ಬುಧವಾರ, ಏಪ್ರಿಲ್ 1, 2020
19 °C
ಸಂಘಟಕರ ವಿರುದ್ಧವೂ ಕ್ರಮ: ಅಧಿಕಾರಿಗಳ ಸಭೆ ಇಂದು

ದೇಶದ್ರೋಹ ಪ್ರಕರಣ: ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ಹಾವೇರಿ: ‘ಕಾಲೇಜು, ಹಾಸ್ಟೆಲ್‌ಗಳಲ್ಲಿ ದೇಶದ್ರೋಹಿ ಪ್ರಕರಣಗಳು ನಡೆಯದಂತೆ ಜಾಗ್ರತೆ ವಹಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಕಾಲೇಜು, ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳ ಮೇಲೆ ಆಯಾ ಸಂಸ್ಥೆಗಳೇ ನಿಗಾ ವಹಿಸಬೇಕು. ದೇಶದ್ರೋಹಿ ಪ್ರಕರಣಗಳು ಅಕಸ್ಮಾತ್‌ ನಡೆದರೆ, ಪೊಲೀಸರಿಗೆ ಮಾಹಿತಿ ನೀಡಬೇಕು. ಗೊತ್ತಿದ್ದೂ ಸುಮ್ಮನಿರುವವರ ವಿರುದ್ಧ ಕ್ರಮ ಖಚಿತ ’ ಎಂದರು.

‘ಸಿಎಎ ವಿರುದ್ಧ ಸುಳ್ಳು ಪ್ರಚಾರ ಮಾಡಿ, ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತಿರುವ ವಿರೋಧ ಪಕ್ಷಗಳ ಜತೆಯಲ್ಲಿ ದೇಶದ್ರೋಹಿ ಶಕ್ತಿಗಳು ಸೇರಿಕೊಂಡಿವೆ. ಅಂತಹ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ತೀರ್ಮಾನಿಸಿದ್ದೇವೆ’ ಎಂದು ಅವರು ಹೇಳಿದರು.

‘ಜೆಎನ್‌ಯು, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗಳು ಕರ್ನಾಟಕದಲ್ಲೂ ನಡೆಯುತ್ತಿವೆ. ದೇಶದ್ರೋಹಿ ಹೇಳಿಕೆ ನೀಡುತ್ತಿರುವ ಅಮೂಲ್ಯಾ ಅಂತಹವರಿಗೆ ಕುಮ್ಮಕ್ಕು ನೀಡುವ ಹಾಗೂ ಕಾನೂನು ನೆರವು ನೀಡುವ ಕೆಲ ವ್ಯಕ್ತಿಗಳು, ಸಂಘಟನೆ
ಗಳಿರುವುದು ಗಮನಕ್ಕೆ ಬಂದಿದೆ. ದೇಶದ್ರೋಹಿ ಶಕ್ತಿಗಳನ್ನು ನಿಯಂತ್ರಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆಯನ್ನು ಭಾನುವಾರ ಕರೆದಿದ್ದೇನೆ’ ಎಂದರು. 

‘ಅಮೆರಿಕ ಮೂಲದ ಅಂತರ್ಜಾಲ ಕಂಪನಿಗಳು ಭಾರತದ ವಿರುದ್ಧ ನಿರಂತರ ಪೋಸ್ಟ್‌ ಮಾಡುತ್ತಿವೆ. ಅಂತಹ ಕಂಪನಿಗಳ ಮೇಲೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಸರ್ಕಾರ ಕೋರಿದ್ದೇವೆ. ಶಾಂತಿ ಕದಡುವ ಸಂಘಟನೆಗಳಿಗೆ ವಿದೇಶದಿಂದ ₹700 ಕೋಟಿಗೂ ಹೆಚ್ಚು ಹಣ ಸಂದಾಯವಾದ ಮಾಹಿತಿ ಇದೆ’ ಎಂದರು.

*
ಸಿಎಎ ವಿರೋಧದ ಹೆಸರಿನಲ್ಲಿ ದೇಶದ್ರೋಹಿ ಹೇಳಿಕೆಗಳನ್ನು ನೀಡುವ ಕೆಲಸವು ನಕ್ಸಲ್, ಕಮ್ಯುನಿಸ್ಟ್ ವಿಚಾರಧಾರೆಯ ಮೂಲಕ ಆಗುತ್ತಿದೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ.
-ನಳಿನ್ ಕುಮಾರ್ ಕಟೀಲ್‌, ಬಿಜೆ‍ಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು