ಗುರುವಾರ , ಫೆಬ್ರವರಿ 25, 2021
24 °C

ಶಿರಾಡಿ ಘಾಟ್: ಶೀಘ್ರ ಲಘು ವಾಹನ ಸಂಚಾರಕ್ಕೆ ಮುಕ್ತ -ಎಚ್.ಡಿ.ರೇವಣ್ಣ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಭೂ ಕುಸಿತದಿಂದ ಬಂದ್ ಆಗಿರುವ ಹಾಸನ, ಮಂಗಳೂರು ನಡುವಿನ ಶಿರಾಡಿಘಾಟ್ ಹಾಗೂ ಮಂಗಳೂರು-ಮಡಿಕೇರಿ ರಸ್ತೆಯಲ್ಲಿ ಹತ್ತು ದಿನದೊಳಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

‘ಸತತ ಮಳೆಯಿಂದ ಹಲವು ಕಡೆ ಭೂ ಕುಸಿತ, ಗುಡ್ಡ ಕುಸಿದು ರಸ್ತೆಗಳು ಹಾಳಾಗಿವೆ. ಮಳೆಯಿಂದ ದುರಸ್ತಿ ಕಾಮಗಾರಿಗೂ ಅಡ್ಡಿಯಾಗಿದೆ. ತ್ವರಿತಗತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಮಂಗಳೂರು, ಹಾಸನ ಜಿಲ್ಲಾಧಿಕಾರಿಗಳು, ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ಪ್ರಮಾಣೀಕರಿಸಿದರೆ ಮಾತ್ರ  ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ತರಕಾರಿ ಸಾಗಿಸುವ ಮಿನಿ ಟೆಂಪೊ, ಕಾರು, ದ್ವಿಚಕ್ರ ವಾಹನಗಳ ಜತೆ ಕೆಎಸ್‌ಆರ್‌ಟಿಸಿ ವೊಲ್ವೊ ಬಸ್‌ ಸಂಚಾರಕ್ಕೂ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಭಾರೀ ವಾಹನ ಓಡಾಟ ಕನಿಷ್ಟ ಆರು ತಿಂಗಳು ಸಾಧ್ಯವಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಿಂದ ಭೂಮಿ ಪಡೆದ ಕೆಲ ಪ್ರಭಾವಿಗಳು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದಲ್ಲದೇ ಐಐಟಿಗೆ ಮೀಸಲಾಗಿದ್ದ ಜಾಗವನ್ನೂ ಕಬಳಿಸಲು ಹುನ್ನಾರ ನಡೆಸಿದ್ದಾರೆ. ರಾಜ್ಯದ ಇತರೆ ಕಡೆಯೂ ಕೆಐಎಡಿಬಿ ಜಾಗ ಖರೀದಿ ಮಾಡಿ ಮತ್ತೊಬ್ಬರಿಗೆ ಬಾಡಿಗೆ ಕೊಡುವ ದಂದೆ ನಡೆದಿದೆ. ಭೂ ಸ್ವಾಧ್ವೀನ ವಿಷಯದಲ್ಲಿ ಹಗಲು ದರೋಡೆ ನಡೆಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಸಂತ್ರಸ್ತರಿಗೆ ಮನೆ ಬಾಡಿಗೆ ಹಣ ನೀಡಲು ಚಿಂತನೆ: ಖಾದರ್‌

ಬೆಂಗಳೂರು: ಕೊಡಗು ಸಂತ್ರಸ್ತರು ಬಾಡಿಗೆ ಮನೆ ಅಥವಾ ಬಂಧುಗಳ ಮನೆಯಲ್ಲಿರುವುದಾದರೆ ಅವರಿಗೆ ಒಂದು ವರ್ಷದ ಮಟ್ಟಿಗೆ ಬಾಡಿಗೆ ಹಣ ಪಾವತಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ಯು.ಟಿ.ಖಾದರ್‌ ಹೇಳಿದರು. 

ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಟ್ಟರೆ ಮೂಲಸೌಕರ್ಯ ಒದಗಿಸುವುದು, ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಇದೂ ಕೂಡಾ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರ ಬದಲು ಶಾಶ್ವತ ಪುನರ್ವಸತಿ ಆಗುವವರೆಗೆ (ಒಂದು ವರ್ಷ) ಮನೆ ಬಾಡಿಗೆ ಪಾವತಿಸುವ ಪ್ರಸ್ತಾವ ಸರ್ಕಾರದ ಮುಂದಿಟ್ಟಿದ್ದೇವೆ. ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು 42 ಎಕರೆ ಸ್ಥಳ ಗುರುತಿಸಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು