ಸೋಮವಾರ, ಅಕ್ಟೋಬರ್ 21, 2019
21 °C

ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್‌ ಬಚ್ಚೇಗೌಡ

Published:
Updated:

ಹೊಸಕೋಟೆ: ‘ಹೊಸಕೋಟೆಯ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಮುಂದಿನ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿರುವುದರಿಂದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲು ನನಗೆ ಸಾಧ್ಯವಿಲ್ಲ. ಆದ್ದರಿಂದ ಆ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸವಿಟ್ಟು ನನಗೆ  ಕೊಟ್ಟಿರುವುದಕ್ಕೆ ಅವರಿಗೆ ಆಭಾರಿಯಾಗಿದ್ದೇನೆ. ಈ ಕುರಿತು ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಗೃಹಮಂಡಳಿ ಅಧ್ಯಕ್ಷರಾಗಿ ಈ ಹಿಂದೆ ಬಹಳ ಅನುಭವಿಗಳು ಕೆಲಸ ಮಾಡಿದ್ದಾರೆ. ನನಗೆ ಈ ಹುದ್ದೆ ಕೊಟ್ಟಿರುವುದು ಸಂತೋಷದ ವಿಚಾರ’ ಎಂದರು.

‘ನಾನು ಯಾವುದೇ ಸ್ವಾಭಿಮಾನಿ ದಳ ರಚನೆ ಮಾಡಿಲ್ಲ. ತಾಲ್ಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರ ಸಭೆಗಳನ್ನು ಮಾಡಿ ಅವರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದೇನೆ’ ಎಂದರು.

‘ಉಪ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಕಾಯುತ್ತಿದ್ದೇನೆ. ತಾಲ್ಲೂಕಿನ ಜನರು ನನ್ನ ಸ್ಪರ್ಧೆಗೆ ಒಲವು ತೋರಿಸಿದ್ದಾರೆ’ ಎಂದು ಹೇಳಿದರು. ‘ಸ್ಪರ್ಧೆ ಕುರಿತು ವರಿಷ್ಠರು ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಇನ್ನೂ ಯಾವುದೇ ಪಕ್ಷಕ್ಕೆ ಸೇರಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಅವರಿಗೆ ಬಿಜೆಪಿ ಟಿಕೆಟ್ ಕೊಡುವ ಕುರಿತು ನಿರ್ಧಾರ ಆಗಲಿದೆ. ಆನಂತರ ನನ್ನ ತೀರ್ಮಾನ  ಪ್ರಕಟಿಸುತ್ತೇನೆ’ ಎಂದರು.

ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ 2018ರಲ್ಲಿ ಸ್ಪರ್ಧೆ ಮಾಡಿದ್ದ ಶರತ್‌ ಬಚ್ಚೇಗೌಡರು ಮಾಜಿ ಸಚಿವ ಎಂಟಿಬಿ ನಾಗರಾಜು ಅವರ ವಿರುದ್ಧ ಸ್ವಲ್ಪದರಲ್ಲೇ ಸೋಲುಂಡಿದ್ದರು. ನಂತರದಲ್ಲಿ ಕ್ಷೇತ್ರಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇದೇ ಕ್ಷೇತ್ರದ ನಾಗರಾಜು ಆಪರೇಷನ್‌ ಕಮಲಕ್ಕೆ ಒಳಗಾಗಿದ್ದು, ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಶರತ್‌ಗೆ ಟಿಕೆಟ್‌ ಅನುಮಾನ ಎನ್ನಲಾಗಿದ್ದು, ಅವರನ್ನು ಸಮಾಧಾನಪಡಿಸಲು ಸರ್ಕಾರ ಇಂದು ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಿತ್ತು. ‌

Post Comments (+)