ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ ಬ್ಯಾಂಕಿಂಗ್ ವಂಚನೆ ತಡೆಯುವುದು ಹೇಗೆ? ಇಲ್ಲಿದೆ ಉತ್ತರ...

ಸೈಬರ್‌ ಅಪರಾಧ ನಿಯಂತ್ರಣಕ್ಕೆ ಸೈಬರ್ ತಂತ್ರಜ್ಞಾನ ಸುರಕ್ಷತೆ ತಜ್ಞ ಡಾ.ಜಿ.ಅನಂತಪ್ರಭು ಸಲಹೆ
Last Updated 22 ಜನವರಿ 2020, 2:14 IST
ಅಕ್ಷರ ಗಾತ್ರ

ಮಂಗಳೂರು: ಸೈಬರ್‌ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾಯ್ದೆಯನ್ನು ಜಾರಿಗೊಳಿಸಿ, ವಿಶೇಷ ನ್ಯಾಯಾಲಯಗಳನ್ನೂ ಸ್ಥಾಪಿಸಬೇಕಾದ ತುರ್ತು ಇದೆ ಎಂದು ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಹಾಗೂ ಸೈಬರ್‌ ತಂತ್ರಜ್ಞಾನ ಸುರಕ್ಷತೆ ತಜ್ಞ ಡಾ.ಜಿ.ಅನಂತಪ್ರಭು ಸಲಹೆ ನೀಡಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುವುದರ ನಡುವೆಯೇ ಸೈಬರ್‌ ಸುರಕ್ಷತೆ ಕುರಿತು ಮಾತನಾಡಿದ ಅವರು, ‘ಸೈಬರ್‌ ಅಪರಾಧ ನಿಯಂತ್ರಣಕ್ಕೆ ಬಲವಾದ ಕ್ರಮಗಳನ್ನು ಕೈಗೊಳ್ಳುವವರೆಗೂ ವಂಚನೆ, ಅಪಪ್ರಚಾರ, ದುರ್ಬಳಕೆ ತಡೆಗೆ ಪೂರ್ಣವಿರಾಮ ಹಾಕುವುದು ಕಷ್ಟ’ ಎಂದರು.

‘ಡೇಟಾ ಸಂರಕ್ಷಣಾ ಮಸೂದೆ’ ಮೂರು ವರ್ಷದಿಂದ ಸಂಸತ್ತಿನ ಮುಂದೆ ಇದೆ. ಅದಕ್ಕೆ ಅಂಗೀಕಾರ ದೊರೆತರೆ ಬಹುಪಾಲು ಸೈಬರ್‌ ಅಪರಾಧಗಳು ನಿಲ್ಲುತ್ತವೆ. ಆದರೆ, ಈ ಕಾಲಘಟ್ಟದಲ್ಲಿ ನಿಜವಾಗಿಯೂ ಜನರನ್ನು
ರಕ್ಷಿಸಬಹುದಾದ ಸಾಮರ್ಥ್ಯ ಹೊಂದಿರುವ ಈ ಮಸೂದೆಯನ್ನು ಕಾಯ್ದೆಯನ್ನಾಗಿ ಜಾರಿಗೊಳಿಸಲು ಯಾರಿಗೂ ಆಸಕ್ತಿ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ನಗರದಲ್ಲೂ ಸೈಬರ್‌ ಅಪರಾಧ ಪೊಲೀಸ್‌ ಠಾಣೆ ಆರಂಭಿಸಬೇಕು. ತಜ್ಞ ಸಿಬ್ಬಂದಿ, ಅಧಿಕಾರಿಗಳನ್ನು ನೇಮಿಸಬೇಕು. ಸೈಬರ್‌ ಅಪರಾಧ ‍ಪ್ರಕರಣಗಳ ತನಿಖೆಗೆ ಎಲ್ಲ ನಗರಗಳಲ್ಲೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಈ ರೀತಿ ಸಂಪೂರ್ಣ ಸುಸಜ್ಜಿತವಾದ ಒಂದು ವ್ಯವಸ್ಥೆ ಇದ್ದರೆ ಮಾತ್ರ ಸೈಬರ್‌ ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಬಹುದು ಎಂದರು.

ಪ್ರಮುಖ ಸಲಹೆಗಳು

# ಸೈಬರ್‌ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ www.cybercrime.gov ವೆಬ್‌ಸೈಟ್‌ ಮೂಲಕ ನೇರವಾಗಿ ದೂರು ಸಲ್ಲಿಸಬಹುದು.

# ಸುಳ್ಳು ಸುದ್ದಿಗಳ ಕುರಿತು www.snopes.com ಮೂಲಕ ‘ಫ್ಯಾಕ್ಟ್‌ ಚೆಕ್‌’ ಮಾಡಬಹುದು.

# www.cybersafegirl.com ನಲ್ಲಿ ಸೈಬರ್‌ ಅಪರಾಧ ನಿಯಂತ್ರಣ ಕುರಿತು ಕಲಿಕೆಗೆ ಅವಕಾಶವಿದೆ. ನೋಂದಣಿ ಮಾಡಿಕೊಂಡು ಅಧ್ಯಯನ ನಡೆಸಿದರೆ ಪ್ರಮಾಣಪತ್ರವೂ ದೊರೆಯುತ್ತದೆ.

ಕಾರ್ಡ್‌ ಸುರಕ್ಷಿತವಾಗಿರಲಿ

ಈಗ ಆರ್‌ಎಫ್‌ಐಡಿ ತಂತ್ರಜ್ಞಾನದ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳಿಂದ ಸುಲಭವಾಗಿ ಹಣ ದೋಚುತ್ತಾರೆ. ಮೊಬೈಲ್‌ ಸ್ಕ್ಯಾನರ್‌ ಬಳಸಿ ನಿಮ್ಮ ಕಾರ್ಡ್‌ ಅನ್ನು ಸ್ಪರ್ಶಿಸದೇ ಹಣ ದೋಚುತ್ತಾರೆ. ಇದನ್ನು ತಪ್ಪಿಸಲು ಕಡ್ಡಾಯವಾಗಿ ಅಲ್ಯೂಮಿನಿಯಂ ಫಾಯಿಲ್‌ನ ಕವರ್‌ ಒಳಗಡೆ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು.

ಪ್ರಶ್ನೋತ್ತರ...

# ಭಾರತಿ, ಹುಬ್ಬಳ್ಳಿ

ಪ್ರಶ್ನೆ: ಅಪರಿಚಿತರಿಂದ ಪರಿಚಿತರಮೊಬೈಲ್‌ ಸಂಖ್ಯೆಗಳಲ್ಲೇ ಬೆದರಿಕೆ ಕರೆಗಳು ಬರುತ್ತಿವೆ. ಏನು ಮಾಡಬೇಕು?

ಉತ್ತರ: ಈ ರೀತಿ ಬೇರೊಬ್ಬರ ನಂಬರ್‌ ಕಾಣಿಸುವಂತೆ ಅಪರಿಚಿತರು ಕರೆ ಮಾಡುವುದನ್ನು ‘ಸ್ಪೂಫಿಂಗ್‌’ ಎನ್ನಲಾಗುತ್ತದೆ. ಹಿಂದೆ ಇಂತಹ ಕರೆಗಳ ಮೂಲವನ್ನು ಪತ್ತೆ ಮಾಡಲು ಕಷ್ಟವಾಗುತ್ತಿತ್ತು. ಈಗತಂತ್ರಜ್ಞಾನ ಲಭ್ಯವಿದೆ. ಸೈಬರ್‌ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದರೆ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಹಚ್ಚಬಹುದು.

***

# ಹಮೀದ್‌,ವಿಟ್ಲ

ಪ್ರಶ್ನೆ: ವಾಟ್ಸ್‌ಆ್ಯಪ್‌ನಲ್ಲಿ ಅಪಪ್ರಚಾರ ಮಾಡಿದರೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಬಹುದು?

ಉತ್ತರ: ಮೊದಲು ವಾಟ್ಸ್‌ಆ್ಯಪ್‌ನಲ್ಲಿ ಹಾಕಿರುವ ಸಂದೇಶ ನೈಜವಾದುದೇ ಅಥವಾ ನಕಲಿಯೇ ಎಂಬುದನ್ನುಪತ್ತೆ ಮಾಡಬೇಕು. ಆ ಬಳಿಕಅಂತಹ ಸಂದೇಶದ ಕುರಿತು ಪೊಲೀಸರಿಗೆ ದೂರು ನೀಡಬೇಕು. ತನಿಖೆಯ ಸಮಯದಲ್ಲಿ ಅಂತಹ ಮೆಸೇಜ್‌ನ್ನು ಪೊಲೀಸರಿಗೆ ಒದಗಿಸಬೇಕು. ಮೆಸೇಜ್‌ ಅನ್ನು ಇ–ಮೇಲ್‌
ನಲ್ಲಿ ಕಾಪಿ ಮಾಡಿ ಇರಿಸಿಕೊಳ್ಳಬೇಕು. ಮೊಬೈಲ್‌ನಲ್ಲಿ ಸ್ಕ್ರೀನ್‌ ಶಾಟ್‌ ಕೂಡ ತೆಗೆದಿಟ್ಟುಕೊಳ್ಳಬೇಕು.

***

# ಮಂಜುನಾಥ,ಶಿರಾ

ಪ್ರಶ್ನೆ:ನಮ್ಮ ವೈಯಕ್ತಿಕ ಖಾತೆಗಳಲ್ಲಿರುವ ಫೋಟೊ, ವಿಡಿಯೊ ದುರ್ಬಳಕೆ ತಡೆಯುವುದು ಹೇಗೆ?

ಉತ್ತರ: ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮತ್ತಿತರ ಮಾಧ್ಯಮಗಳಲ್ಲಿ ವೈಯಕ್ತಿಕ ಖಾತೆಗಳ ಬಳಕೆಯಲ್ಲಿ ತೀರಾ ಎಚ್ಚರಿಕೆ ಇರಬೇಕು. ಉತ್ತಮ ಗುಣಮಟ್ಟದ (ಹೈ ರೆಸಲ್ಯೂಷನ್‌) ಫೋಟೊಗಳನ್ನು ಹಾಕಲೇಬಾರದು. ಅಂತಹ ಚಿತ್ರಗಳು ಇದ್ದರೆ ನಕಲು ಮಾಡಿ, ದುರ್ಬಳಕೆ ಮಾಡಲು ಸಾಧ್ಯವಾಗುತ್ತದೆ.

***

# ನವೀನ್‌,ಬೇಗೂರು (ಬೆಂಗಳೂರು)

ಪ್ರಶ್ನೆ:ಬ್ಯಾಂಕ್‌ ಖಾತೆಗಳಿಂದ ಹಣ ಎಗರಿಸುವವರಿಂದ ರಕ್ಷಣೆ ಹೇಗೆ?

ಉತ್ತರ:ಪ್ರತಿಯೊಬ್ಬರೂ ಎರಡುಬ್ಯಾಂಕ್‌ ಖಾತೆಗಳನ್ನು ಹೊಂದಿರಬೇಕು. ಒಂದು ಆನ್‌ಲೈನ್‌ ವಹಿವಾ
ಟಿಗೆ ಮತ್ತೊಂದು ಸಾಮಾನ್ಯ ವಹಿವಾಟಿಗೆ. ಆನ್‌ಲೈನ್‌ ವಹಿವಾಟಿನ ಖಾತೆಯಲ್ಲಿ ಹೆಚ್ಚು ಹಣ ಇರಿಸಬಾರದು. ಆ ಖಾತೆಯನ್ನೇ ಆನ್‌ಲೈನ್‌ ವಹಿವಾಟಿಗೆ ಬಳಸಬೇಕು. ರಿಯಾಯಿತಿ, ಕೊಡುಗೆಗಳ ಹೆಸರಿನಲ್ಲಿ ಬರುವ ಮೆಸೇಜ್‌ಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು. ಅನಧಿಕೃತವಾದ ಕೇಂದ್ರಗಳಲ್ಲಿ ಮೊಬೈಲ್‌ ರಿಪೇರಿ ಮಾಡಿಸಬಾರದು. ಎಟಿಎಂಗಳಲ್ಲಿ ಹಣ ತೆಗೆಯುವಾಗ ಎಚ್ಚರಿಕೆ ಇರಬೇಕು. ಕಾರ್ಡ್‌ರಹಿತ ಎಟಿಎಂ ಬಳಕೆಗೆ ಆದ್ಯತೆ ನೀಡಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಹಣದ ಆಮಿಷವೊಡ್ಡಿ ಬ್ಯಾಂಕ್‌ ಖಾತೆಗಳ ವಿವರ ಕೇಳುವವರ ಬಗ್ಗೆ ಅತ್ಯಂತ ಎಚ್ಚರಿಕೆ ಹೊಂದಿರಬೇಕು.

***

# ಅಬೂಬಕ್ಕರ್‌ ಅಲಿ,ವಿಟ್ಲ

ಪ್ರಶ್ನೆ:ಬಹುಮಾನ, ಹಣದ ಆಮಿಷ ಒಡ್ಡಿ ವಂಚಿಸುವವರಿಗೆ ನಮ್ಮ ಮೊಬೈಲ್‌ ಸಂಖ್ಯೆಗಳು ಹೇಗೆ ಸಿಗುತ್ತವೆ?

ಉತ್ತರ:ಮೊಬೈಲ್‌ಗಳಿಗೆ ಅಪ್ಲಿಕೇಷನ್‌ಗಳನ್ನು ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಪ್ರತಿ ಅಪ್ಲಿಕೇಷನ್‌ಹಾಕಿದಾಗಲೂ ನಮ್ಮ ಮೊಬೈಲ್‌ನಲ್ಲಿರುವ ಎಲ್ಲ ಸಂಪರ್ಕ ಸಂಖ್ಯೆಗಳು ಅಪ್ಲಿಕೇಷನ್‌ ರೂಪಿಸಿದವರಿಗೆ ರವಾನೆ ಆಗುತ್ತವೆ. ಅವುಗಳನ್ನು ಅವರು ಮಾರಾಟ ಮಾಡುತ್ತಾರೆ. ಅವುಗಳನ್ನು ಬಳಸಿಕೊಂಡು ವಂಚಿಸಲಾಗುತ್ತಿದೆ.

***

# ಅವಿನಾಶ್‌,ಬೆಂಗಳೂರು

ಪ್ರಶ್ನೆ:ಮೊಬೈಲ್‌ ಕಳೆದು ಹೋದಾಗ ಏನು ಮಾಡಬೇಕು?

ಉತ್ತರ:ಮೊಬೈಲ್‌ ಖರೀದಿಸಿದ ತಕ್ಷಣವೇ ಅದರ ಐಎಂಇಐ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕಳೆದು ಹೋದಾಗ ಪೊಲೀಸರಿಗೆ ದೂರು ನೀಡುವಾಗ ಅದನ್ನು ಉಲ್ಲೇಖಿಸಬೇಕು. ಈಗ ಕೇಂದ್ರ ಸರ್ಕಾರದ ceir.gov.in ವೆಬ್‌ಸೈಟ್‌ಗೆ ಹೋಗಿ ದೂರು ದಾಖಲಿಸಬಹುದು.

***

# ಪ್ರಕಾಶ್‌,ಕಟಪಾಡಿ

ಪ್ರಶ್ನೆ:ಬಹುಮಾನದ ಆಮಿಷ ಒಡ್ಡಿ ವಂಚಿಸುವವರನ್ನು ನಿಯಂತ್ರಿಸುವುದು ಸಾಧ್ಯವಿಲ್ಲವೇ?

ಉತ್ತರ:ಅಂತಹ ಮೆಸೇಜ್‌ಗಳು ಮೊಬೈಲ್‌ಗೆ ಬರುವುದನ್ನು ತಡೆಯಬೇಕು. ಇದಕ್ಕಾಗಿ ‘START ಸ್ಪೇಸ್‌ D AND D’ ಎಂಬ ಸಂದೇಶವನ್ನು 1909 ಸಂಖ್ಯೆಗೆ ಕಳುಹಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಟ್ರೂ ಕಾಲರ್‌ ಅಪ್ಲಿಕೇಷನ್‌ ಮೂಲಕ ವಂಚಕರ ಸಂಖ್ಯೆಗಳನ್ನು ತಿಳಿದು, ಕರೆ ಬಂದಾಗ ಸ್ವೀಕರಿಸಬಾರದು. ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಮೊದಲಾದ ವ್ಯಾಲೆಟ್‌ಗಳನ್ನು ಎಚ್ಚರದಿಂದ ಬಳಸಬೇಕು.

***

# ರಾಜೇಶ್‌,ಕದ್ರಿ

ಪ್ರಶ್ನೆ:ನಮ್ಮ ಮೊಬೈಲ್‌ ಅನ್ನು ಮೂರನೇ ವ್ಯಕ್ತಿ ನಿಯಂತ್ರಿಸಲು ಸಾಧ್ಯವೇ?

ಉತ್ತರ:ರಿಮೋಟ್‌ ಮಾನಿಟರಿಂಗ್‌ ಅಪ್ಲಿಕೇಷನ್‌ ಬಳಸಿ ಒಬ್ಬರ ಮೊಬೈಲ್‌ ಅನ್ನು ಮತ್ತೊಬ್ಬರು ನಿಯಂತ್ರಿಸಲು ಸಾಧ್ಯವಿದೆ. ವಿದ್ಯಾರ್ಥಿಗಳ ಮೇಲೆ ನಿಗಾ ಇಡುವ ಸದುದ್ದೇಶದಿಂದ ರೂಪಿಸಿದ ಅಪ್ಲಿಕೇಷನ್‌ಗಳು ಈಗ ದುರ್ಬಳಕೆ ಆಗುತ್ತವೆ. ಹಣ ಪಾವತಿಸಿ ಮೊಬೈಲ್‌ಗೆ ಆ್ಯಂಟಿವೈರಸ್‌ ಸಾಫ್ಟ್‌ವೇರ್‌ ಹಾಕಿಸಿಕೊಂಡರೆ ಈ ರೀತಿ ಮಾಡಲು ಅವಕಾಶ ಸಿಗುವುದಿಲ್ಲ.

***

# ಜನಾರ್ದನ,ಹೆಬ್ರಿ

ಪ್ರಶ್ನೆ:ನೆಟ್‌ ಬ್ಯಾಂಕಿಂಗ್ ವಂಚನೆ ತಡೆಯುವುದು ಹೇಗೆ?

ಉತ್ತರ:ಬ್ಯಾಂಕ್‌ಗೆ ಹೋಗಿ ವ್ಯವಹರಿಸಲು ಪುರುಸೊತ್ತಿಲ್ಲ ಎಂಬ ಧೋರಣೆ ಬಿಡಬೇಕು. ಅನಿವಾರ್ಯ ಸಂದರ್ಭದಲ್ಲಷ್ಟೇ ನೆಟ್‌ ಬ್ಯಾಂಕಿಂಗ್‌ ಬಳಸಬೇಕು. ಯಾವತ್ತೂ ಹೆಚ್ಚು ಹಣವಿರುವ ಖಾತೆಯನ್ನು ನೆಟ್‌ ಬ್ಯಾಂಕಿಂಗ್‌ಗೆ ಬಳಸಬಾರದು.

***

# ಸುಬ್ರಹ್ಮಣ್ಯ,ದೇವನಹಳ್ಳಿ

ಪ್ರಶ್ನೆ:ನ್ಯಾಪ್ಟಾಲ್‌ ಖರೀದಿಗೆ ನೀಡಿದ್ದ ನಂಬರ್‌ ಬಳಸಿ ವಂಚಕರು ನನ್ನನ್ನು ಸಂಪರ್ಕಿಸಿ ಬ್ಯಾಂಕ್‌ ಖಾತೆ ವಿವರ ಕೇಳಿದರು. ಇದು ಹೇಗೆಸಾಧ್ಯ?

ಉತ್ತರ:ಕೆಲವು ತಿಂಗಳ ಕಾಲ ನ್ಯಾಪ್ಟಾಲ್‌ ಡೇಟಾ ಬೇಸ್‌ ಹ್ಯಾಕ್‌ ಆಗಿತ್ತು. ಆಗ ಅಲ್ಲಿದ್ದ ಗ್ರಾಹಕರ ಮೊಬೈಲ್‌ ಸಂಖ್ಯೆಯನ್ನು ಕಳವು ಮಾಡಿರುವ ವಂಚಕರು ಈಗ ದುಷ್ಕೃತ್ಯಕ್ಕೆ ಬಳಸುತ್ತಿದ್ದಾರೆ.

***

# ಉಮ್ಮರ್‌ ಫಾರೂಕ್‌,ಸುಳ್ಯ

ಪ್ರಶ್ನೆ:ವಾಟ್ಸ್‌ಆ್ಯಪ್‌ ಬ್ಯಾಕ್‌ ಅಪ್‌ ಡೇಟಾ ಡಿಲೀಟ್‌ ಆದರೆ ಏನು ಮಾಡಬೇಕು?

ಉತ್ತರ:ಬ್ಯಾಕ್‌ ಅಪ್‌ ಆಗಿರುವ ಕ್ಷಣದವರೆಗಿನ ಎಲ್ಲ ಮಾಹಿತಿಯನ್ನೂ ಪಡೆಯಲು ಸಾಧ್ಯವಿದೆ. ಬ್ಯಾಕ್‌ ಅಪ್‌ ಆಗದ ಅವಧಿಯ ಡೇಟಾ ಸಿಗುವುದಿಲ್ಲ.

***

# ಜಯಶ್ರೀ ಭಟ್‌,ಉಡುಪಿ

ಪ್ರಶ್ನೆ:ಮೊಬೈಲ್‌ನಲ್ಲಿ ಜಾಹೀರಾತುಗಳು ಬರದಂತೆ ತಡೆಯುವುದು ಹೇಗೆ?

ಉತ್ತರ:ಜಾಹೀರಾತು ಬಂದಾಗ ಅದರ ನೋಟಿಫಿಕೇಷನ್‌ ಮೇಲೆ ದೀರ್ಘವಾಗಿ ಒತ್ತಿ ಹಿಡಿಯಬೇಕು. ಆಗ ಅಂತಹ ನೋಟಿಫಿಕೇಷನ್‌ ಬರದಂತೆ ತಡೆಯುವುದು ಮತ್ತು ಅವುಗಳನ್ನು ಶೇರ್‌ ಮಾಡುವ ಆಯ್ಕೆ ಸಿಗುತ್ತದೆ. ನೋಟಿಫಿಕೇಷನ್‌ ಬರದಂತೆ ತಡೆಯುವುದನ್ನು ಆಯ್ಕೆ ಮಾಡಿದರೆ ಮತ್ತೆ ಬರುವುದಿಲ್ಲ.

***

# ಉದಯ ‍ಪೂಜಾರಿ,ಆಲ್ಬಾಡಿ

ಪ್ರಶ್ನೆ:ವಾಟ್ಸ್‌ಆ್ಯಪ್‌ನಲ್ಲಿ ಬಂದ ಪತ್ರಿಕೆಯ ಬರಹದ ತುಣುಕು ಫಾರ್ವರ್ಡ್‌ ಮಾಡುವುದು ಅಪರಾಧವೇ?

ಉತ್ತರ:ನೀವು ಯಾವ ರೀತಿಯ ತುಣುಕನ್ನು ಫಾರ್ವರ್ಡ್‌ ಮಾಡಿದ್ದೀರಿ ಎಂಬುದರ ಮೇಲೆ ಇದು ನಿರ್ಧಾರ ಆಗುತ್ತದೆ. ಯಾರದ್ದೋ ತೇಜೋವಧೆಗಾಗಿ ಪತ್ರಿಕೆಗಳ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ತುಣುಕನ್ನು ಫಾರ್ವರ್ಡ್‌ ಮಾಡಿದರೆ ಅಪರಾಧ ಆಗುತ್ತದೆ. ಪತ್ರಿಕೆಯಲ್ಲಿ ಬಂದ ನೈಜ ಸಂಗತಿಯನ್ನು ಫಾರ್ವರ್ಡ್‌ ಮಾಡುವುದು ಅಪರಾಧ ಅಲ್ಲ.

***

# ಅಬ್ದುಲ್‌ ಖಾದರ್‌, ವಾಜ್ರಕೋಡಿ, ಬಂಟ್ವಾಳ

ಪ್ರಶ್ನೆ:ಅಪರಿಚಿತರಿಂದ ಬರುವ ಕರೆಗಳ ಮೂಲ ಪತ್ತೆ ಮಾಡುವುದು ಸಾಧ್ಯವೇ?

ಉತ್ತರ:ಸಾಮಾನ್ಯ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗಳಿಂದ ಕರೆ ಬಂದರೆ ಸುಲಭವಾಗಿ ಪತ್ತೆ ಮಾಡಬಹುದು. ಪ್ರೈವೇಟ್‌ ನಂಬರ್‌ಗಳಿಂದ ಕರೆ ಬಂದರೂ ಪತ್ತೆ ಮಾಡಬಹುದು. ಇಂಟರ್‌ನೆಟ್‌ (ವಿಒಐಪಿ) ಕರೆ ಬಂದರೆ ಪತ್ತೆ ಮಾಡುವುದು ಕಷ್ಟವಾಗುತ್ತದೆ. ಈಗ ಹೆಚ್ಚಿನ ಬೆದರಿಕೆ ಮತ್ತು ವಂಚನೆಯ ಕರೆಗಳು ಇಂಟರ್‌ನೆಟ್‌ ಕರೆಗಳೇ ಆಗಿರುತ್ತವೆ. ದುಬೈನಂತಹ ಹಲವು ರಾಷ್ಟ್ರಗಳು ವಿಐಒಪಿ ಕರೆಯನ್ನು ನಿಷೇಧಿಸಿವೆ. ಭಾರತದಲ್ಲೂ ಅಂತಹ ಕಾಯ್ದೆ ಜಾರಿಯಾದರೆ ಇಂತಹ ವಂಚನೆಗಳಿಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT