ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಶಾಲೆ, ಆಸ್ಪತ್ರೆಗೂ ಅಂಟಿದ ಕಸದ ಕಂಟಕ

ಗಂಭೀರವಾದ ತ್ಯಾಜ್ಯದ ಸಮಸ್ಯೆ, ಕಸದ ರಾಶಿಯ ಸ್ವಾಗತ
Last Updated 15 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಶನಿವಾರಸಂತೆ: ದಿನದಿಂದ ದಿನಕ್ಕೆ ಶನಿವಾರಸಂತೆಯು ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾದರೂ ವಿಲೇವಾರಿಯಾಗದ ತ್ಯಾಜ್ಯದ ರಾಶಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣಕ್ಕೆ ಬರುವವರನ್ನು ಪ್ರವೇಶ ದ್ವಾರದ ಬಳಿ ದುರ್ವಾಸನೆಯೊಂದಿಗೆ ತ್ಯಾಜ್ಯರಾಶಿ ಸ್ವಾಗತಿಸುತ್ತದೆ.

ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಯಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ನಡೆಯದಿರುವುದು ಸಾರ್ವಜನಿಕ ಸಮಸ್ಯೆಯಾಗಿ ಕಾಡುತ್ತಿದೆ. ಜನರು ಬೇಸತ್ತಿದ್ದಾರೆ.

ಹತ್ತಾರು ಗ್ರಾಮ ವ್ಯಾಪ್ತಿಗಳಿಗೆ ಹೋಬಳಿ ಕೇಂದ್ರವಾಗಿರುವ ಶನಿವಾರಸಂತೆಗೆ ಪ್ರವೇಶಿಸುತ್ತಿದ್ದಂತೆ ಸುಸ್ವಾಗತ ಎಂಬ ಬೃಹತ್ ನಾಮಫಲಕ ಸ್ವಾಗತಿಸುತ್ತದೆ. ದಾಟಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ದುರ್ವಾಸನೆಯೊಂದಿಗೆ ರಸ್ತೆ ಬಲಬದಿಯಲ್ಲಿ ತ್ಯಾಜ್ಯ ರಾಶಿ ಕಣ್ಣಿಗೆ ರಾಚುತ್ತದೆ.

ಪಕ್ಕದಲ್ಲೇ ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳಿವೆ. ಇದರ ಪಕ್ಕದಲ್ಲೇ ಸುರಿಯುವ ತ್ಯಾಜ್ಯ ರಾಶಿಯಿಂದ, ದುರ್ವಾಸನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ತ್ಯಾಜ್ಯ ರಾಶಿಯ ದುರ್ವಾಸನೆಯೊಂದಿಗೆ ಬೀದಿನಾಯಿಗಳ ಕಾಟವನ್ನೂ ಸಹ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಅಲ್ಲಿ ತಂದು ಸುರಿಯಲಾಗುವ ಹೋಟೆಲ್‌, ಕಲ್ಯಾಣ ಮಂಟಪ, ಕೋಳಿ ಮಾಂಸದಂಗಡಿಯ ಉಳಿಕೆ ಮಾಂಸ ತ್ಯಾಜ್ಯದ ಆಸೆಗಾಗಿ ಹಲವಾರು ನಾಯಿಗಳು ಆ ಸ್ಥಳವನ್ನೇ ತಮ್ಮ ವಾಸ ಸ್ಥಾನವಾಗಿಸಿಕೊಂಡಿವೆ.

ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು, ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ದುರ್ನಾತ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಗಾಳಿ ಬೀಸಿದಾಗಲೆಲ್ಲ ತ್ಯಾಜ್ಯ ರಾಶಿಯಿಂದ ಕಾಗದ, ಪ್ಲಾಸ್ಟಿಕ್ ಹಾರಿ ರಸ್ತೆಗೆ ಬೀಳುತ್ತವೆ. ನಾಯಿಗಳು ಮಾಂಸ ಇತ್ಯಾದಿ ಕಸವನ್ನು ಬೀದಿಗೆಳೆದು ತರುತ್ತವೆ. ಆಗಾಗ್ಗೆ ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ವಾಯು ಮಾಲಿನ್ಯದೊಂದಿಗೆ ಹೆಚ್ಚಾದ ಕಸವನ್ನು ಪಕ್ಕದಲ್ಲಿ ಸೇತುವೆ ಕೆಳಗೆ ಹರಿಯುತ್ತಿರುವ ಹೊಳೆಗೆ ದೂಡಿ ನೀರನ್ನು ಮಾಲಿನ್ಯಗೊಳಿಸಲಾಗುತ್ತಿದೆ.

ಪಟ್ಟಣದ ಕಾವೇರಿ ರಸ್ತೆಯ ಮಕ್ಕಳಕಟ್ಟೆ ಕೆರೆ (ಗಂಗಪ್ಪ ಮಾಸ್ಟರ್ ಕೆರೆ) ಬದಿಯಲ್ಲೂ ತ್ಯಾಜ್ಯ ರಾಶಿ ಇದ್ದು; ಅಲ್ಲಿಯೂ ಹೊಟೇಲ್, ಕಲ್ಯಾಣ ಮಂಟಪ, ಕೋಳಿ ಮಾಂಸದಂಗಡಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪಂಚಾಯಿತಿಯ ಎಚ್ಚರಿಕೆಗೂ ಮಣಿಯದೇ ನಿತ್ಯ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಅಂಗಡಿಯವರು ನೋಟಿಸ್‌ಗೂ ಜಗ್ಗುತ್ತಿಲ್ಲ ಎಂಬ ಆರೋಪವಿದೆ.

ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ, ಗ್ರಾಮಸಭೆಗಳಲ್ಲಿ ತ್ಯಾಜ್ಯ ವಿಲೇವಾರಿ ಜಾಗದ ಬಗ್ಗೆ ಸಾಕಷ್ಟು ಚರ್ಚೆಗಳಾದವು. ವಾದವಿವಾದಗಳು ನಡೆದವು. ಕೆಲವು ಸಂಘ-ಸಂಸ್ಥೆಗಳಿಂದ ಧರಣಿ, ಪ್ರತಿಭಟನೆಗಳು ನಡೆದವು. ಸ್ಥಳಾಂತರಕ್ಕೆ ನಾಗರಿಕರು ಆಗ್ರಹಿಸಿದರು. ವಿಲೇವಾರಿಗೆ ಜಾಗ ಗುರುತಿಸಲಾಗಿದೆ ಎಂಬ ಪೊಳ್ಳು ಆಶ್ವಾಸನೆ ಮಾತುಗಳು ಜನಪ್ರತಿನಿಧಿಗಳ ಬಾಯಿಂದ ಕೇಳಿ ಬರುತ್ತಿದ್ದಂತೆಯೇ ಆ ಮಾತು ಕೃತಿಯ ರೂಪ ತಾಳುತ್ತಿಲ್ಲ ಎಂಬ ವ್ಯಂಗ್ಯದ ನುಡಿಗಳೂ ನಾಗರಿಕ ವಲಯದಲ್ಲಿ ಕೇಳಿ ಬಂದವು. ಆದರೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗವೇ ಇಲ್ಲವೆಂದಾದಾಗ ತ್ಯಾಜ್ಯ ವಿಲೇವಾರಿ ಸ್ಥಳಕ್ಕಾಗಿ ಪಂಚಾಯಿತಿ ಆಡಳಿತ ಮಂಡಳಿ ಮೇಲಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಪ್ರಸ್ತಾಪ ಸಲ್ಲಿಸಿತು.

ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿ, ನೆರೆಯ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸರ್ವೆ ನಂ.:42ರಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ 2 ಎಕರೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿಗೆ 50 ಸೆಂಟ್ ಸ್ಥಳ ಗುರುತಿಸಿಕೊಟ್ಟರು. ಶನಿವಾರಸಂತೆ ಪಂಚಾಯಿತಿಯ ತ್ಯಾಜ್ಯವನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದಾಗ ದುಂಡಳ್ಳಿ ಗ್ರಾಮಸ್ಥರು ವಿರೋಧಿಸಿದರು. ಪ್ರತಿಭಟಿಸಿದರು. ಎರಡೂ ಪಂಚಾಯಿತಿಗಳೂ ಸಭೆ ನಡೆಸಿದವು. ಶಾಸಕ ಅಪ್ಪಚ್ಚುರಂಜನ್ ಅವರ ತೀರ್ಮಾನದಂತೆ ವೈಜ್ಞಾನಿಕ ರೀತಿ ವಿಲೇವಾರಿ ಘಟಕ ಸ್ಥಾಪನೆ ಬಗ್ಗೆ ನಿರ್ಣಯವಾದರೂ ಈವರೆಗೂ ಸ್ಥಾಪನೆಯಾಗದೆ ನನೆಗುದಿಗೆ ಬಿದ್ದಿದೆ.

ದುಂಡಳ್ಳಿ ಪಂಚಾಯಿತಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು ಅರಣ್ಯ ಕಟ್ಟಿಂಗ್ ಕೆಲಸಕ್ಕೆ ಆದೇಶವೂ ದೊರೆತು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಶೀಘ್ರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಪಂಚಾಯಿತಿ ಕಾರ್ಯದರ್ಶಿ ವೇಣುಗೋಪಾಲ್ ತಿಳಿಸಿದರು.

ಶನಿವಾರಸಂತೆಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ದುಂಡಳ್ಳಿ ಪಂಚಾಯಿತಿಯ ವಿರೋಧ ಇಲ್ಲವಾಗಿದೆ. ₹ 10 ಲಕ್ಷ ಮಂಜೂರಾಗಿದ್ದು ಅರಣ್ಯ ಕಟ್ಟಿಂಗ್ ಕೆಲಸಕ್ಕೆ ಆದೇಶವೂ ದೊರೆತಿದೆ. ಆದರೆ, ದುಂಡಳ್ಳಿ ಪಂಚಾಯಿತಿಯ ಘಟಕ ನಿರ್ಮಾಣದ ನಂತರವಷ್ಟೇ ಶನಿವಾರಸಂತೆ ಪಂಚಾಯಿತಿ ಘಟಕ ನಿರ್ಮಾಣ ಕಾಮಗಾರಿ ಆರಂಭವಾಗಬೇಕಿದೆ ಎನ್ನುತ್ತಾರೆ ಅಧ್ಯಕ್ಷ ಮಹಮ್ಮದ್ ಗೌಸ್.

ಪ್ರತಿದಿನ ಬೆಳಿಗ್ಗೆ ಪಂಚಾಯಿತಿ ಪೌರ ಕಾರ್ಮಿಕರು ಟ್ರ್ಯಾಕ್ಟರ್‌ನಲ್ಲಿ ಊರಿನ ತ್ಯಾಜ್ಯವನ್ನೆಲ್ಲ ಸಂಗ್ರಹಿಸಿ ತಂದು ಸ್ವಾಗತ ಫಲಕದ ಬಳಿ ಆರೋಗ್ಯ ಕೇಂದ್ರಕ್ಕೆ ತೆರಳುವ ರಸ್ತೆ ಬದಿಯಲ್ಲೆ ಸುರಿಯುವ ಕಾಯಕವನ್ನು ಮಾಡುತ್ತಿದ್ದಾರೆ.

‘ಸ್ವಚ್ಛ ಭಾರತ್ ಯೋಜನೆಯಡಿ ರಾಜ್ಯದಲ್ಲೇ ಕೊಡಗು ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿರುವಾಗ ಶನಿವಾರಸಂತೆ ಪಂಚಾಯಿತಿ ಈ ಊರಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ತ್ಯಾಜ್ಯ ವಿಲೇವಾರಿ ಸ್ಥಳಾಂತರಕ್ಕೆ ಶೀಘ್ರ ಕ್ರಮ ಕೈಗೊಳ್ಳಲಿ.ಜನತೆಯ ಆರೋಗ್ಯ ಕಾಪಾಡಲಿ’ ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT