ಭಾನುವಾರ, ಡಿಸೆಂಬರ್ 15, 2019
24 °C
ಸದಸ್ಯತ್ವ ನೋಂದಣಿ ವಿಫಲ; ‘ಕೈ’ ನಾಯಕರ ವಿರುದ್ಧ ಸಿಟ್ಟು

ನಿರೀಕ್ಷಿತ ಯಶಸ್ಸು ಕಾಣದ ಕಾಂಗ್ರೆಸ್ ಸಂಘಟನೆಯ ‘ಶಕ್ತಿ’: ರಾಹುಲ್‌ ಗಾಂಧಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಜ್ಜಾಗಲು ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲೆಂದು ಕಾಂಗ್ರೆಸ್‌ ರೂಪಿಸಿರುವ ‘ಶಕ್ತಿ’ ಕಾರ್ಯತಂತ್ರ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಈ ವೈಫಲ್ಯಕ್ಕೆ ಪಕ್ಷದ ರಾಜ್ಯ ನಾಯಕರ ವಿರುದ್ಧ ರಾಹುಲ್‌ ಗಾಂಧಿ ಗರಂ ಆಗಿದ್ದಾರೆ.

ಪಕ್ಷದಿಂದ ಆರಿಸಿ ಬಂದು ಸಚಿವರಾದವರ, ಶಾಸಕರ ಮತ್ತು ಮುಖಂಡರ ನಿರ್ಲಕ್ಷ್ಯದಿಂದಾಗಿ ಕನಸಿನ ಯೋಜನೆ ವಿಫಲವಾಗಿದೆ. ನವೆಂಬರ್‌ ಅಂತ್ಯಕ್ಕೆ ಮುಗಿಯಬೇಕಿದ್ದ ಈ ನೋಂದಣಿ ಅಭಿಯಾನವನ್ನು ವರಿಷ್ಠರ ಸೂಚನೆಯಂತೆ ಡಿ. 15ರವರೆಗೆ ವಿಸ್ತರಿಸಲಾಗಿದೆ.

‘ಶಕ್ತಿ’ ವೈಫಲ್ಯಕ್ಕೆ ಆಯಾ ಕ್ಷೇತ್ರಗಳಿಗೆ ನೇಮಿಸಿರುವ ಉಸ್ತುವಾರಿ ಕಾರ್ಯದರ್ಶಿಗಳ ನಿರುತ್ಸಾಹವೇ ಕಾರಣ ಎಂದು ಅಭಿಪ್ರಾಯಪಟ್ಟಿರುವ ಕೆ‍ಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯದರ್ಶಿಗಳ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಈ ಯೋಜನೆಯಡಿ ನೋಂದಣಿಯಾಗಲು 70450 06100 ಮೊಬೈಲ್‌ ಸಂಖ್ಯೆಗೆ ಮತದಾನದ ಗುರುತಿನ ಚೀಟಿಯ ಸಂಖ್ಯೆ ಕಳುಹಿಸಬೇಕು. ಆ ಮೂಲಕ, ಯಾರೂ ಬೇಕಾದರೂ ಕಾಂಗ್ರೆಸ್ ಸದಸ್ಯತ್ವ ಪಡೆಯಬಹುದು. ಇದರಿಂದ ತಳಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಯಾವ ಪ್ರದೇಶದಲ್ಲಿ ಪಕ್ಷ ಪ್ರಬಲವಾಗಿದೆ. ಎಲ್ಲಿ ದುರ್ಬಲವಾಗಿದೆ ಎಂಬ ಮಾಹಿತಿ ಗೊತ್ತಾಗುತ್ತದೆ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

‘ಆದರೆ, ರಾಜ್ಯದಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ನೊಂದಣಿ ಆಗಿಲ್ಲ. ಇದಕ್ಕೆ ಪಕ್ಷದ ನಾಯಕರ ನಿರಾಸಕ್ತಿ ಕಾರಣ ಎಂದು ಹೇಳಲಾಗಿದೆ. ರಾಜಸ್ಥಾನದಲ್ಲಿ 7 ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಮಧ್ಯಪ್ರದೇಶದಲ್ಲಿ 6 ಲಕ್ಷ, ಛತ್ತೀಸ್‌ಗಡದಂಥ ಸಣ್ಣ ರಾಜ್ಯದಲ್ಲಿ 4.5 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದೂ ಹೇಳಿದರು.

ಕರ್ನಾಟಕದಲ್ಲಿ ಎರಡು ತಿಂಗಳ ಅವಧಿಯಲ್ಲಿ ಕೇವಲ 3 ಲಕ್ಷ ನೊಂದಣಿಯಾಗಿದೆ. ಇದು ಪಕ್ಷದ ರಾಷ್ಟ್ರೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ನೋಂದಣಿಯಾಗಿರುವ ಪಟ್ಟಿ ಬಿಡುಗಡೆಯಾಗಿದ್ದು, ಮುಖಂಡರ ಸಾಧನೆ ನಿರಾಶಾದಾಯಕವಾಗಿದೆ ಎಂದೂ ಗೊತ್ತಾಗಿದೆ.

ಅದರಲ್ಲೂ ಸಚಿವರು, ಸಚಿವ ಸ್ಥಾನ ಆಕಾಂಕ್ಷಿಗಳಿರುವ ಶಾಸಕರ ಕ್ಷೇತ್ರಗಳಲ್ಲಿ ತೀರಾ ಕಳಪೆ ಸಾಧನೆ ಕಂಡುಬಂದಿದೆ.

ಇದೀಗ, ಡಿ. 15ರೊಳಗೆ ಕನಿಷ್ಠ 10 ಲಕ್ಷ ನೋಂದಣಿಗೆ ಗುರಿ ನೀಡಿರುವ ವರಿಷ್ಠರು, ‘ಪಕ್ಷ ಸಂಘಟನೆ ಮಾಡುವ ಮೂಲಕ ಮೊದಲು ಸದಸ್ಯತ್ವ ನೊಂದಣಿಗೆ ಆದ್ಯತೆ ನೀಡಿ. ಬಳಿಕ ಸಚಿವ ಸ್ಥಾನದ ಬೇಡಿಕೆ ಮುಂದಿಡಿ’ ಎಂದು  ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಬಿಸಿ ಮುಟ್ಟಿಸಿದ್ದಾರೆ ಎಂದೂ ಗೊತ್ತಾಗಿದೆ.

ಹೈಕಮಾಂಡ್‌ನ ಈ ಖಡಕ್‌ ಸೂಚನೆಯಿಂದ ಕೆಲವು ಶಾಸಕರು, ಸಚಿವ ಸ್ಥಾನ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ. ಪಕ್ಷ ಸಂಘಟನೆ ಕಡೆಗೆ ಹೆಚ್ಚಿನ ಗಮನ ನೀಡಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

ದೇಶದಾದ್ಯಂತ ಆರಂಭಗೊಂಡ ‘ಶಕ್ತಿ’ ಯೋಜನೆಗೆ ಜುಲೈ ತಿಂಗಳಲ್ಲಿ ರಾಹುಲ್ ಗಾಂಧಿ ನವದೆಹಲಿಯಲ್ಲಿ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಈ ಅಭಿಯಾನಕ್ಕೆ ಪಿ. ಚಿದಂಬರಂ ಜುಲೈ 26ರಂದು ಚಾಲನೆ ನೀಡಿದ್ದರು.

ಸಚಿವರ ಕ್ಷೇತ್ರಗಳಲ್ಲಿ ಫಲ ನೀಡದ ‘ಶಕ್ತಿ’

ಅಧಿಕಾರ ಸಿಕ್ಕಿದ ಬಳಿಕ ಪಕ್ಷ ಸಂಘಟನೆ ಕಡೆಗೆ ಸಚಿವರು ಗಮನ ನೀಡದಿರುವುದೇ ‘ಶಕ್ತಿ’ ಯೋಜನೆ ವಿಫಲವಾಗಲು ಕಾರಣ ಎಂದು ಕಾಂಗ್ರೆಸ್‌ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಸಚಿವರ ಕ್ಷೇತ್ರಗಳಲ್ಲಿ ‘ಶಕ್ತಿ’ ಯೋಜನೆಯ ವಿವರ ಕೇಳಿದ ರಾಹುಲ್ ಗಾಂಧಿ, ‘ಅಧಿಕಾರ ಕೊಟ್ಟರೂ ಪಕ್ಷಕ್ಕೆ ಸಚಿವರು ನೀಡಿದ ಕೊಡುಗೆ ಏನು’ ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.
**

ಮುಖ್ಯಾಂಶಗಳು
ಯೋಜನೆ ಡಿ. 15ರವರೆಗೆ ವಿಸ್ತರಣೆ

‘ಉಸ್ತುವಾರಿ’ಗಳ ವಿರುದ್ಧ ದಿನೇಶ್‌ ಅತೃಪ್ತಿ

ಸಚಿವ ಸ್ಥಾನ ಆಕಾಂಕ್ಷಿಗಳ ವಿರುದ್ಧವೂ ಕಿಡಿ

**

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು