ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹32.90 ಲಕ್ಷ ನಗದು ವಶ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹ 32.90 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತೇರದಾಳದಲ್ಲಿ ನಾಲ್ವರು ಲಾರಿ ಚಾಲಕರಿಂದ ₹11.83 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಸಾಗಿಸುತ್ತಿದ್ದ ₹ 9.96 ಲಕ್ಷ ನಗದನ್ನು ಹೂವಿನಹಡಗಲಿ ತಾಲ್ಲೂಕಿನ ಕೊಮಾರನಹಳ್ಳಿ ತಾಂಡಾ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಇಟ್ಟಿಗಿ ಗ್ರಾಮದ ರಾಮನಗೌಡ ಎಂಬುವವರು ಈ ಹಣವನ್ನು ಒಯ್ಯುತ್ತಿದ್ದರು.

ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಭಾಷಾಸಾಬ್ ನಬಿಸಾಬ್ ಇಳಕಲ್‌ ಅವರಿಂದ ₹ 6.38 ಲಕ್ಷ, ರಬಕವಿಯ ಸಿದ್ರಾಮ ಅಣ್ಣಪ್ಪ ಮೇತ್ರಿ ಎಂಬುವವರಿಂದ ₹ 2.19 ಲಕ್ಷ, ನಜೀರ್‌ ಲತೀಫ್‌ ನಿಪ್ಪಾಣಿ ಎಂಬುವವರಿಂದ ₹58,840 ಹಾಗೂ ಇರ್ಫಾನ್‌ ಅಲ್ಲಿಸಾಬ್‌ ಇನಾಮದಾರ ಅವರಿಂದ ₹2.64 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಲಾರಿ ಚಾಲಕರು.

ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ರಾಯಚೂರಿನ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ಕಾರಿನಲ್ಲಿ ₹ 3 ಲಕ್ಷ ನಗದು ಪತ್ತೆಯಾಗಿದೆ. ‘ಅರಣ್ಯ ಇಲಾಖೆಗೆ ಸಂಬಂಧಿಸಿದ ಹಣ ಎಂದು ರಾಘವೇಂದ್ರ ತಿಳಿಸಿದ್ದಾರೆ. ಆದರೆ ಯಾವುದೇ ದಾಖಲೆಗಳು ಅವರ ಬಳಿಯಿರಲಿಲ್ಲ. ಸೂಕ್ತ ದಾಖಲೆಗಳನ್ನು ಒದಗಿಸಿದರೆ ಹಣ ಮರಳಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಪ್ರಜಾವಾಣಿಗೆ ತಿಳಿಸಿದರು.

ಗದಗ ತಾಲ್ಲೂಕಿನ ದುಂದೂರು ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಪುಣೆ ಮೂಲದ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಸಾಗಿಸುತ್ತಿದ್ದ ₹3 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕು ಬಳೂರ್ಗಿ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹3 ಲಕ್ಷ ನಗದನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡರು. ಮಹಾರಾಷ್ಟ್ರದ ಅಕ್ಕಲಕೋಟದಿಂದ ಸಿಂದಗಿ ತಾಲ್ಲೂಕು ಆಲಮೇಲಕ್ಕೆ ಹಣ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರ ಬಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಸಮರ್ಪಕ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹1.90 ಲಕ್ಷವನ್ನು ಚುನಾವಣಾ ಮಾದರಿ ನೀತಿ ಸಂಹಿತೆ ತಂಡ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT