ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್ ಜಯಂತಿ: ಭಕ್ತಿಯ ಪರಾಕಾಷ್ಠೆ ಮೆರೆದ ಭಕ್ತರು

Last Updated 14 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ನ್ಯಾಮತಿ (ಸೂರಗೊಂಡನಕೊಪ್ಪ): ಸಂತ ಸೇವಾಲಾಲ್ ಅವರ 280ನೇ ಜಯಂತಿ ಕಾರ್ಯಕ್ರಮ ಗುರುವಾರ ಸಾವಿರಾರು ಭಕ್ತರ ಶ್ರದ್ಧಾ, ಭಕ್ತಿಯೊಂದಿಗೆ ನೆರವೇರಿತು.

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪಕ್ಕೆ ಬಿಳಿ ಬಟ್ಟೆ ತೊಟ್ಟು, ಕೆಂಪು ಬಣ್ಣದ ರುಮಾಲು, ಶಲ್ಯ ಧರಿಸಿ ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶದದಿಂದಲೂ ಮಾಲಾಧಾರಿಗಳಾಗಿ ಬಂದಿದ್ದ ಭಕ್ತರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ಬೆಳಿಗ್ಗೆಯಿಂದಲೇ ಭೋಗ್ ಸಮರ್ಪಣೆ ಹಾಗೂ ಮಾಲಾ ವಿಸರ್ಜನೆ ಕಾರ್ಯಕ್ರಮಗಳು ಪವಿತ್ರ ವೃಕ್ಷದ ಬಳಿ ನಡೆದವು.

ಹಲವರು ಬರಿಗಾಲಿನಲ್ಲಿ ನಡೆದು ಬಂದಿದ್ದರೆ, ಇನ್ನು ಹಲವರು ವಿವಿಧ ವಾಹನಗಳ ಮೂಲಕ ಸೇವಾಲಾಲ್‌ರ ಜನ್ಮಸ್ಥಳ ತಲುಪಿ ದರ್ಶನ ಭಾಗ್ಯ ಪಡೆದರು. ಎರಡನೇ ಶಬರಿಮಲೆ ಎಂದೇ ಹೆಸರಾದ ಈ ಕ್ಷೇತ್ರಕ್ಕೆ ಭಕ್ತರು ತಲೆಮೇಲೆ ಹರಕೆ ಸಾಮಗ್ರಿ ಹೊತ್ತು ಬಂದಿದ್ದರು. ಮಹಿಳೆಯರು ತಮ್ಮ ಜನಾಂಗದ ವಿಶೇಷ ಉಡುಗೆ ತೊಟ್ಟಿದ್ದರು. ಹಾದಿಯ ಉದ್ದಕ್ಕೂ ಭಜನೆ ಮಾಡುತ್ತಾ ಸಾಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು. ಅತಿಥಿ ಗೃಹ ಹಾಗೂ ಧರ್ಮಶಾಲಾ ಕಟ್ಟಡದ ಉದ್ಘಾಟನೆಯನ್ನು ಸಂಸದ ಬಿ‌.ವೈ. ರಾಘವೇಂದ್ರ ನೆರವೇರಿಸಿದರು. ಬಹಳಷ್ಟು ಗಣ್ಯರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಟಿ. ಹೀರಾಲಾಲ್, ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಪೋಷಕ ಸದಸ್ಯ ಹೀರಾನಾಯ್ಕ ಉಪಸ್ಥಿತರಿದ್ದರು.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಸಂಯುಕ್ತವಾಗಿ ಜಯಂತಿ ಹಮ್ಮಿಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT