ಮಂಗಳವಾರ, ಫೆಬ್ರವರಿ 18, 2020
16 °C
ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ತೊರೆಯಲು ಸಮ್ಮತಿಸಿದ ಶರಾವತಿ ಮುಳುಗಡೆ ಸಂತ್ರಸ್ತರು l 540 ಎಕರೆಗೆ ಪ್ರಸ್ತಾವ

6 ದಶಕಗಳ ಕತ್ತಲೆ ಬದುಕಿಗೆ ವಿದಾಯ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಭಯಾರಣ್ಯ ವ್ಯಾಪ್ತಿಯ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಗ್ರಾಮಗಳನ್ನು ತೊರೆಯಲು ಶರಾವತಿ ಮುಳುಗಡೆ ಸಂತ್ರಸ್ತರು ಮೂರೂವರೆ ದಶಕಗಳ ನಂತರ ಸಮ್ಮತಿಸಿದ್ದಾರೆ.

ಸ್ಥಳಾಂತರಕ್ಕೆ ಜಿಲ್ಲಾಡಳಿತವೂ ಸಹಮತ ವ್ಯಕ್ತಪಡಿಸಿದೆ. ಶಿವಮೊಗ್ಗ ತಾಲ್ಲೂಕಿನ ಗೋವಿಂದಾಪುರದ ಸರ್ವೆ ನಂಬರ್ 9ರಲ್ಲಿನ 540 ಎಕರೆ ಜಮೀನನ್ನು ಈ ಗ್ರಾಮಗಳ ಜನರಿಗೆ ವಿತರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಒಂದಷ್ಟು ಕುಟುಂಬಗಳು ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಕಾನನದಲ್ಲಿ ನೆಲೆ ನಿಂತಿದ್ದವು.

ಈಗ ಅಲ್ಲಿ ನೆಲೆಸಿರುವ 119 ಕುಟುಂಬಗಳು 400 ಎಕರೆ ಭೂಮಿ ಸಾಗುವಳಿ ಮಾಡಿಕೊಂಡಿವೆ. 

ಶೆಟ್ಟಿಹಳ್ಳಿಯನ್ನು ಒಳಗೊಂಡ ಪಶ್ಚಿಮಘಟ್ಟದ ಈ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದು ಘೋಷಿಸಿತ್ತು. ಅಂದಿನಿಂದಲೂ ಮುಳುಗಡೆ ಸಂತ್ರಸ್ತರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಯತ್ನಿಸಿದ್ದರೂ ಜನರು ಮಣಿದಿರಲಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಗೌಳೇರು, ಮರಾಠಿಗರ ಐದಾರು ಕುಟುಂಬಗಳಿಗೆಂದು ಆಗ ಬ್ರಿಟಿಷರು ನಿರ್ಮಿಸಿಕೊಟ್ಟಿದ್ದ ಕಾಲು ದಾರಿಯೇ ಇಂದಿಗೂ ಶಿವಮೊಗ್ಗ ತಲುಪಲು ಇರುವ ಸಂಪರ್ಕ ರಸ್ತೆ. ನಿತ್ಯವೂ 18 ಕಿ.ಮೀ ಹಾದಿಯಲ್ಲಿ ಶಾಲಾ ಮಕ್ಕಳು, ವೃದ್ಧರು ಓಡಾಡುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜಲಾಶಯಕ್ಕೆ ನೆಲೆ ಬಿಟ್ಟುಕೊಟ್ಟು, ನಾಡಿಗೆ ಬೆಳಕು ನೀಡಲು ಕಾರಣರಾದ ಅವರ ಊರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ. ಸಣ್ಣಪುಟ್ಟ ಮೂಲ ಸೌಕರ್ಯಗಳಿಗೂ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತ ಬಂದಿದೆ. ಗ್ರಾಮದ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಗ್ರಾಮ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

‘ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ಹೆಂಚಿನ ಮನೆಗಳಿಗೆ ಧಕ್ಕೆಯಾಗಿತ್ತು. ಆರ್‌ಸಿಸಿ ಹಾಕಿದ ಮೂರು ಕುಟುಂಬಗಳ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳ ಕಿರುಕುಳ, ಮೂಲಸೌಕರ್ಯ ಕೊರತೆ, ಸಂಚಾರ  ಸಮಸ್ಯೆಗಳಿಂದ ಗ್ರಾಮ ತೊರೆಯುವ  ನಿರ್ಧಾರಕ್ಕೆ ಬರಬೇಕಾಯಿತು’ ಎನ್ನುತ್ತಾರೆ ಗ್ರಾಮಸ್ಥರು.

ಗುಡ್ಡ ಕುಸಿತ ತಂದ ಭೀತಿ

ನಾಲ್ಕು ತಿಂಗಳ ಹಿಂದೆ ಸುರಿದ ಮಳೆಗೆ ಶೆಟ್ಟಿಹಳ್ಳಿ ಅಭಯಾರಣ್ಯದ 50 ಎಕರೆ ವ್ಯಾಪ್ತಿಯಲ್ಲಿ ಐದಾರು ಕಡೆ ಸಣ್ಣ ಪ್ರಮಾಣದಲ್ಲಿ ಗುಡ್ಡಗಳು ಜರುಗಿದ್ದವು. ಮರಗಳು ನೆಲಕ್ಕುರುಳಿದ್ದವು. ಗ್ರಾಮದ ಆಸುಪಾಸಿನಲ್ಲೇ ನಡೆದ ಈ ಘಟನೆಯ ನಂತರ ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ಅಭದ್ರತೆ ಭೀತಿ ಕಾಡುತ್ತಿದೆ ಎನ್ನಲಾಗಿದೆ.

‘ಗುಡ್ಡ ಕುಸಿತ ಪ್ರಕರಣಗಳು ಹಿಂದೆಯೂ ಆಗಿವೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂಲ ಸೌಲಭ್ಯಗಳ ಕೊರತೆಯೇ ನಿರ್ಧಾರಕ್ಕೆ ಪ್ರಮುಖ ಕಾರಣ’ ಎನ್ನುತ್ತಾರೆ ಗ್ರಾಮದ ಹಿರಿಯ ಬೀರಾ ನಾಯ್ಕ.

***

ಗೋವಿಂದಾಪುರ ಬಳಿ ಜಮೀನು ಕೋರಿ ಶೆಟ್ಟಿಹಳ್ಳಿಯ ನೂರಕ್ಕೂ ಹೆಚ್ಚು ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.ವಾರದೊಳಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.

- ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

***

ಭಾರಿ ಮಳೆಗೆ ಹಲವೆಡೆ ಮಣ್ಣು ಕೊರೆದಿವೆ. ಗ್ರಾಮಸ್ಥರಿಗೆ ಕಿರುಕುಳ ನೀಡಿಲ್ಲ. ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಪಾಲಿಸಿದ್ದೇವೆ.

- ಐ.ಎಂ.ನಾಗರಾಜ್, ಡಿಸಿಎಫ್‌, ವನ್ಯಜೀವಿ ವಿಭಾಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು