ಮಂಗಳವಾರ, ಆಗಸ್ಟ್ 20, 2019
22 °C

‘ಶ್ರೀ ಗುರುಭ್ಯೋ ನಮಃ’ ಎಂದು ದೀರ್ಘದಂಡ ನಮಸ್ಕಾರ ಮಾಡಿದ ವ್ಯಾಸರಾಜ ಮಠದ ಸ್ವಾಮೀಜಿ

Published:
Updated:

ಆನೆಗೊಂದಿ (ಕೊಪ್ಪಳ ಜಿಲ್ಲೆ): ವ್ಯಾಸತೀರ್ಥರ ಮೂಲ ಬೃಂದಾವನ ಧ್ವಂಸಗೊಂಡಿರುವ ಕೊಪ್ಪಳ ಜಿಲ್ಲೆ ಆನೆಗೊಂದಿಯ ನವಬೃಂದಾವನ ನಡುಗಡ್ಡೆಗೆ ಬಂದ ವ್ಯಾಸರಾಜ ಮಠದ (ಸೋಸಲೆ) ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಭಾವುಕರಾದರು. ಮಠದ ಮೂಲ ಗುರುಗಳ ಬೃಂದಾವನ ಧ್ವಂಸವಾಗಿರುವುದನ್ನು ಕಂಡ ಮುಖ ಕಳೆಗುಂದಿತು.

ಬೃಂದಾವನದ ಭಾಗವಾಗಿದ್ದ ಕಲ್ಲುಗಳಿಗೇ ‘ಶ್ರೀ ಗುರುಭ್ಯೋ ನಮಃ’ ದೀರ್ಘದಂಡ ನಮಸ್ಕಾರ ಮಾಡಿ ಕಣ್ಮುಚ್ಚಿ ಗುರುಗಳನ್ನು ಸ್ಮರಿಸಿದರು. ನವಬೃಂದಾವನಕ್ಕೆ ಧಾವಿಸಿ ಬಂದ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಜೊತೆಗೆ ಜೀರ್ಣೋದ್ಧಾರದ ಕುರಿತು ಸವಿವರವಾಗಿ ಚರ್ಚಿಸಿದರು.

ಇದನ್ನೂ ಓದಿ: ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿದರು. ಅವರ ಮಾತುಗಳ ಅಕ್ಷರರೂಪ ಇಲ್ಲಿದೆ...

‘ವ್ಯಾಸರಾಜರು ಕೇವಲ ಮಾಧ್ವ ಸಮುದಾಯಕ್ಕೆ ಮಾತ್ರವಲ್ಲ, ಎಲ್ಲ ಆಸ್ತಿಕರಿಗೂ ಭಗವದ್ಬಕ್ತರಿಗೂ ವಿಶೇಷವಾಗಿ ಭಾರತೀಯ ತತ್ವಶಾಸ್ತ್ರದ ಬಗ್ಗೆ ಆದರ ಇರುವ ಎಲ್ಲರಿಗೂ ಪೂಜ್ಯರು. ಅವರು ತಮ್ಮ ಜೀವಿತ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ 6ನೇ ಚಕ್ರವರ್ತಿಗೆ ಗುರುಗಳಾಗಿದ್ದರು. ಕೃಷ್ಣದೇವರಾಯ ಅವರನ್ನು ವಿಶೇಷವಾಗಿ ಕೊಂಡಾಡಿದ್ದಾನೆ. ಯಾವುದೇ ಜಾತಿ ಮತದ ಭೇದವಿಲ್ಲದೆ ಎಲ್ಲರ ಆದರಕ್ಕೆ ಪಾತ್ರರಾಗಿದ್ದವರು.

‘ತತ್ವಶಾಸ್ತ್ರದಲ್ಲಿ ಹೇಗೆ ಅಗಾಧವಾದ  ಕೆಲಸ ಮಾಡಿದ್ದಾರೋ ಹಾಗೆಯೇ ಕರ್ನಾಟಕದ ದಾಸ ಸಾಹಿತ್ಯ ಪರಂಪರೆಗೂ ಅವರ ಸೇವೆ ಸಂದಿದೆ. ಕನಕದಾಸರು, ಪುರಂದರದಾಸರಿಗೆ ದೀಕ್ಷೆ ಕೊಟ್ಟು ಕನ್ನಡ ಸಾಹಿತ್ಯಕ್ಕೆ, ವಿಶೇಷವಾಗಿ ಭಕ್ತಿಪಂಥಕ್ಕೆ ಮಹತ್ತರ ಕಾಣಿಕೆ ನೀಡಿದರು.

‘ಆ ಮಹನೀಯರ ಬೃಂದಾವನಕ್ಕೆ ಐದು ಶತಮಾನಗಳ ಕಾಲ ಯಾವುದೇ ಧಕ್ಕೆ ಒದಗಿರಲಿಲ್ಲ. ಈಗ ದುಷ್ಕರ್ಮಿಗಳು ಇಂಥ ಕುಕೃತ್ಯ ಎಸಗಿದ್ದಾರೆ. ಇದರಿಂದ ಅಸಂಖ್ಯಾತ ಜನರಿಗೆ ಉದ್ವೇಗ, ಆಕ್ರೋಶ ಉಂಟಾಗಿದೆ. ಬೃಂದಾವನದ ಪುನರ್ ಪ್ರತಿಷ್ಠಾಪನೆ ಕೆಲಸ ಕೆಲಸ ನಾವು ಮಾಡ್ತೀವಿ. ಆದರೆ ನಮ್ಮ ಮತ್ತು ಭಕ್ತರ ಮನಸ್ಸಿಗೆ ಆಗಿರುವ ಘಾಸಿ ಮಾತ್ರ ಹಾಗೆಯೇ ಉಳಿಯುತ್ತೆ. ಪುನರ್ ನಿರ್ಮಾಣದ ವೇಳೆ ಗುರುಗಳ ಪೂಜ್ಯತೆ, ಮಹಿಮೆಗೆ ತಕ್ಕಂತೆ ವ್ಯವಸ್ಥೆ ಮಾಡುತ್ತೇವೆ. 

‘ಇದು ಎಲ್ಲರಿಗೂ ಸೇರಿದ ಜಾಗ. ವ್ಯಾಸರಾಜರು ಎಲ್ಲರಿಗೂ ಸೇರಿದವರು. ಈ ಸ್ಥಳದ ಪಾವಿತ್ರ್ಯವನ್ನು ರಕ್ಷಿಸುವುದು ಕೆಲ ಪಂಗಡಳಿಗೆ ಮಾತ್ರವಲ್ಲ, ದೇಶದ ಜನರಿಗೆ ಸಂಬಂಧಿಸಿದ್ದು. ಸರ್ಕಾರವೂ ಈ ಸ್ಥಳದ ರಕ್ಷಣೆಗೆ ಏನಾದರೂ ಮಾಡಬೇಕು. ಹಂಪಿಯಲ್ಲಿ ಅಲ್ಲಲ್ಲಿ ಪಾರಂಪರಿಕವಾದ ಕಟ್ಟಡಗಳಿಗೆ ಧಕ್ಕೆ ಮಾಡಿರೋದನ್ನು ಕೇಳ್ತಾ ಇದ್ದೇವೆ. ಇದು ನಮ್ಮ ಅಭಿಮಾನಕ್ಕೆ ಗೌರವ, ಶ್ರದ್ಧೆಗಳಿಗೆ ಧಕ್ಕೆ ಬರುವ ಕಾರ್ಯ.

‘ವ್ಯಾಸರಾಯರ ಮಠ, ರಾಯರ ಮಠ, ಉತ್ತರಾದಿ ಮಠ... ಹೀಗೆ ಮಾಧ್ವ ಮಠಗಳ ಯತಿಗಳು ಒಗ್ಗೂಡಿ ಏನಾದರೂ ಮಾಡುತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿದೆ. ಅಂಥದ್ದು ನಡೆದರೆ ಬಹಳ ಸಂತೋಷ. ಮಧ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭತೀರ್ಥರು ಇಲ್ಲಿದ್ದಾರೆ. ಎಲ್ಲ ಮಾಧ್ವ ಯತಿಗಳಿಗೂ ಪೂಜ್ಯರು ಅವರು.


ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಜೊತೆಗೆ ವಿದ್ಯಾಶ್ರೀಶ ತೀರ್ಥರು ಚರ್ಚಿಸಿದರು.

‘ಕೆಲ ಹೊತ್ತಿನ ಮೊದಲು ನನ್ನ ಜೊತೆಗೆ ಕುರುಬರ ಸಂಘದ ಅಧ್ಯಕ್ಷರು ಮಾತನಾಡಿದರು. ಕನಕದಾಸರಿಗೆ ದೀಕ್ಷೆ ಕೊಟ್ಟ ವ್ಯಾಸರಾಯರ ಬಗ್ಗೆ ಆ ಸಮುದಾಯದವರಿಗೆ ಗೌರವ–ಭಕ್ತಿ ಇದೆ. ಬೃಂದಾವನ ಧ್ವಂಸಗೊಳಿಸಿದ ಘಟನೆ ಖಂಡಿಸಿ ಪ್ರತಿಭಟನೆ ಮಾಡ್ತೀವಿ ಅಂದ್ರು. ವ್ಯಾಸರಾಜರು ಪೂಜ್ಯರು ಎನ್ನುವುದ ಬಗ್ಗೆ ಯಾರಿಗೂ ಭಿನ್ನಾಭಿಪ್ರಾಯಿಲ್ಲ. ಎಲ್ಲರಿಗೂ ಗೌರವಾದಾರ ಇದೆ. ಇಲ್ಲಿ ಪ್ರತಿದಿನವೂ ತಮಿಳುನಾಡಿನಿಂದ ಬಹಳ ಜನ ಬರ್ತಾರೆ. ಅಲ್ಲಿ ವ್ಯಾಸರಾಯರ ಶಿಷ್ಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಇದ್ದರೆ. ಗುರುಗಳಿಗೆ ಸೇವೆ ಶಾಶ್ವತವಾಗಿ ನಡೆಯಬೇಕು.

‘ಪುನರ್‌ ಪ್ರತಿಷ್ಠಾಪನೆ ಕೆಲಸ ಈ ಕ್ಷಣದಿಂದಲೇ ಶುರುವಾಗುತ್ತೆ. ಆ ಕಾಲದ ಕಟ್ಟಡದ ಮಾದರಿಯಲ್ಲಿಯೇ ಬೃಂದಾವನ ಜೋಡಿಸಲು ಪ್ರಯತ್ನ ಮಾಡ್ತಿದ್ದೀವೆ. ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧೀಕರಣ ಮಾಡುತ್ತೇವೆ. 

‘ಭಕ್ತರಿಗೆ ನನ್ನ ಸಂದೇಶ ಇಷ್ಟೇ. ಈ ಘಟನೆ ಎಲ್ಲರಿಗೂ ಬಹಳ ತೀವ್ರವಾದ ನೋವಿಗೆ ಕಾರಣವಾಗಿದೆ. ನಮ್ಮ ಕೈಲಿ ಆಗದೆ ಇದ್ದುದಕ್ಕೆ ವ್ಯಥೆ ಪಟ್ಟು ಪ್ರಯೋಜನವಿಲ್ಲ. ಜೀರ್ಣೋದ್ಧಾರ ಬಹಳ ಚೆನ್ನಾಗಿ ನಡೆಯಬೇಕು. ಮುಂದೆ ಇಂಥ ಘಟನೆ ನಡೆಯದಂತೆ ನಾವೆಲ್ಲರೂ ನೋಡಿಕೊಳ್ಳಬೇಕು. ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇರಬಾರದು. ಎಲ್ಲರೂ ತಾಳ್ಮೆಯಿಂದ ಸಹಕರಿಸಿ’.

ಬೃಂದಾವನ ಧ್ವಂಸ ಮಾಡಿದ ದುಷ್ಕರ್ಮಿಗಳ ಪತ್ತೆಗೆ ಮಂತ್ರಾಲಯ ಸ್ವಾಮೀಜಿ ಒತ್ತಾಯ

ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ

ಮಾಧ್ವ ಸಮಾಜದ ಪಾಲಿಗೆ ಕರಾಳ ದಿನ: ಮಾಧ್ವ ಮಹಾಸಭಾ

 

 

Post Comments (+)