ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾದಿ ಭಾಗ್ಯ ರದ್ದು: ‘ಕೈ’ ಶಾಸಕರ ಅಸಮಾಧಾನ

Last Updated 7 ಮಾರ್ಚ್ 2020, 5:01 IST
ಅಕ್ಷರ ಗಾತ್ರ

ಬೆಂಗಳೂರು: ‘ಬಜೆಟ್‍ನಲ್ಲಿ ಶಾದಿ ಭಾಗ್ಯ ಯೋಜನೆಯನ್ನೇ ಕೈ ಬಿಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಳೆದ ಬಾರಿಗಿಂತ ಶೇ 36ರಷ್ಟು ಕಡಿಮೆ ಹಣ ಮೀಸಲಿಡಲಾಗಿದೆ’ ಎಂದು ಮುಸ್ಲಿಂ ಸಮುದಾಯದ ಕಾಂಗ್ರೆಸ್‌ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿವೇಶನದಲ್ಲಿ ಈ ಬಗ್ಗೆ ವಿಶೇಷ ಚರ್ಚೆಗೆ ಕಾಲಾವಕಾಶ ನೀಡುವಂತೆ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಒತ್ತಾಯಿಸಲು ‌ಶಾಸಕರಾದ ಜಮೀರ್ ಅಹಮದ್, ಯು.ಟಿ. ಖಾದರ್ ಮತ್ತು ತನ್ವೀರ್ ಸೇಠ್ ನಿರ್ಧರಿಸಿದ್ದಾರೆ.

‘2019-20ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ ₹ 1985.86 ಕೋಟಿ ಒದಗಿಸಲಾಗಿತ್ತು. ಈ ಬಾರಿ ಕೇವಲ ₹ 1278.30 ಕೋಟಿ ನೀಡಲಾಗಿದೆ. ₹ 707.56 ಕೋಟಿ ಕಡಿತ ಮಾಡಲಾಗಿದೆ’ ಎಂದೂ ಸಿಟ್ಟು ಹೊರಹಾಕಿದರು.

ವಿಧಾನಸೌಧದಲ್ಲಿ ‌ಮಾತನಾಡಿದ ಜಮೀರ್ ಅಹಮದ್, ‘ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವಧಿಯಲ್ಲಿ ಶಾದಿ ಭಾಗ್ಯ ಯೋಜನೆಗೆ ₹ 60 ಕೋಟಿ ಒದಗಿಸಲಾಗಿತ್ತು. ಇನ್ನೂ 33 ಸಾವಿರ ಅರ್ಜಿಗಳು ಬಾಕಿ ಇವೆ. ಇದಕ್ಕೆ ₹ 160 ಕೋಟಿ ಅಗತ್ಯವಿದೆ’ ಎಂದರು.

‘ಅಲ್ಪಸಂಖ್ಯಾತರ ಕೌಶಲ ಅಭಿವೃದ್ಧಿ ಹಾಗೂ ವಿದ್ಯಾರ್ಥಿ ವೇತನಕ್ಕೆ ವಾರ್ಷಿಕ ನೀಡುತ್ತಿದ್ದ ₹ 275 ಕೋಟಿಯಲ್ಲಿ ₹175 ಕೋಟಿ ಕಡಿತ ಮಾಡಿ ₹ 100 ಕೋಟಿ ನೀಡಲಾಗಿದೆ. ಸಮುದಾಯಕ್ಕೆ ಕಿರುಸಾಲ ಯೋಜನೆಗೆ ಕಳೆದ ಬಾರಿ ₹ 83 ಕೋಟಿ ನೀಡಲಾಗಿತ್ತು. ಈ ಬಾರಿ ಅದನ್ನು ₹ 55 ಕೋಟಿಗೆ ಇಳಿಸಲಾಗಿದೆ. ವಕ್ಫ್ ಬೋರ್ಡ್‌ಗೆ ಸೇರಿದ ಮಸೀದಿಗಳಲ್ಲಿನ ಇಮಾಮ್‌ ಮತ್ತು ಮೌಝಾನ್‍ಗಳಿಗೆ ಗೌರವ‌ಧನ ನೀಡಲು ಕಳೆದ ಬಾರಿ ₹ 65 ಕೋಟಿ ಒದಗಿಸಲಾಗಿತ್ತು. ಈ ಬಾರಿ ₹ 55 ಕೋಟಿಗೆ ಇಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT