ಅಂಧರ ಬಾಳಿಗೆ ಬೆಳಕಾದ ದಂಪತಿ

ಗುರುವಾರ , ಏಪ್ರಿಲ್ 25, 2019
33 °C
30 ಮಕ್ಕಳಿಗೆ ಶಾರದಾ, ಶಿವಬಸಪ್ಪರೇ ತಾಯಿ ತಂದೆ

ಅಂಧರ ಬಾಳಿಗೆ ಬೆಳಕಾದ ದಂಪತಿ

Published:
Updated:

ಶಿವಮೊಗ್ಗ: ಅಂಧರಿಗಾಗಿಯೇ ಈ ದಂಪತಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಅವರನ್ನೇ ತಮ್ಮ ಮಕ್ಕಳೆಂದು ಭಾವಿಸಿ ಪೋಷಿಸುತ್ತಿದ್ದಾರೆ.

ಅಂಧರ ಬಗ್ಗೆ ವಿಶೇಷ ಕಾಳಜಿ ಹೊತ್ತಿರುವ ಶಾರದಾ ಹಾಗೂ ಭದ್ರಾವತಿ ಕೃಷ್ಣ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಶಿವಬಸಪ್ಪ ಅವರೇ ಅಂಧರ ಬಾಳಿಗೆ ಬೆಳಕು ನೀಡುತ್ತಿರುವ ದಂಪತಿ. ಶಿವಮೊಗ್ಗದ ಶಾರದಾ ಅವರು ಈ ಹಿಂದೆ ಬೆಂಗಳೂರಿನ ರಾಷ್ಟ್ರೀಯ ಅಂಧರ ಸಂಸ್ಥೆ, ಶಿವಮೊಗ್ಗ ಜಿಲ್ಲಾ ಕಾರಾಗೃಹ, ಶಿವಮೊಗ್ಗ ತರಂಗ ಮೂಗರ ಮತ್ತು ಕಿವುಡರ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗದಾದ್ಯಂತ 350 ಹಳ್ಳಿಗಳಲ್ಲಿ ಸಂಚರಿಸಿ ಅಂಧರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಅಂಧರ ಬಗ್ಗೆ ವಿಶೇಷ ಕಾಳಜಿ ಮೊಳೆಯಿತು. ತಾವೇ ಏಕೆ ಒಂದು ಟ್ರಸ್ಟ್‌ ತೆರೆದು ಅಂಧರ ಸೇವೆಗೆ ನಿಲ್ಲಬಾರದು ಎಂದು ಯೋಚಿಸಿದರು. ಇವರ ಯೋಚನೆಗೆ ಪತಿ ಶಿವಬಸಪ್ಪ ನೀರೆರೆದು ಪೋಷಿಸಿದರು.

ಅಂದುಕೊಂಡಂತೆ 1998ರಲ್ಲಿ ಭದ್ರಾವತಿಯ ನ್ಯೂಟೌನ್‌ನಲ್ಲಿ ಸಿದ್ಧಾರ್ಥ ಅಂಧರ ಕೇಂದ್ರ ತೆರೆದರು. ಅಂದಿನಿಂದ ಈವರೆಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಸರ್ಕಾರದ ಅನುದಾನವಿಲ್ಲದೆ ಎಸ್‌ಎಸ್‌ಎಲ್‌ಸಿ ನಂತರ ಅಂಧ ಮಕ್ಕಳಿಗೆ ಉಚಿತ ಊಟ, ಉಪಾಹಾರ, ಸಮವಸ್ತ್ರ ವಸತಿ, ವಿದ್ಯಾಭ್ಯಾಸದ ಜತೆಗೆ ವಿವಿಧ ಕರಕುಶಲ, ಸಂಗೀತ ತರಬೇತಿ ನೀಡುತ್ತಿದ್ದಾರೆ. ಬೀದರ್, ಕಲಬುರ್ಗಿ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರು, ಮೈಸೂರು ಸೇರಿ ನಾನಾ ಭಾಗಗಳ 30ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇವರೆಲ್ಲರನ್ನು ಸ್ವಂತ ಮಕ್ಕಳಂತೆ ಕಾಣುವ ಶಿವಬಸಪ್ಪ ದಂಪತಿ ಸದಾ ಅವರ ಏಳಿಗೆಗಾಗಿ ದುಡಿಯುತ್ತಿದ್ದಾರೆ. ತಿಂಗಳಿಗೆ ₹ 20 ಸಾವಿರದಿಂದ ₹25 ಸಾವಿರದವರೆಗೆ ಖರ್ಚು ಬಂದರೂ ಕೇಂದ್ರದ ಟ್ರಸ್ಟಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ದಂಪತಿ ಸೇವೆ ಮುಂದುವರಿಸಿದ್ದಾರೆ.

ಇಲ್ಲಿಗೆ ಬಂದ ಮೇಲೆ ಜೀವಿಸುವ ಆಸೆ ಮೊಳೆತಿದೆ. ಏನಾದರೂ ಸಾಧಿಸಬೇಕು ಎಂಬ ಛಲ ಬೆಳೆದಿದೆ. ಹೆತ್ತವರ ಪ್ರೀತಿ, ಪ್ರೋತ್ಸಾಹ ಇಲ್ಲಿ ಸಿಗುತ್ತದೆ ಎಂದು ಅಭಿಮಾನದಿಂದ ನುಡಿಯುತ್ತಾರೆ ಕೇಂದ್ರದ ಸದಸ್ಯರು. ‘ಅಂಧ ಮಕ್ಕಳು ಸ್ವಾವಲಂಬಿಗಳಾಗಿ ಜೀವಿಸುವುದನ್ನು ಕಂಡಾಗ ಆತ್ಮತೃಪ್ತಿ ಸಿಗುತ್ತದೆ’ ಎನ್ನುತ್ತಾರೆ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಮತ್ತು ಆಡಳಿತಾಧಿಕಾರಿ ಶಾರದಾ.

Tags: 

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !