ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಒಬ್ಬರಿಗೂ ಸಿಗಲಿಲ್ಲ ಕೇಂದ್ರ ಸಚಿವ ಸ್ಥಾನ!

4 ಬಾರಿ ಸಂಸದರಾಗಿದ್ದ ಬಂಗಾರಪ್ಪಗೂ ಒಲಿಯದ ಅದೃಷ್ಟ
Last Updated 26 ಮಾರ್ಚ್ 2019, 20:41 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ನಾಲ್ವರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಆರೂವರೆ ದಶಕಗಳ ರಾಜಕೀಯ ಇತಿಹಾಸದಲ್ಲಿ ಕ್ಷೇತ್ರದ ಒಬ್ಬ ಸಂಸದರಿಗೂ ಕೇಂದ್ರ ಸಚಿವ ಸ್ಥಾನದ ಯೋಗ ಒಲಿದಿಲ್ಲ!

67 ವರ್ಷಗಳ ಶಿವಮೊಗ್ಗ ಲೋಕಸಭಾ ಇತಿಹಾಸದಲ್ಲಿ 16 ಸಾರ್ವತ್ರಿಕ ಚುನಾವಣೆ, 2 ಉಪ ಚುನಾವಣೆಗಳು ನಡೆದಿವೆ. ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ನಾಲ್ವರಲ್ಲಿ ಮೂವರು ಸಂಸತ್ ಪ್ರವೇಶಿಸಿದ್ದಾರೆ.1952ರಿಂದ 2018ರವರೆಗೆ ನಡೆದ 18 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ, ತಲಾ ಒಂದು ಬಾರಿ ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಎಸ್‌ಪಿ ಅಭ್ಯರ್ಥಿಗಳು ಸಂಸದರಾಗಿದ್ದಾರೆ.

1952, 57ರಲ್ಲಿಕಾಂಗ್ರೆಸ್‌ ಅಭ್ಯರ್ಥಿ ಕೆ.ಜಿ. ಒಡೆಯರ್, 1962ರಲ್ಲಿ ಎಸ್‌.ವಿ. ಕೃಷ್ಣಮೂರ್ತಿ ಲೋಕಸಭೆ ಪ್ರವೇಶಿಸಿದ್ದರು. 1971ರಿಂದ 1996ವರೆಗೂ ಕಾಂಗ್ರೆಸ್ ಬೇರುಗಳು ಗಟ್ಟಿಗೊಂಡಿದ್ದವು. ಈ ಅವಧಿಯಲ್ಲಿ ಮೂರು ಬಾರಿ ಟಿ.ವಿ. ಚಂದ್ರಶೇಖರಪ್ಪ, ತಲಾ ಒಂದು ಬಾರಿ ಎ.ಆರ್. ಬದರಿ ನಾರಾಯಣ, ಎಸ್.ಟಿ. ಖಾದ್ರಿ, ಕೆ.ಜಿ. ಶಿವಪ್ಪ ಸಂಸದರಾಗಿ ಆಯ್ಕೆಯಾಗಿದ್ದರು.

ಆಗ ಕಾಂಗ್ರೆಸ್ ಪ್ರಾಬಲ್ಯ ಇದ್ದ ಕಾರಣ ಪಕ್ಷದ ಟಿಕೆಟ್‌ ಸಿಕ್ಕರೆ ಸಾಕು ಅವರು ಸಂಸದರಾಗುವುದು ಖಚಿತ ಎಂಬ ಪ್ರತೀತಿ ಇತ್ತು. ಹಾಗಾಗಿ, ಸಚಿವ ಸ್ಥಾನ ಅವರಿಗೆಲ್ಲ ಕನಸಿನ ಮಾತಾಗಿತ್ತು. 1967ರಲ್ಲಿ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಿದ್ದ ಸಮಾಜವಾದಿ ಜೆ.ಎಚ್. ಪಟೇಲ್‌ ಸಂಯುಕ್ತ ಜನತಾಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರೂ, ಆಗ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

ಬಂಗಾರಪ್ಪ ಅವರಿಗೆ ಒಲಿಯದ ಅದೃಷ್ಟ: 1996ರಿಂದ 2009ರವರೆಗೂ ಲೋಕಸಭಾ ಕ್ಷೇತ್ರದಲ್ಲಿ ಎಸ್‌. ಬಂಗಾರಪ್ಪ ಅವರದೇ ಆಧಿಪತ್ಯ. ಕಾಂಗ್ರೆಸ್‌ ಜತೆ ಮುನಿಸಿಕೊಂಡು ಕರ್ನಾಟಕ ಕಾಂಗ್ರೆಸ್‌ ಪಕ್ಷ ಕಟ್ಟಿದ್ದ ಬಂಗಾರಪ್ಪ ಅವರು 1996ರಲ್ಲಿ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆಗ ಕಾಂಗ್ರೆಸ್ ಬೆಂಬಲ ಪಡೆದು ದೇವೇಗೌಡರು ಪ್ರಧಾನಿಯಾದರು. ಅವರಿಗೆ ಬೆಂಬಲ ನೀಡಿದ್ದರೂ ಸಚಿವ ಸ್ಥಾನದ ಯೋಗ ದೊರೆಯಲಿಲ್ಲ. 1998ರಲ್ಲಿ ಆಯನೂರು ಮಂಜುನಾಥ್ ಗೆದ್ದು ಅವರದೇ ಪಕ್ಷ ಅಧಿಕಾರಕ್ಕೆ ಬಂದಿತ್ತು. ಒಂದೇ ವರ್ಷಕ್ಕೆ ಸರ್ಕಾರ ಪತನವಾಗಿ ಮತ್ತೆ ಚುನಾವಣೆ ನಡೆದಿತ್ತು.

1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಬಂಗಾರಪ್ಪ ಅವರು ಗೆಲುವು ಪಡೆದರು. ಅಂದು ಕೇಂದ್ರದಲ್ಲಿ ವಾಜಪೇಯಿ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರ ಹಿಡಿದಿತ್ತು. 2004ರಲ್ಲಿ ಬಿಜೆಪಿ ಸೇರಿ ಲೋಕಸಭೆ ಪ್ರವೇಶಿಸಿದರೂ ಅದೃಷ್ಟ ಒಲಿಯಲಿಲ್ಲ. ಕಾರಣ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿತ್ತು. ಇದರಿಂದ ಬೇಸರಗೊಂಡ ಅವರು ಬಿಜೆಪಿಗೆ ರಾಜೀನಾಮೆ ನೀಡಿ 2005ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೂ ಸಚಿವರಾಗುವ ಯೋಗಸಿಗಲಿಲ್ಲ.

2009ರ ಚುನಾವಣೆಯಲ್ಲಿ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆದ್ದರೂ ಕೇಂದ್ರದಲ್ಲಿ ಮತ್ತೆ ಯುಪಿಎ ಅಧಿಕಾರ ಗದ್ದುಗೆ ಹಿಡಿದಿತ್ತು. 2013ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸಂಸತ್‌ ಪ್ರವೇಶಿಸಿದ್ದರು. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ಮೊದಲ ಬಾರಿ ಜಿಲ್ಲೆಗೆ ಸಚಿವ ಸ್ಥಾನದ ಯೋಗ ಬಂತು ಎಂದೇ ಜನರು ಭಾವಿಸಿದ್ದರು. ಆ ನಂಬಿಕೆ ನಿಜವಾಗಲಿಲ್ಲ. ಜಿಲ್ಲೆಗೆ ಕೊನೆಗೂ ಕೇಂದ್ರ ಸಚಿವ ಸ್ಥಾನದ ಭಾಗ್ಯ ದೊರಕಲಿಲ್ಲ.

ಇಬ್ರಾಹಿಂಗೆ ಒಲಿದಿತ್ತು ಅದೃಷ್ಟ

ಭದ್ರಾವತಿಯ ಸಿ.ಎಂ. ಇಬ್ರಾಹಿಂ ಅವರಿಗೆ 1996ರಲ್ಲಿ ಅದೃಷ್ಟ ಒಲಿದಿತ್ತು. ಕೇಂದ್ರದಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾದಾಗ ರಾಜ್ಯಸಭಾ ಸದಸ್ಯರಾಗಿದ್ದ ಅವರಿಗೆನಾಗರಿಕ ವಿಮಾನಯಾನ ಸಚಿವ ಸ್ಥಾನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT