ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಹೊಸಪೇಟೆ ಸೋಂಕುಮುಕ್ತವೆಂದು ಘೋಷಿಸಲು ಜಿಲ್ಲಾಡಳಿತ ಚಿಂತನೆ

ಕೇಂದ್ರದ ಸೂಚನೆ ಬಳಿಕ ನಿರ್ಧಾರ: ಜಿಲ್ಲಾಧಿಕಾರಿ ನಕುಲ್‌
Last Updated 28 ಏಪ್ರಿಲ್ 2020, 7:21 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಮೊದಲಿಗೆ ಕೊರೊನಾ ಸೋಂಕಿತರು ಕಂಡು ಬಂದ ಹೊಸಪೇಟೆಯ ಎಸ್‌.ಆರ್‌. ನಗರವನ್ನು ಕೊರೊನಾ ಸೋಂಕುಮುಕ್ತ ಎಂದು ಘೋಷಿಸಬಹುದೇ ಎಂದು ಕೇಳಿರುವ ಜಿಲ್ಲಾಡಳಿತವು ಕೇಂದ್ರ ಸರ್ಕಾರದ ಗಮನ ಸೆಳೆದಿದೆ.

ಈ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ‘ಯಾವುದೇ ಪ್ರದೇಶದಲ್ಲಿ ಮೊದಲ ಸೋಂಕಿತರು ಕಂಡು ಬಂದ 28 ದಿನಗಳ ಬಳಿಕ ಹೊಸ ಸೋಂಕಿತರು ಕಂಡು ಬರದೇ ಇದ್ದರೆ ಅದನ್ನು ಸೋಂಕು ಮುಕ್ತ ಎಂದು ಘೋಷಿಸಬಹುದು. ಅಲ್ಲಿ ಮಾರ್ಚ್‌ 30ರಂದು ಮೂವರಿಗೆ ಸೋಂಕು ಕಂಡುಬಂದಿತ್ತು. ನಂತರ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದವರೆಲ್ಲರನ್ನೂ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಅವರ ಪೈಕಿ ಎಂಟು ಮಂದಿಗೆ ಬೇರೆ ಬೇರೆ ದಿನಗಳಲ್ಲಿ ಸೋಂಕು ಕಂಡು ಬಂದಿರುವುದರಿಂದ ಸೋಂಕು ಮುಕ್ತ ಎಂದು ಘೋಷಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಲಾಗಿದೆ’ ಎಂದರು.

‘ಬೇರೆ ದಿನಾಂಕಗಳಲ್ಲಿ ಹೊಸ ಸೋಂಕಿತರು ಕಂಡು ಬಂದರೂ, ಅವರೆಲ್ಲರನ್ನೂ ಕ್ವಾರಂಟೈನ್‌ನಲ್ಲೇ ಇಟ್ಟಿರುವುದರಿಂದ, ಮೊದಲ ಸೋಂಕಿತರು ಕಂಡು ಬಂದ ದಿನವನ್ನು ಪರಿಗಣಿಸಿ ಸೋಂಕುಮುಕ್ತಗೊಳಿಸಲು ಅವಕಾಶವಿದೆಯೇ ಎಂಬುದು ಸದ್ಯ ಗೊಂದಲಕ್ಕೆ ದಾರಿ ಮಾಡಿದೆ’ ಎಂದರು.

‘ಸಿರುಗುಪ್ಪದ ಎಚ್‌.ಹೊಸಳ್ಳಿಯಲ್ಲಿ ಏಪ್ರಿಲ್‌ 2ರಂದು ಮತ್ತು ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ಏಪ್ರಿಲ್‌ 5ರಂದು ಸೋಂಕಿತರು ಕಂಡು ಬಂದ ಬಳಿಕ ಯಾರಲ್ಲೂ ಮತ್ತೆ ಸೋಂಕು ಕಾಣಿಸಿಕೊಂಡಿಲ್ಲ. 28 ದಿನಗಳ ಬಳಿಕ ಈ ಪ್ರದೇಶಗಳನ್ನು ಸೋಂಕುಮುಕ್ತಗೊಳಿಸಲು ಸಾಧ್ಯವಿದೆ’ ಎಂದು ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್‌ ತಿಳಿಸಿದರು.

‘ಸದ್ಯ ಕೋವಿಡ್‌ ಆಸ್ಪತ್ರೆಯಲ್ಲಿ ಎಂಟು ಮಂದಿ ಸೋಂಕಿತರಷ್ಟೇ ಇದ್ದಾರೆ. 14 ದಿನ ಕಾಲ ಪ್ರತಿ ದಿನವೂ ಅವರ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಆರೋಗ್ಯ ಪರಿಶೀಲನೆ ನಡೆಸುತ್ತಾರೆ. ಅವರು ಹೊರಕ್ಕೆ ಬರುವಂತಿಲ್ಲ. ಹೀಗಾಗಿ ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಅವರ ಮನೆಗೇ ತಲುಪಿಸಲಾಗುತ್ತಿದೆ. 14 ದಿನದ ನಂತರದ 14 ದಿನಗಳಲ್ಲಿ ಸೋಂಕುಮುಕ್ತರು ದಿನವೂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ಕೊಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೆಗೆಟಿವ್‌: ಸೋಂಕಿತರೊಂದಿಗೆ ಪ್ರಥಮ ಹಂತದ ಸಂಪರ್ಕವುಳ್ಳ 204 ಮಂದಿ ಮತ್ತು ದ್ವಿತೀಯ ಹಂತದ ಸಂಪರ್ಕವುಳ್ಳ 248 ಮಂದಿಯ ಐದನೇ ದಿನ ಮತ್ತು 12ನೇ ದಿನ ತಪಾಸಣೆ ಮಾಡಲಾಗಿದ್ದು, ಕೊರೊನಾ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಅವರನ್ನ ಕೂಡ ಆಸ್ಪತ್ರೆಯಿಂದ ಕಳಿಸಿ ಹೋಂ ಕ್ವಾರಂಟೈನಲ್ಲಿರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಕೋವಿಡ್‌ ಆಸ್ಪತ್ರೆ ಬದಲಿಲ್ಲ
ಜಿಲ್ಲಾಸ್ಪತ್ರೆ ಇನ್ನೂ ಕೆಲ ತಿಂಗಳು ಕೋವಿಡ್‌ ಆಸ್ಪತ್ರೆಯಾಗಿಯೇ ಮುಂದುವರಿಯಲಿದೆ ಎಂಬ ಸೂಚನೆಯನ್ನು ಜಿಲ್ಲಾಧಿಕಾರಿ ನೀಡಿದರು.

‘ಜಿಲ್ಲಾಸ್ಪತ್ರೆ ಅತಿ ಹೆಚ್ಚಿನ ಜನರಿಗೆ ಅನುಕೂಲ ಕಲ್ಪಿಸುತ್ತಿತ್ತು ಎಂಬುದು ನಿಜ. ಆದರೆ ಅಲ್ಲಿನ ಕೋವಿಡ್‌ ಆಸ್ಪತ್ರೆಯನ್ನು ವಿಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸಲು ಆಗದು. ಹಾಗೆ ಸ್ಥಳಾಂತರಿಸಿದರೆ, ಜಿಲ್ಲಾಸ್ಪತ್ರೆಯಲ್ಲಿ ಅಪಘಾತ, ತುರ್ತು ಚಿಕಿತ್ಸಾ ಘಟಕಗಳ ಸೇವೆಯನ್ನು ನೀಡಲು ಆಗುವುದಿಲ್ಲ’ ಎಂದರು.

‘ಮೇ 3ರ ಬಳಿಕ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಸಂಚಾರಕ್ಕೆ ಅನುಮತಿ ದೊರಕಿದರೆ, ಅದರಿಂದಲೂ ಜಿಲ್ಲೆಯಲ್ಲಿ ಸೋಂಕು ಹಬ್ಬುವ ಸಾಧ್ಯತೆ ಇರುತ್ತದೆ. ಅಂಥ ಅಪಾಯಕಾರಿ ಸನ್ನಿವೇಶದಲ್ಲಿ ಚಿಕಿತ್ಸೆಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುವುದು ಬೇಡ ಎಂಬ ಕಾರಣಕ್ಕೆ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿಯೇ ಮೀಸಲಿರಿಸಲಾಗಿದೆ’ ಎಂದು ಹೇಳಿದರು.

‘ಕೋವಿಡ್‌ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸವೂ ನಡೆದಿದೆ. ಹೈ ಫ್ಲೋ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಕಿಲೋ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಅಳವಡಿಸಿರುವುದರಿಂದ ಕೊರತೆಯಾಗುವುದಿಲ್ಲ. ಮೂವತ್ತು ಐಸಿಯು ಬೆಡ್‌ ಸೌಕರ್ಯವೂ ಸೇರ್ಪಡೆಗೊಂಡಿದೆ’ ಎಂದರು.

ದಿನಕ್ಕೆ 100 ಮಂದಿ ಗಂಟಲ ದ್ರವ ಸಂಗ್ರಹ
ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿಯೇ ಇಡೀ ಜಿಲ್ಲೆಯಲ್ಲಿರುವ ಗರ್ಭಿಣಿಯರು, ವಿಶೇಷ ವರ್ಗದವರು, ಕ್ಷಯ ಪೀಡಿತರು, ಹಿರಿಯ ನಾಗರಿಕರು ಹಾಗೂ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವಲ್ಲೂ ಜ್ವರ ಪರಿಶೀಲನೆ ನಡೆಸಲಾಗಿದೆ. ಅವರ ಪೈಕಿ 221 ಮಂದಿಗೆ ಜ್ವರ ಕಂಡು ಬಂದ ಬಳಿಕ ಕೊರೊನಾ ತಪಾಸಣೆ ನಡೆಸಲಾಗಿದೆ. ಜ್ವರ ಕ್ಲಿನಿಕ್‌ಗಳಲ್ಲಿ ದಿನವೂ ನೂರು ಮಂದಿಯ ಗಂಟ ದ್ರವ ತೆಗೆದುತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

48 ಆಟೋರಿಕ್ಷಾ ವಶಕ್ಕೆ
‘ಲಾಕ್‌ಡೌನ್‌ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ ಅಷ್ಟೇ. ಹಾಗೆಂದು ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿಲ್ಲ. ಹೀಗಾಗಿ ಜನರನ್ನು ಕರೆದೊಯ್ಯುತ್ತಿದ್ದ 48 ಆಟೋರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದರು.

‘ಜಿಲ್ಲೆಯು ಈಗ ಕಿತ್ತಳೆ ವಲಯಕ್ಕೆ ಸೇರಿರುವುದರಿಂದ ಜನ ಮತ್ತು ವಾಹನ ಸಂಚಾರಕ್ಕೆ ಸಡಿಲಿಕೆ ನೀಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್‌ ಧರಿಸುವುದು ಕಡ್ಡಾಯ’ ಎಂದು ಸ್ಪಷ್ಟಪಡಿಸಿದರು.

‘ಒಂಟಿ ಅಂಗಡಿಗಳು ಮಾತ್ರ ತೆರೆಯಬಹುದು. ಬಹು ಅಂಗಡಿಗಳಿರುವ ಮಳಿಗೆಗಳು, ವಾಣಿಜ್ಯ ಸಂಕೀರ್ಣಗಳನ್ನು ತೆರೆಯುವಂತಿಲ್ಲ’ ಎಂದರು.

‘ಕಳ್ಳಬಟ್ಟಿ ಸಾರಾಯಿಸಂಬಂಧ ದಿನವೂ ಸರಾಸರಿ ನಾಲ್ಕು ಪ್ರಕರಣಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ. ಗುಟ್ಕಾ, ಸಿಗರೇಟ್‌ಗಳನ್ನು ದುಬಾರಿ ಬೆಲೆಗೆ ಅಕ್ರಮ ಮಾರಾಟ ಮಾಡುತ್ತಿರುವುದರ ಕುರಿತು ದೂರುಗಳು ಬಂದಿದ್ದು ಗಮನ ಹರಿಸಲಾಗುವುದು’ ಎಂದರು.

ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ
ಜಿಲ್ಲೆಯ ಗಡಿಗಳನ್ನು ಹಂಚಿಕೊಂಡಿರುವ ಅನಂತಪುರ ಮತ್ತು ಕರ್ನೂಲಿನಲ್ಲಿ ಸೋಂಕಿತರು ಹೆಚ್ಚಿರುವುದರಿಂದ, ಅಲ್ಲಿಂದ ಜನರು ಜಿಲ್ಲೆಯೊಳಕ್ಕೆ ಬಾರದಿರುವಂತೆ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಎಸ್ಪಿ ತಿಳಿಸಿದರು.

‘ಸಿರುಗುಪ್ಪ ಗಡಿ ಪ್ರದೇಶದಲ್ಲಿ ಹೆಚ್ಚುವರಿ‌ ಎಸ್ಪಿ‌ ನೇತೃತ್ವದಲ್ಲಿ ಕಣ್ಗಾವಲು ಹಾಕಲಾಗಿದೆ. ಅಂತರ‌ಜಿಲ್ಲೆ ಸಂಚಾರಕ್ಕೆ ಪೂರ್ಣ ತಡೆ ಒಡ್ಡಲಾಗಿದೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT