ಏಕಾಂಗಿಯಾಗಿ ಮನೆ ಕಟ್ಟುತ್ತಿರುವ 67ರ ವೃದ್ಧ

7
ಸರಳ ಜೀವನ ಶೈಲಿಯಿಂದ ಬೆರಗು ಮೂಡಿಸಿದ ಹಿರಿಯ ಜೀವ

ಏಕಾಂಗಿಯಾಗಿ ಮನೆ ಕಟ್ಟುತ್ತಿರುವ 67ರ ವೃದ್ಧ

Published:
Updated:
Deccan Herald

ಜಗಳೂರು: ಯಾರ ಹಂಗೂ ಇಲ್ಲದೆ 24 ಚದರ ವಿಸ್ತೀರ್ಣದ ಮನೆಯನ್ನು ಏಕಾಂಗಿಯಾಗಿ ನಿರ್ಮಾಣ ಮಾಡುತ್ತಿರುವ ತಾಲ್ಲೂಕಿನ ರಸ್ತೆ ಮಾಚಿಕೆರೆ ಗ್ರಾಮದ ರಾಚಯ್ಯ ಅಚ್ಚರಿ ಮೂಡಿಸಿದ್ದಾರೆ.

ಅವರ ಈ ಕೆಲಸವನ್ನು ತಾಲ್ಲೂಕಿನ ವಿವಿಧೆಡೆಯಿಂದ ಜನರು ಕುತೂಹಲದಿಂದ ನಿತ್ಯ ಬಂದು ನೋಡಿ ಹೋಗುತ್ತಿದ್ದಾರೆ. ಕೆಇಬಿ ಇಲಾಖೆಯ ನಿವೃತ್ತ ನೌಕರರಾಗಿರುವ 67 ವರ್ಷದ ಈ ಹಿರಿಯ ಜೀವ ಎರಡು ವರ್ಷಗಳಿಂದ ಅವಡುಗಚ್ಚಿ 3 ಬೆಡ್‌ರೂಂಗಳ ವಿಶಾಲವಾದ ಮನೆಯನ್ನು ಕಟ್ಟುತ್ತಿದೆ. ಮನೆಯ ತಳಪಾಯದಿಂದ ಚಾವಣಿಯ ಹಂತದವರೆಗೆ ಪಿಲ್ಲರ್‌, ನೀರಿನ ಸಂಪು, ಗೋಡೆ, ಕಿಟಕಿ ಸೇರಿ ಎಲ್ಲಾ ಕೆಲಸಗಳನ್ನು ಒಬ್ಬರೇ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ಈಗ ಕಟ್ಟಡ ಆರ್‌ಸಿಸಿ ಹಂತಕ್ಕೆ ಬಂದಿದ್ದು, ಮುಂದಿನ ಒಂದು ವರ್ಷದೊಳಗೆ ಮನೆ ಸಿದ್ಧಗೊಳ್ಳುವ ಆತ್ಮವಿಶ್ವಾಸ ಅವರದ್ದು.

25 ಎಕರೆ ಜಮೀನು ಹೊಂದಿರುವ ರಾಚಯ್ಯ ಕೆಲಸಗಾರರನ್ನಿಟ್ಟು ಮನೆ ನಿರ್ಮಿಸಬಹುದಿತ್ತು. ಆದರೆ ಮೊದಲಿನಿಂದಲೂ ಕಠಿಣ ಶ್ರಮವನ್ನು ಮೈಗೂಡಿಸಿಕೊಂಡಿರುವ ಇವರಿಗೆ ಸಾಲ ಮಾಡಿ ಮನೆ ಕಟ್ಟುವುದು ಸುತರಂ ಇಷ್ಟವಿಲ್ಲ. ನಿವೃತ್ತಿಯ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುವ ನಿಟ್ಟಿನಲ್ಲಿ 60x40 ವಿಸ್ತೀರ್ಣದ ಮನೆಯನ್ನು ತಾವೊಬ್ಬರೇ ಏಕಾಂಗಿಯಾಗಿ ಕಟ್ಟಬೇಕೆಂಬ ಛಲದಿಂದ ಇದು ಸಾಧ್ಯವಾಗಿದೆ.

‘ಕುಂತು ಸವಿಯುವುದಕ್ಕಿಂತ ಮಾಡಿ ಸವೆದರೆ ಜೀವನ ಸಾರ್ಥಕ’ ಎಂಬ ಮಾತಿನಲ್ಲಿ ವಿಶ್ವಾಸವಿಟ್ಟಿದ್ದೇನೆ. ಕೆಲವರು ಸಾಲ ಮಾಡಿ ಮನೆ ಕಟ್ಟಿ, ಜೀವನ ಪೂರ್ತಿ ಸಾಲ ತೀರಿಸಲು ಹೆಣಗಾಡುವುದನ್ನು ಕಂಡಿದ್ದೇನೆ. ನನಗೂ ಸಾಲ ಸಿಗುತ್ತೆ. ಆದರೆ ನಾನು ಮಾಡಿದ ಸಾಲ ಮಕ್ಕಳಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಒಬ್ಬ ಕೆಲಸಗಾರರನ್ನೂ ಕರೆಯದೆ ನಾನೇ ದಿನವಿಡೀ ಏಕಾಂಗಿಯಾಗಿ ಇಲ್ಲಿ ಶ್ರಮ ಪಡುತ್ತಿದ್ದೇನೆ’ ಎಂದು ರಾಚಯ್ಯ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ಮರಳು, ಕಬ್ಬಿಣ, ಜಲ್ಲಿ, ಸಿಮೆಂಟ್‌ಗಾಗಿ ಇದುವರೆಗೆ ₹ 3 ಲಕ್ಷ ಖರ್ಚು ಮಾಡಿದ್ದಾರೆ. ಕೂಲಿಕಾರರ ಕೂಲಿ ಕನಿಷ್ಠ ₹ 3 ಲಕ್ಷ ಉಳಿತಾಯವಾಗಿದೆ ಎಂದು ಅವರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 40

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !