ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾಲಾಲ್‌ ಜನ್ಮ ಸ್ಥಳಕ್ಕೆ ₹180 ಕೋಟಿ’

ಸೂರಗೊಂಡನಕೊಪ್ಪ ಗ್ರಾಮದ ಅಭಿವೃದ್ಧಿಗೆ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ
Last Updated 15 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂತ ಸೇವಾಲಾಲ್‌ ಅವರ ಜನ್ಮಸ್ಥಳ ಸೂರಗೊಂಡನ ಕೊಪ್ಪ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು,₹180 ಕೋಟಿ ವೆಚ್ಚದಲ್ಲಿ ಯೋಜನೆಯೊಂದನ್ನು ರೂಪಿಸಿದೆ’ ಎಂದು ಸಮಾಜ‌ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕನ್ನಡ‌ ಮತ್ತು ಸಂಸ್ಕೃತಿ‌ ಇಲಾಖೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ 280ನೇ ಜಯಂತ್ಯುತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸುವರ್ಣ ಗ್ರಾಮ ಯೋಜನೆಯ ಮಾದರಿಯಲ್ಲಿಯೇ ಈ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗೆ ಅನುಮತಿ ದೊರೆತಿದ್ದು,ಈಗಾಗಲೇ ₹15 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

‘ಬಂಜಾರ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಯಿಂದ ಹೊರತೆಗೆಯುವ ಕುರಿತು ಸುಳ್ಳು ಸುದ್ದಿಗಳು ಹರಡುತ್ತಿರುವುದರ ಬಗ್ಗೆ ಯಾರೂ ಕಿವಿಗೊಡಬೇಡಿ. ನಾನು ಅಧಿಕಾರದಲ್ಲಿ‌ ಇದ್ದರೂ, ಇರದಿದ್ದರೂ ಇದಕ್ಕೆ ಅವಕಾಶ‌ ನೀಡುವುದಿಲ್ಲ. ಈ ಬಗ್ಗೆ ಯಾವುದೇ ಸಂಶಯ ಬೇಡ’ ಎಂದರು.

‘ಸೇವಾಲಾಲ್‌ ಸಾಂಸ್ಕೃತಿಕ ಕೇಂದ್ರ ಯೋಜನೆ ಅಡಿಯಲ್ಲಿ₹10 ಲಕ್ಷ ಅನುದಾನ ನೀಡಲಾಗುತ್ತಿದೆ. 400 ತಾಂಡಾಗಳು ಇದರ ಸದುಪಯೋಗ ಪಡೆದುಕೊಳ್ಳಲಿವೆ. ಐರಾವತ, ಸಮೃದ್ಧಿಯಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯ ಮುನ್ನೆಲೆಗೆ ಬರಬೇಕು’ ಎಂದು ಸಮಾಜ ಬಾಂಧವರಿಗೆ ಸಲಹೆ ಮಾಡಿದರು.

ಸಾಹಿತಿ ಬಿ.ಟಿ.ಲಲಿತಾ ನಾಯಕ್‌, ‘ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ನಮ್ಮ ಜನಾಂಗದ ನಾಯಕರಿಗೆ ಕಾಂಗ್ರೆಸ್ ಪಕ್ಷ ಪ್ರಾತಿನಿಧ್ಯವನ್ನು ನೀಡಬೇಕು. ಸಮುದಾಯದ ವಲಸಿಗರಿಗೆ ನೆರವಾಗುವ ಸೂಕ್ತ ಯೋಜನೆಯನ್ನು ಜಾರಿಗೊಳಿಸಬೇಕು. ಸೇವಾಲಾಲ್ ಅವರ ಹೆಸರಿನಲ್ಲಿ ಕಂಡಕಂಡವರು ಹಣ ವಸೂಲಿ ಮಾಡುತ್ತಿರುವ ಪರಿಪಾಠವನ್ನು ತಪ್ಪಿಸಬೇಕು’ ಎಂದು ಕೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಕೆ.ರಾಠೋಡ್ ಮಾತನಾಡಿ, ‘ಕೆಪಿಸಿಸಿಯಲ್ಲಿ‌ ನಮ್ಮ ಸಮುದಾಯದ ಪ್ರತಿನಿಧಿಗಳಿಗೆ ಸದಸ್ಯತ್ವ ನೀಡಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಸಚಿವರು ಸರ್ಕಾರವನ್ನು ಒತ್ತಾಯಿಸಿ, ನಮ್ಮ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಹೇಳಿದರು.

ಸಂತ ಸೇವಾಲಾಲ್ ಅವರ ಕುರಿತ ವಿಶೇಷಾಂಕವನ್ನು ಬಿಡುಗಡೆ ಮಾಡಲಾಯಿತು. ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಿ.ಬಿ.ನಾಯಕ ಅವರು ಸೇವಾಲಾಲ್ ಅವರ ಕುರಿತು ಉಪ‌್ಯಾಸ ನೀಡಿದರು.‘ರುದ್ರಿಬಾಯಿ’ ಚಲನಚಿತ್ರದ ಆಡಿಯೊ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT