಂಥಾಲಯ ವಿಜ್ಞಾನ ತರಗತಿಯ 10ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ದೂರುದಾರರಾಗಿದ್ದಾರೆ.

ವಿವಿಯ ಪ್ರಭಾರ ಕುಲಪತಿ ಡಾ. ಕಿಶೋರ್‌ ಕುಮಾರ್‌ ಸಿ.ಕೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

**

‘ತುರ್ತು ಕ್ರಮ ಅಗತ್ಯ’

ಸ್ಪರ್ಶ್‌ ಸಮಿತಿಯ ವರದಿ ಏನೇ ಇರಲಿ, ವಿದ್ಯಾರ್ಥಿಗಳು ಮೌಲ್ಯಮಾಪನ ಪತ್ರದಲ್ಲಿ ದೌರ್ಜನ್ಯದ ಬಗ್ಗೆ ಹೇಳಿದ್ದಾರೆ. ಅಲ್ಲದೆ ಪತ್ರಗಳನ್ನು ಬರೆದು, ಸಿಡಿಯನ್ನು ನೀಡಿ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವಿವರಿಸಿದ್ದಾರೆ. ದೂರುದಾರರ ಪೈಕಿ ದಲಿತ ವಿದ್ಯಾರ್ಥಿನಿಯರೂ ಇದ್ದಾರೆ. ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಈ ಪ್ರಕರಣದ ಬಗ್ಗೆ ವಿವಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಿಂಡಿಕೇಟ್‌ ಮಾಜಿ ಸದಸ್ಯ ಹರೀಶ್‌ ಆಚಾರ್ಯ ಹೇಳಿದ್ದಾರೆ.

**

ಸ್ಪರ್ಶ್‌ ಸಮಿತಿ ರಚನೆಯೇ ಕಾನೂನುಬದ್ದವಾಗಿಲ್ಲ. ಈ ನಿಟ್ಟಿನಲ್ಲಿ ನಾನು ಹೈಕೋರ್ಟ್‌ ಮೊರೆ ಹೋಗಿದ್ದು ಎರಡು ತಿಂಗಳ ಹಿಂದೆ ಕೋರ್ಟ್‌ ಸ್ಟೇ ನೀಡಿರುತ್ತದೆ. ನಾನು ದಲಿತನೆಂದು ನನ್ನನ್ನು ಗುರಿ ಮಾಡಿ ಈ ಆರೋಪ ಮಾಡಲಾಗುತ್ತಿದೆ.
–ಡಾ. ಉಮೇಶ್‌ ನಾಯ್ಕ್‌, ಮಂಗಳೂರು ವಿವಿ ಪ್ರಾಧ್ಯಾಪಕ‌

**

ಈ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಲು ನಾನು ಬಯಸುವುದಿಲ್ಲ.
-ಡಾ. ನಾಗೇಂದ್ರ ಪ್ರಕಾಶ್‌, ವಿವಿ ಕುಲಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !