ಲೈಂಗಿಕ ದೌರ್ಜನ್ಯ: ಪ್ರಾಂಶುಪಾಲ ಬಂಧನ

ಹನೂರು: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಏಕಲವ್ಯ ವಸತಿ ಶಾಲೆ ಪ್ರಾಂಶುಪಾಲ ಎಂ.ಲೋಕೇಶ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
‘ತಾಲ್ಲೂಕಿನ ಮಂಗಲ ಗ್ರಾಮದ ಬಳಿಯಿರುವ ಏಕಲವ್ಯ ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲ ಲೋಕೇಶ್ ಅವರು ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದು, ಸಿಬ್ಬಂದಿಗೂ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’
ಎಂದು ಪೋಷಕರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಅವರಿಗೆ ದೂರು ನೀಡಿದ್ದರು.
ಇದರ ಆಧಾರದಲ್ಲಿ ಕೃಷ್ಣಪ್ಪ ಅವರು ಶುಕ್ರವಾರ ರಾತ್ರಿ ಶಾಲೆಗೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದರು.
‘ಡಿಸೆಂಬರ್ 29 ಹಾಗೂ ಜ. 14ರಂದು ಶಾಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕಾಲೇಜು ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿಯ
ರೊಂದಿಗೆ ಲೋಕೇಶ್ ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ನಮಗೆ ಬೆದರಿಕೆ ಹಾಕಿದ್ದರು. ಮಕ್ಕಳು ಕಿರುಕುಳ ತಾಳಲಾರದೆ ಪೋಷಕರ ಬಳಿ ಹೇಳಿಕೊಂಡಿದ್ದರು. ಮಕ್ಕಳ ಪೋಷಕರು ನಮಗೆ ದೂರವಾಣಿ ಮೂಲಕ ತಿಳಿಸಿದ್ದಾರೆ’ ಎಂದು
ಶಾಲಾ ಸಿಬ್ಬಂದಿ, ಕೃಷ್ಣಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಕೃಷ್ಣಪ್ಪ ಅವರು ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆಗೆ ಯತ್ನ: ಠಾಣೆಗೆ ದೂರು ನೀಡಲು ಹೋದ ಸಂದರ್ಭದಲ್ಲಿ ಕೃಷ್ಣಪ್ಪ ಮೇಲೆ ಲೋಕೇಶ್ ಹಲ್ಲೆಗೆ ಯತ್ನಿಸಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಅವರು ಆರೋಪಿ ವಿರುದ್ಧ ಕೊಲೆ ಬೆದರಿಕೆ ಹಾಕಿರುವ ದೂರು ನೀಡಿದ್ದಾರೆ.
ಇದು ಮೂರನೇ ಬಾರಿ
ಬಂಧಿತ ಲೋಕೇಶ್ ಈ ಹಿಂದೆ ಪಿರಿಯಾಪಟ್ಟಣ ವಸತಿ ಶಾಲೆ, ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಇಂತಹುದೇ ಪ್ರಕರಣದಲ್ಲಿ ಭಾಗಿಯಾಗಿ ಸೇವೆಯಿಂದ
ಅಮಾನತುಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All