ಶಿರಾಡಿ ಸಂಚಾರ ಆರಂಭ ಹತ್ತು ದಿನ ವಿಳಂಬ?

7
ಜರ್ಮನಿಯಿಂದ ಆಮದಾಗಿರುವ ಯಂತ್ರದಲ್ಲಿ ತಾಂತ್ರಿಕ ದೋಷ

ಶಿರಾಡಿ ಸಂಚಾರ ಆರಂಭ ಹತ್ತು ದಿನ ವಿಳಂಬ?

Published:
Updated:
ಶಿರಾಡಿ ಘಾಟಿ ಮಾರ್ಗದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಬಳಸುತ್ತಿರುವ ಜರ್ಮನಿಯ ವಿರ್ಟ್‌ಜರ್‌ ಕಂಪನಿಯ ಸೆನ್ಸರ್ ಪೇವರ್ ಯಂತ್ರ.

ಮಂಗಳೂರು: ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಜರ್ಮನಿಯಿಂದ ಆಮದು ಮಾಡಿಕೊಂಡಿರುವ ಸೆನ್ಸರ್ ಪೇವರ್ ಯಂತ್ರದಲ್ಲಿನ ತಾಂತ್ರಿಕ ದೋಷ ಮತ್ತು ಬಿಡದೆ ಸುರಿಯುತ್ತಿರುವ ಮಳೆಯಿಂದ ಶಿರಾಡಿ ರಸ್ತೆ ಕಾಮಗಾರಿ ಅಂತ್ಯಗೊಳ್ಳುವುದು ತುಸು ವಿಳಂಬವಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ರಸ್ತೆ ಮುಕ್ತಗೊಳ್ಳುವುದು ಹತ್ತು ದಿನ ವಿಳಂಬವಾಗುವ ಸಾಧ್ಯತೆ ಇದೆ.

ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತದಿಂದ ಸಮಸ್ಯೆ ಉಂಟಾದ ಬಳಿಕ ಶಿರಾಡಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಜುಲೈ 5ಕ್ಕೆ ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಮುಂದಾಗಿತ್ತು. ಆದರೆ, ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನ ಬೇಕಿದೆ. ಜುಲೈ 15ರ ಸುಮಾರಿಗೆ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಪುನರಾರಂಭವಾಗಲಿದೆ.

ಶಿರಾಡಿ ಘಾಟಿಯಲ್ಲಿ ಎರಡನೇ ಹಂತದಲ್ಲಿ 12.38 ಕಿಲೋಮೀಟರ್‌ ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣದ ಕಾಮಗಾರಿಯ ಗುತ್ತಿಗೆ ಪಡೆದಿರುವ ಮಂಗಳೂರಿನ ಓಷನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಕಂಪನಿಯು ಜರ್ಮನಿಯ ವಿರ್ಟ್‌ಜರ್‌ ಕಂಪನಿಯಿಂದ ₹ 10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೆನ್ಸರ್ ಪೇವರ್‌ ಯಂತ್ರ ಆಮದು ಮಾಡಿಕೊಂಡಿದೆ. ಈ ಯಂತ್ರ ತಾಂತ್ರಿಕ ದೋಷದಿಂದ ಕಳೆದ ವಾರ ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

‘ಸೆನ್ಸರ್‌ ಪೇವರ್‌ ಯಂತ್ರಕ್ಕೆ ಚಾಲನೆ ಕೊಡಲು ಆಗುತ್ತಿರಲಿಲ್ಲ. ಆ ನಂತರ ತಾಂತ್ರಿಕ ದೋಷದಿಂದ ಪೇವರ್‌ನ ಭಾಗವೊಂದು ಸುಟ್ಟು ಹೋಗಿತ್ತು. ಸ್ಥಳೀಯ ತಾಂತ್ರಿಕ ಸಿಬ್ಬಂದಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಜರ್ಮನಿಯ ವಿರ್ಟ್‌ಜರ್‌ ಕಂಪನಿಯ ತಜ್ಞರು ಬಂದು ಯಂತ್ರ ದುರಸ್ತಿ ಮಾಡಿ ಹೋಗಿದ್ದಾರೆ. ಸೋಮವಾರದಿಂದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕೆಲಸ ಮತ್ತೆ ಆರಂಭವಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆಯೂ ಕಾರಣ: ‘ಮೇ ತಿಂಗಳಿನಿಂದಲೂ ಶಿರಾಡಿ ಘಾಟಿಯಲ್ಲಿ ಜೋರಾಗಿ ಮಳೆ ಬೀಳುತ್ತಿದೆ. ಇದರಿಂದಾಗಿ ನಮ್ಮ ನಿರೀಕ್ಷೆಯಂತೆ ಕೆಲಸ ಆಗುತ್ತಿಲ್ಲ. ಈಗ ಮತ್ತೆ ಮಳೆ ಬಿರುಸಾಗಿದೆ. ಹೆಚ್ಚು ಮಳೆ ಬೀಳುವಾಗ ಕಾಂಕ್ರೀಟ್‌ ರಸ್ತೆ ನಿರ್ಮಾಣ ಅಸಾಧ್ಯ. ಇದು ಕೂಡ ವಿಳಂಬಕ್ಕೆ ಕಾರಣ’ ಎಂದು ಓಷನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಕಂಪನಿಯ ನಿರ್ದೇಶಕ ಅಬಿದ್‌ ಅಲಿ ಪ್ರತಿಕ್ರಿಯಿಸಿದರು.

ಜನವರಿಯಲ್ಲಿ ತಮ್ಮ ಕಂಪನಿಗೆ ಈ ಕಾಮಗಾರಿಯ ಕಾರ್ಯಾದೇಶ ನೀಡಲಾಗಿತ್ತು. 2019ರ ಏಪ್ರಿಲ್‌ವರೆಗೂ ಅವಧಿ ಇದೆ. ಆದರೆ, ಸರ್ಕಾರದ ಮನವಿ ಮತ್ತು ಜನರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಆರು ತಿಂಗಳ ಅವಧಿಯಲ್ಲೇ ಈ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ನಾಲ್ಕರಿಂದ ಐದು ದಿನದಲ್ಲಿ ಕಾಂಕ್ರೀಟೀಕರಣ ಪೂರ್ಣಗೊಳ್ಳಲಿದೆ ಎಂದರು.

420 ಮೀಟರ್‌ ಬಾಕಿ: ಶಿರಾಡಿ ಘಾಟಿ ಮಾರ್ಗ 47 ಕಿ.ಮೀ. ಉದ್ದವಿದೆ. ಈ ಪೈಕಿ 26 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ಮತ್ತು 21 ಕಿ.ಮೀ. ಡಾಂಬರು ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಖಾತೆ ಸಚಿವಾಲಯ 2013ರಲ್ಲಿ ಅನುಮೋದನೆ ನೀಡಿತ್ತು. ಮೊದಲ ಹಂತದಲ್ಲಿ 13.62 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿತ್ತು. ಎರಡನೇ ಹಂತದಲ್ಲಿ 12.38 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 21 ಕಿ.ಮೀ. ಡಾಂಬರು ರಸ್ತೆ ನಿರ್ಮಾಣದ ಪ್ರಸ್ತಾವ ಕೈಬಿಟ್ಟು, ಈ ಭಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ.

ಎರಡನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 200 ಮೀಟರ್‌ ಹಾಗೂ 220 ಮೀಟರ್‌ನ ಎರಡು ಸೇತುವೆಗಳ ಮೇಲೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಬಾಕಿ ಇದೆ. ಅದರ ಜೊತೆಯಲ್ಲೇ ಸೆನ್ಸರ್‌ ಪೇವರ್‌ ಯಂತ್ರವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸಿ, ಜೋಡಿಸುವುದಕ್ಕೆ ಹೆಚ್ಚು ಸಮಯ ತಗಲುತ್ತದೆ. ಹೀಗಾಗಿ 420 ಮೀಟರ್‌ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯಲು ನಾಲ್ಕರಿಂದ ಐದು ದಿನ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ.

15 ದಿನಗಳ ಕ್ಯೂರಿಂಗ್‌

ಸಾಮಾನ್ಯವಾಗಿ ಕಾಂಕ್ರೀಟ್‌ ರಸ್ತೆ ನಿರ್ಮಾಣದ ಸಮಯದಲ್ಲಿ ಕ್ಯೂರಿಂಗ್‌ಗೆ 22 ದಿನಗಳಿಂದ ಒಂದು ತಿಂಗಳವೆರೆಗೆ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಚಾರ್ಮಾಡಿ ಘಾಟಿಯಲ್ಲಿನ ಸಮಸ್ಯೆಯ ಕಾರಣದಿಂದ ಶಿರಾಡಿ ರಸ್ತೆಯಲ್ಲಿ ವಾಹನ ಸಂಚಾರ ಆರಂಭಕ್ಕೆ ಒತ್ತಡ ಹೆಚ್ಚುತ್ತಿದೆ. ಈ ಕಾರಣದಿಂದ ಕಾಂಕ್ರೀಟ್‌ ರಸ್ತೆ ಕ್ಯೂರಿಂಗ್ ಅವಧಿಯನ್ನು 15 ದಿನಗಳಿಗೆ ತಗ್ಗಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

‘ಮಳೆಗಾಲದ ಅವಧಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಅತ್ಯಾಧುನಿಕ ಯಂತ್ರ ಬಳಸಿರುವುದರಿಂದ 15 ದಿನಗಳ ಕ್ಯೂರಿಂಗ್ ಸಾಕಾಗುತ್ತದೆ. 
ಜೂನ್‌ 30ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜುಲೈ 30ರವರೆಗೂ ಕ್ಯೂರಿಂಗ್‌ಗೆ ಬಿಡಬೇಕಿತ್ತು, ಆದರೆ, ಜುಲೈ 15ರ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !