ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆಗೆ ಹಾಜರಾದ ಲೋಕಾಯುಕ್ತ

Last Updated 15 ಫೆಬ್ರುವರಿ 2020, 21:02 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಕಚೇರಿಯ ಛೇಂಬರ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಇಲ್ಲಿನ 56ನೇ ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ನೀಡಿದರು.

ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೆಷನ್ಸ್ ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ನುಡಿದ ಮೊದಲ ಪ್ರಕರಣ ಇದು ಎನ್ನಲಾಗಿದೆ.

ಮಧ್ಯಾಹ್ನ 12 ಗಂಟೆಯಿಂದ 1.3ರವರೆಗೂ ಕಟಕಟೆಯಲ್ಲಿ ನಿಂತು ಮುಖ್ಯ ವಿಚಾರಣೆ ಎದುರಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.

ಅವರು ಹೇಳಿದ್ದು: 2018ರ ಮಾರ್ಚ್ 7ರಂದು ಮಧ್ಯಾಹ್ನ 1.45ರ ಸಮಯದಲ್ಲಿ ತೇಜರಾಜ ಶರ್ಮ, ನನ್ನನ್ನು ಭೇಟಿಯಾಗಲು ಕೋರಿ ಜಮೇದಾರ್ ಮೂಲಕ ಚೀಟಿ ಕಳುಹಿಸಿದ್ದ. ಒಳಗೆ ಬರಹೇಳಿದೆ. ಬಂದು ನನ್ನೆದುರು ಕುಳಿತ ಅವನು, ತುಮಕೂರು-ಕೋಲಾರ ಜಿಲ್ಲೆಗಳಲ್ಲಿನ ಟೆಂಡರ್ ಹಂಚಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಐದು ಪುಟಗಳ ದಾಖಲೆ ನೀಡಿದ. ಅವುಗಳನ್ನು ಪರಿಶೀಲಿಸಿದ ನಾನು, ನಮ್ಮ ಅಸಿಸ್ಟೆಂಟ್ ರಿಜಿಸ್ಟ್ರಾರ್ ಲಲಿತಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ತಿಳಿಸು ಎಂದೆ.

ಇಷ್ಟು ಹೇಳುತ್ತಿದ್ದಂತೆಯೇ ಆತ ಟೇಬಲ್ ಮೇಲೆ ಎಗರಿದ‌‌. ಅದೆಲ್ಲಿಂದ ಚಾಕು ತೆಗೆದನೋ ಗೊತ್ತಿಲ್ಲ. ಮೊದಲಿಗೆ ನನ್ನ ಹೃದಯ ಭಾಗಕ್ಕೆ ಇರಿದ. ನಂತರ ಹೊಟ್ಟೆ, ಆಮೇಲೆ ತೊಡೆಗೆ ಚುಚ್ಚಿದ. ಕೂಡಲೇ ನಾನು ಬಲವಾಗಿ ಪ್ರತಿಭಟಿಸಿದೆ. ಚಾಕುವಿನ ಆಳ ಇರಿತಗಳಿಂದ ತಪ್ಪಿಸಿಕೊಂಡೆ.

ವಿಚಾರಣೆ ಆಲಿಸಿದ ಸೆಷನ್ಸ್ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್, ‘ಪಾಟಿ ಸವಾಲನ್ನು ಇಂದೇ ನಡೆಸಿ’ ಎಂದು ಆರೋಪಿ ಪರ ವಕೀಲ ಸೂರ್ಯ ನಟರಾಜ ಶರ್ಮ ಅವರಿಗೆ ಸೂಚಿಸಿದರು.

ಆದರೆ, ನಟರಾಜ ಶರ್ಮ, ‘ಪ್ರಾಸಿಕ್ಯೂಷನ್ ನಮಗೆ ಬೇಕಾದ ದಾಖಲೆ ಒದಗಿಸುತ್ತಿಲ್ಲ. ಆದ್ದರಿಂದ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT