ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಾಹಿತ್ಯ ಸಮ್ಮೇಳನ: ಶಂಕರ್ ಎಂಬ ಕನ್ನಡಾಭಿಮಾನಿ...

Last Updated 3 ಜನವರಿ 2019, 16:21 IST
ಅಕ್ಷರ ಗಾತ್ರ

ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಸಮ್ಮೇಳನ ನಡೆಯುವ ಕೃಷಿ ವಿಶ್ವವಿದ್ಯಾಲಯ ಆವರಣದ ತುಂಬೆಲ್ಲಾ ಕನ್ನಡದ್ದೇ ಘಮಲು.

ಇವೆಲ್ಲದರ ನಡುವೆ ಅಪ್ಪಟ ಕನ್ನಡಾಭಿಮಾನಿಯೊಬ್ಬರು ಸದ್ದಿಲ್ಲದೇ ಕನ್ನಡದ ಕೈಂಕರ್ಯದಲ್ಲಿ ತೊಡಗಿದ್ದರು. ಅವರು ಶಂಕರ್. ಬೆಂಗಳೂರಿನ ಸುಮನಹಳ್ಳಿಯಲ್ಲಿರುವ ಭಿಕ್ಷಕರ ಕಾಲೊನಿ ನಿವಾಸಿಯಾಗಿರುವ ಶಂಕರ್, ತಮ್ಮ ಕುಟುಂಬದ ಸದಸ್ಯರ ಜತೆಗೆ ಸಮ್ಮೇಳನಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಸಾಗುವ ಮಾರ್ಗದ ಬದಿಯೊಂದರಲ್ಲಿ ಕನ್ನಡದ ಬಾವುಟ, ಬ್ಯಾಡ್ಜ್‌, ಶಾಲುಗಳನ್ನು ಮಾರಾಟ ಮಾಡುತ್ತಿರುವ ಶಂಕರ್, 18 ವರ್ಷಗಳಿಂದ ಒಂದೂ ಕನ್ನಡ ಸಾಹಿತ್ಯ ಸಮ್ಮೇಳನ ತಪ್ಪಿಸಿಲ್ಲವಂತೆ!

ಕನ್ನಡಾಭಿಮಾನದ ಜತೆಗೆ ಹೊಟ್ಟೆಪಾಡಿಗಾಗಿಯೂ ಶಂಕರ್ ನಾಡಧ್ವಜ, ಟೋಪಿ, ಶಾಲು, ಬ್ಯಾಡ್ಜ್, ರಿಸ್ಟ್ ಬ್ಯಾಂಡ್, ಕೊರಳಪಟ್ಟಿಗಳನ್ನು ಮಾರಾಟ ಮಾಡುತ್ತಾರೆ. ಹೋಲ್‌ಸೇಲ್ ದರದಲ್ಲಿ ಬಟ್ಟೆಗಳನ್ನು ತಂದು ಕುಟುಂಬದ ಸದಸ್ಯರು ಈ ಸಾಮಾಗ್ರಿಗಳನ್ನು ರೂಪಿಸುತ್ತಾರೆ. ರಸ್ತೆಬದಿಯಲ್ಲಿ ಜೀವನ ಸಾಗಿಸುತ್ತಿದ್ದ ಶಂಕರ್ ಅವರನ್ನು ಸುಮನಹಳ್ಳಿಯ ಫಾದರ್ ಜಾರ್ಜ್ ಗಮನಿಸಿ, ಭಿಕ್ಷಕರ ಕಾಲೊನಿಯಲ್ಲಿ ಮನೆ ಒದಗಿಸಿಕೊಟ್ಟಿದ್ದಾರೆ.ಕನ್ನಡದ ಕಾರ್ಯಕ್ರಮಗಳು ಎಲ್ಲೇ ಇರಲಿ ಶಂಕರ್ ತಮ್ಮ ಕನ್ನಡದ ಸಾಮಗ್ರಿಗಳೊಂದಿಗೆ ಅಲ್ಲಿ ಹಾಜರಿರುತ್ತಾರೆ.

ಕನ್ನಡ ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ನಲ್ಲಿ ರಿಪೇರಿ, ಎಲೆಕ್ಟ್ರಿಷಿಯನ್, ಟಾಯ್ಲೆಟ್ ಛೇಂಬರ್ ಸ್ವಚ್ಚಗೊಳಿಸುವ ಕೆಲಸವನ್ನು ಶಂಕರ್ ಮಾಡುತ್ತಾರೆ. ಯಾವುದೇ ಸುರಕ್ಷಿತಾ ಕ್ರಮಗಳಿಲ್ಲದೇ ಹೊಟ್ಟೆಪಾಡಿಗಾಗಿ ಈ ಕೆಲಸಗಳನ್ನು ಮಾಡುವ ಶಂಕರ್‌ಗೆ ₹ 700ರಿಂದ ₹ 1ಸಾವಿರದ ತನಕ ಹಣ ದೊರೆಯುತ್ತದೆ.

‘ಸಮ್ಮೇಳನದ ವಿಷಯ ತಿಳಿದು ಗುರುವಾರವೇ ಇಲ್ಲಿಗೆ ಕುಟುಂಬ ಸಮೇತ ಬಂದಿದ್ದೇನೆ. ಪತ್ನಿ ಗೀತಾ, 8ನೇ ತರಗತಿ ಓದುತ್ತಿರುವ ಮಗಳು ರೇಣುಕಾ ಮತ್ತು ತಮ್ಮಂದಿರು ನನ್ನ ಕೆಲಸದಲ್ಲಿ ಸಹಕರಿಸುತ್ತಾರೆ. ನನಗೆ ಕನ್ನಡದ ಬಗ್ಗೆ ಅಭಿಮಾನ. ನಾನೇನೂ ದೊಡ್ಡ ಸಾಹಿತಿ ಅಲ್ಲ. ಆದರೆ, ಈ ರೀತಿಯಲ್ಲಾದರೂ ಕನ್ನಡದ ಸೇವೆ ಮಾಡಬೇಕೆಂದು ಧ್ವಜ, ಟೋಪಿ, ಕೊರಳಪಟ್ಟಿ ಇತ್ಯಾದಿ ಮಾರುತ್ತೇನೆ. ಎಷ್ಟೋ ಬಾರಿ ಕೆಲವರು ನಾವು ಹೇಳಿದ ರೇಟಿಗೆ ಖರೀದಿಸುತ್ತಾರೆ. ಇನ್ನು ಕೆಲವರು ಚೌಕಾಸಿ ಮಾಡುತ್ತಾರೆ. ಆದರೆ, ನಾನು ಅವರೊಂದಿಗೆ ಚೌಕಾಸಿ ಮಾಡುವುದಿಲ್ಲ. ಕೆಲವರು ತಮ್ಮ ಬಳಿ ಹಣವಿಲ್ಲ. ಆದರೆ, ನಾಡ ಧ್ವಜ ಬೇಕು ಅನ್ನುತ್ತಾರೆ. ಅಂಥವರಿಗೆ ಉಚಿತವಾಗಿ ಧ್ವಜ ಕೊಟ್ಟಿದ್ದೇನೆ. ದೊಡ್ಡ ಸಾಹಿತಿಗಳು ನನ್ನ ಕೆಲಸ ಮೆಚ್ಚಿ ತಮ್ಮ ಫೋನ್ ನಂಬರ್ ಕೊಟ್ಟು ಸಹಾಯ ಮಾಡ್ತೀನಿ ಅಂತಾರೆ. ಆದರೆ, ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದಿಲ್ಲ. ನನಗೆ ಯಾರಿಂದಲೂ ನಿರೀಕ್ಷೆ ಇಲ್ಲ’ ಎನ್ನುತ್ತಾರೆ ಶಂಕರ್.

‘ಮಳಿಗೆಗಾಗಿ ಮೊದಲೇ ಬುಕ್ ಮಾಡಬೇಕೆಂತೆ. ನನಗದು ಗೊತ್ತಿರಲಿಲ್ಲ. ಜನರಿಗೆ ಕಾಣವಂತೆ ಮೂಲೆಯೊಂದರಲ್ಲಿ ಕನ್ನಡದ ಸಾಮಾಗ್ರಿ ಇಟ್ಟಿದ್ದೇನೆ. ಈ ಬಾರಿ ₹ 40 ಸಾವಿರ ಬಂಡವಾಳ ಹಾಕಿದ್ದೇನೆ. ₹ 20 ಸಾವಿರವಾದರೂ ಲಾಭವಾಗಲಿ ನಿರೀಕ್ಷೆ ನನ್ನದು’ ಎನ್ನುವ ಶಂಕರ್ ಅವರಿಗೆಈ ಬಾರಿಯ ಸಮ್ಮೇಳನದ ಅಧ್ಯಕ್ಷರು ಯಾರು ಹೇಳಿ ಅಂದರೆ, ‘ನಮ್ಮ ಚಂದ್ರಶೇಖರ ಕಂಬಾರ’ ಸರಿ ಅಲ್ವಾ ಮೇಡಂ ಅಂತ ನಕ್ಕರು.

ಶಂಕರ್ ಅವರಿಂದ ಕನ್ನಡ ಬಾವುಟ ಖರೀದಿಸಿದ ಶಿಕ್ಷಕಿಯರು
ಶಂಕರ್ ಅವರಿಂದ ಕನ್ನಡ ಬಾವುಟ ಖರೀದಿಸಿದ ಶಿಕ್ಷಕಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT