ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಾರ್ಯಕರ್ತೆಯರ ಬದುಕು ದಯನೀಯ

ನಿರಾಶ್ರಿತರ ತಾಣಗಳ ಹುಡುಕಾಟ
Last Updated 31 ಮಾರ್ಚ್ 2020, 9:09 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ –19 ಹಲವರ ಬದುಕನ್ನು ಬೀದಿಯಲ್ಲಿ ನಿಲ್ಲಿಸಿದೆ. ಬೀದಿಯಲ್ಲೇ ದಿನದ ಕೂಳು ಹುಟ್ಟಿಸಿಕೊಳ್ಳುತ್ತಿದ್ದ ತೃತೀಯ ಲಿಂಗಿಗಳು ಮತ್ತು ಲೈಂಗಿಕ ಕಾರ್ಯಕರ್ತೆಯಗೆ ಈ ಬದುಕೇ ಇಲ್ಲದಂತಾಗಿದೆ.

‘ನಮ್ಮ ಪರಿಸ್ಥಿತಿ ಯಾಕೆ ಕೇಳ್ತೀರಿ ಸರ್, ನಾಯಿಗಿಂತ ಕಡೆ ಅಂತನೇ ತಿಳಿದುಕೊಳ್ಳಿ. ಇಷ್ಟು ದಿನ ಗಿರಾಕಿಗಳನ್ನುಹುಡುಕುತ್ತಿದ್ದೆವು. ಈಗ ಅನ್ನಕ್ಕಾಗಿ ನಿರ್ಗತಿಕರ ಆಶ್ರಯ ತಾಣಗಳಿಗೆ ಹೋಗುತ್ತಿದ್ದೇವೆ. ನಮ್ಮನ್ನು ಎಲ್ಲರೂ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರೆಯೇ ವಿನಹ, ನಮಗೂ ಊಟ– ಬಟ್ಟೆ ಬೇಕು ಅಂತ ಯಾರಿಗೆ ಅನ್ನಿಸಿದೆ ಹೇಳಿ’ ಎಂದು ಲೈಂಗಿಕ ಕಾರ್ಯಕರ್ತೆಯರ ಗುಂಪಿನ ನಾಯಕಿಯೊಬ್ಬರು ಪ್ರಶ್ನಿಸಿದರು.

‘ನಮಗ್ಯಾರಿಗೂ ಸ್ವಂತ ಮನೆ ಇಲ್ಲ. ನಾವು ಏನು ಕೆಲಸ ಮಾಡುತ್ತೇವೆ ಎಂಬುದು ಮನೆ ಮಾಲೀಕರಿಗೆ ಗೊತ್ತಿಲ್ಲ. ಮನೆ ಬಾಡಿಗೆ, ವಿದ್ಯುತ್ ಶುಲ್ಕ ಪಾವತಿಸಲೇಬೇಕು. ಕಾರ್ಖಾನೆಗಳ ಕಾರ್ಮಿಕರಿಗೆ ವೇತನ ಸಹಿತ ರಜೆ ಸಿಕ್ಕಿದೆ. ನಮಗೆ ಈ ರೀತಿಯ ರಜೆಯನ್ನು ಯಾರು ಕೊಡುತ್ತಾರೆ ಹೇಳಿ?’ ಎಂದು ಕೇಳಿದರು.

‘ನಿಮ್ಹಾನ್ಸ್ ಬಳಿ ಇರುವ ಆಶ್ರಯ ತಾಣಕ್ಕೆ ಮಧ್ಯಾಹ್ನ ಹೋಗಿ ಊಟ ಮಾಡಿಕೊಂಡು ಬಂದೆ. ಬರುವಾಗ ಪೊಲೀಸರು ಅಡ್ಡಗಟ್ಟಿ ಅಟ್ಟಾಡಿಸಿದರು. ಅವರ ಪಾಲಿಗೆ ನಾವು ನಾಯಿಗಳು. ಮನಸು ಬಂದಾಗಲೆಲ್ಲಾ ನಮ್ಮ ಮೇಲೆ ಲಾಠಿ ಬೀಸುತ್ತಾರೆ. ಇವರ ಭಯದಿಂದಲೇ ಹೊರ ಹೋಗಲು ನಮ್ಮ ಹೆಣ್ಣು ಮಕ್ಕಳು ಹೆದರುತ್ತಿದ್ದಾರೆ. ರಾತ್ರಿ ಊಟವೇ ಬೇಡ ಎನ್ನುವಷ್ಟು ಮನಸ್ಸಿಗೆ ನೋವಾಗಿವೆ’ ಎಂದು ಅವರು ಕಣ್ಣೀರಿಟ್ಟರು.

‘ಬೆಂಗಳೂರಿನಲ್ಲೇ ಬೀದಿಗಳಲ್ಲಿ ಸಾವಿರಾರು ಹೆಣ್ಣು ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ. ಈಗ ಅವರಿಗೆ ಅನ್ನಕ್ಕೂ ಗತಿ ಇಲ್ಲವಾಗಿದೆ. ಮೂರ್ನಾಲ್ಕು ಮಕ್ಕಳಿರುವವರಿಗೆ ನ್ಯಾಯಬೆಲೆ ಅಂಗಡಿಯ ಅಕ್ಕಿ ಒಂದು ವಾರಕ್ಕೂ ಸಾಕಾಗುವುದಿಲ್ಲ. ಸಂಘ– ಸಂಸ್ಥೆಗಳು ದಿನಸಿ ಪದಾರ್ಥ ಕೊಡುತ್ತಿವೆ ಎಂಬುದನ್ನು ಟಿವಿಯಲ್ಲಿ ನೋಡಿದ್ದೇವೆ. ನಮ್ಮಂಥವರ ಮನೆ ಮುಂದೆ ಒಬ್ಬರೂ ದಿನಸಿ ತಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗಂಜಿ– ನೀರೇ ಗತಿ

‘ತೃತೀಯ ಲಿಂಗಿಗಳಲ್ಲಿ ಕೆಲವರು ಟೋಲ್ ಸಂಗ್ರಹ ಕೇಂದ್ರ, ಟ್ರಾಫಿಕ್ ಸಿಗ್ನಲ್, ಅಂಗಡಿಗಳ ಮುಂದೆ ಭಿಕ್ಷೆ ಬೇಡಿದರೆ, ಮತ್ತೆ ಕೆಲವರು ಲೈಂಗಿಕ ವೃತ್ತಿಯನ್ನೇ ಅವಲಂಭಿಸಿದ್ದಾರೆ. ಈಗ ಯಾರೂ ಬೀದಿಗೆ ಬರುವಂತಿಲ್ಲ. ಮನೆಯಲ್ಲೇ ಗಂಜಿ–ನೀರು ಕುಡಿದು ಬದುಕುವಂತಾಗಿದೆ’ ಎಂದು ತೃತೀಯ ಲಿಂಗಿಗಳ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹೇಳಿದರು.

‘ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ನಮ್ಮಲ್ಲಿ ಕೆಲವರು ಎಚ್‌ಐವಿ ಸೋಂಕಿತರಿದ್ದಾರೆ. ಊಟಕ್ಕಾಗಿ ಗುಂಪಿನಲ್ಲಿ ಹೋಗಿ ಮತ್ತೊಂದು ರೋಗ ಅಂಟಿಸಿಕೊಳ್ಳಬೇಕಾಗುತ್ತದೆ. ಅಧಿಕಾರಿಗಳಿಗೆ ಈ ಸೂಕ್ಷ್ಮತೆ ಇರದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಬೆಂಗಳೂರಿನಲ್ಲೇ 2 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದಾರೆ. ಬಾಡಿಗೆ ಮನೆ ಮತ್ತು ಹಮಾಮ್ ಕೇಂದ್ರಗಳಲ್ಲಿ ವಾಸವಿದ್ದಾರೆ. ಬಾಡಿಗೆ ಕೊಡದಿದ್ದರೆ ಮಾಲೀಕರು ವಾಸವಿರಲು ಬಿಡುವುದಿಲ್ಲ. ಸದ್ಯಕ್ಕೆ ನಮ್ಮ ಸಂಘಟನೆಗಳ ಮೂಲಕ ಆಹಾರ ಪದಾರ್ಥಗಳನ್ನು ಒಟ್ಟುಗೂಡಿಸಿ ತಲುಪಿಸುವ ಕೆಲಸವನ್ನು ನಾವೂ ಮಾಡುತ್ತಿದ್ದೇವೆ’ ಎಂದರು.

ಕಾಂಡೋಮ್‌ ಕೇಳೋರಿಲ್ಲ

ರಾಜ್ಯದಲ್ಲಿ ಪ್ರತಿ ತಿಂಗಳು 30 ಲಕ್ಷದಿಂದ 35 ಲಕ್ಷ ಕಾಂಡೋಮ್‌ಗಳನ್ನು ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣಾ ಸಂಸ್ಥೆ(ಕೆಎಸ್‌ಎಪಿಎಸ್‌) ವಿತರಣೆ ಮಾಡುತ್ತದೆ. ಕಳೆದ 20 ದಿನಗಳಿಂದ ನಿರೋಧ್ ಕೇಳೋರಿಲ್ಲದ ಕಾರಣ ಹಂಚಿಕೆಯಾಗಿಲ್ಲ.

’ರಾಜ್ಯದಲ್ಲಿ ನೊಂದಾಯಿತ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ 76 ಸಾವಿರ ಇದ್ದರೆ, ಬೆಂಗಳೂರಿನಲ್ಲೇ 21 ಸಾವಿರ ಮಂದಿ ಇದೆ. ಮೂರು ವಾರಗಳಿಂದ ಗಿರಾಕಿಗಳಲ್ಲಿದೆ ಅವರು ಮನೆಯಲ್ಲೇ ಇದ್ದಾರೆ. ಹೀಗಾಗಿ ನಿರೋಧ್‌ಗೆ ಬೇಡಿಕೆ ಇಲ್ಲ’ ಎಂದು ಕೆಎಸ್‌ಎಪಿಎಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT