ಕನ್ನಡಿಗರ ಬೆಚ್ಚನೆಯ ಪ್ರೀತಿ ಮರೆಯೊಲ್ಲ: ದಿನೇಶ್‌ ಮಾಹೇಶ್ವರಿ

7
ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿಗೆ ಬೀಳ್ಕೊಡುಗೆ

ಕನ್ನಡಿಗರ ಬೆಚ್ಚನೆಯ ಪ್ರೀತಿ ಮರೆಯೊಲ್ಲ: ದಿನೇಶ್‌ ಮಾಹೇಶ್ವರಿ

Published:
Updated:
Prajavani

ಬೆಂಗಳೂರು: ‘ಕರ್ನಾಟಕದ ಜನತೆಯ ಸಕಾರಾತ್ಮಕ ಗುಣ ಹಾಗೂ ಬೆಚ್ಚನೆಯ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೆಮ್ಮೆಯ ನಾಡಗೀತೆ, ಜೈ ಭಾರತ ಜನನಿಯ ತನುಜಾತೆ ನನ್ನ ಬದುಕಿನುದ್ದಕ್ಕೂ ಜತೆಗಿರುತ್ತದೆ’ ಎಂದು ಸುಪ್ರೀಂ ಕೋರ್ಟ್‌ಗೆ ಪದನ್ನೋತಿ ಹೊಂದಿರುವ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹೇಳಿದರು.

ರಾಜ್ಯ ವಕೀಲರ ಪರಿಷತ್ತಿನ ವತಿಯಿಂದ ಗುರುವಾರ ಹೈಕೋರ್ಟ್‌ನಲ್ಲಿ ನೀಡಲಾದ ಬೀಳ್ಕೊಡುಗೆ ಸಮಾರಂಭ
ದಲ್ಲಿ ಭಾವುಕರಾಗಿ ಮಾತನಾಡಿದ ಅವರು, ‘ಇಲ್ಲಿನ ಹೈಕೋರ್ಟ್‌ನಲ್ಲಿ 11 ತಿಂಗಳು ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ’ ಎಂದರು.

‘ರಾಜ್ಯದ ವಕೀಲರು ಅತ್ಯಂತ ಪ್ರತಿಭಾನ್ವಿತರಿದ್ದಾರೆ. ಯುವ ವಕೀಲರಂತೂ ಉತ್ತಮ ಭವಿಷ್ಯದ ಭರವಸೆ ಮೂಡಿಸುತ್ತಾರೆ. ನ್ಯಾಯಮೂರ್ತಿಗಳು ಮತ್ತು ವಕೀಲರು ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡುವ ಮೂಲಕ, ನ್ಯಾಯಾಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವಾಗಬೇಕು’ ಎಂದು ಹೇಳಿದರು.

ಇದಕ್ಕೂ ಮುನ್ನ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಮಾತನಾಡಿ, ‘ದಿನೇಶ್‌ ಮಾಹೇಶ್ವರಿ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಜಾಹೀರಾತು ಫಲಕ, ಫ್ಲೆಕ್ಸ್‌ಗಳ ಹಾವಳಿ, ರಸ್ತೆಗುಂಡಿ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಬಗ್ಗೆ ಗಂಭೀರವಾದ ಗಮನ ಹರಿಸುವ ಮೂಲಕ ಬೆಂಗಳೂರಿನ ಗತ ವೈಭವ ಮರಳುವಂತೆ ಮಾಡಿದ್ದಾರೆ. ಇಲ್ಲಿನ ಜನರು ಅವರನ್ನು ಸದಾ ಸ್ಮರಿಸಿಕೊಳ್ಳುತ್ತಾರೆ’ ಎಂದರು.

ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ. ನಾಯಕ್ ತಮ್ಮ ಬೀಳ್ಕೊಡುಗೆ ಭಾಷಣದಲ್ಲಿ ‘ದಿನೇಶ್ ಮಾಹೇಶ್ವರಿ ಧಾರವಾಡ ಮತ್ತು ಕುಲಬುರ್ಗಿ ನ್ಯಾಯಪೀಠಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಮಾಲಿನ್ಯ ಮತ್ತು ಪರಿಸರ ವಿಭಾಗದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಮರೆಯಲಾಗದು’ ಎಂದು ಬಣ್ಣಿಸಿದರು.

ಹೈಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಸೇರಿದಂತೆ ಹಿರಿ–ಕಿರಿಯ ವಕೀಲರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !