ಪ್ರತ್ಯೇಕ ರಾಜ್ಯ ಬಂದ್‌ ವಿಫಲ

7

ಪ್ರತ್ಯೇಕ ರಾಜ್ಯ ಬಂದ್‌ ವಿಫಲ

Published:
Updated:

ಹುಬ್ಬಳ್ಳಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ರೈತ ಹೋರಾಟ ಸಮಿತಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ಈ ಭಾಗದ ಜಿಲ್ಲೆಗಳ ಜನರು ಸ್ಪಂದಿಸಲಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಸಮಿತಿಯು ಬಂದ್‌ ಕೈ ಬಿಟ್ಟು ಕೇವಲ ಪ್ರತಿಭಟನೆ ನಡೆಸುವುದಾಗಿ ತಿಳಿಸಿತ್ತು. ಅದಕ್ಕೂ ಬೆಂಬಲ ಸಿಗಲಿಲ್ಲ.

ಬಂದ್‌ಗೆ ಕರೆ ಕೊಟ್ಟಿದ್ದ ರೈತರ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕರಿಗಾರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಎಂದಿನಂತೆ ಜನ ಜೀವನ ಸಾಮಾನ್ಯವಾಗಿತ್ತು. ಶಾಲಾ ಕಾಲೇಜು, ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು.

ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಕಡೆ ರೈತ ಹೋರಾಟ ಸಮಿತಿಯ ಸದಸ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ವಕೀಲರ ಸಂಘ ಮತ್ತಿತರರ ಸಂಘಟನೆಗಳ ಸದಸ್ಯರು ಅಖಂಡ ಕರ್ನಾಟಕದ ಪರವಾಗಿ ಪ್ರದರ್ಶನ ನಡೆಸಿದರು. ಗದಗದಲ್ಲಿ ಕಳಸ ಬಂಡೂರಿ ಹಾಗೂ ಮಲಪ್ರಭಾ ಜೋಡಣಾ ಹೋರಾಟ ಸಮಿತಿಯ ಏಳೆಂಟು ಮಂದಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಡಿ.ಸಿಗೆ ಮನವಿ ಸಲ್ಲಿಸಿದರು.

ಆಟೊ ಚಾಲಕರು, ವ್ಯಾಪಾರಸ್ಥರಿಗೆ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಗುಲಾಬಿ ಹೂವು ನೀಡಿ ಅಭಿನಂದಿಸಿದರು. ಲಕ್ಷ್ಮೇಶ್ವರದಲ್ಲಿ ತಾಲ್ಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಪ್ರತಿಭಟನೆ ನಡೆಸಿದರು.

ಹೈ.ಕ ಭಾಗದಲ್ಲಿ ಸಿಗದ ಬೆಂಬಲ

ಕಲಬುರ್ಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗುರುವಾರ ಕರೆ ನೀಡಿದ್ದ ಬಂದ್‌ಗೆ ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಬದಲಾಗಿ, ವಿಭಜನೆ ವಿರೋಧಿಸಿ ವಿವಿಧ ಸಂಘಟನೆಗಳು ಸಾಂಕೇತಿಕ ಧರಣಿ ನಡೆಸಿದವು.


ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಗುರುವಾರ ಹಾವೇರಿಯಲ್ಲಿ ಪ್ರತಿಭಟನೆ ನಡೆಯಿತು

 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !