ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಕಾಗಣಿಕಾರ ಅರಸು ಪ್ರಶಸ್ತಿ ಪ್ರದಾನ

Last Updated 5 ಡಿಸೆಂಬರ್ 2018, 17:09 IST
ಅಕ್ಷರ ಗಾತ್ರ

ಬೆಂಗಳೂರು:ನಾಲ್ಕೂವರೆ ದಶಕಗಳಿಂದ ಸೈಕಲ್‌ ತುಳಿದು ಶಿಕ್ಷಣ, ಪರಿಸರ ಹಾಗೂ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣಿಕಾರ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ₹ 5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ.

ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಗಣಿಕಾರ, ‘ಪರಿಸರ ನಾಶದಿಂದಾಗಿ ಮನುಷ್ಯನ ಜೀವಿತಾವಧಿ ಕಡಿಮೆಯಾಗುತ್ತಿದೆ.ಸರಾಸರಿ ವಯಸ್ಸು 60ಕ್ಕೆ ಇಳಿದಿದೆ. ಶೇ 33ರಷ್ಟಿರಬೇಕಿದ್ದ ಅರಣ್ಯದ ಪ್ರಮಾಣ ಬರೀ 11ರಷ್ಟಿದೆ. ಉಳಿದಿದ್ದನ್ನು ಲೂಟಿ ಹೊಡೆದವರು ಯಾರು’ ಎಂದು ಕೇಳಿದರು.‘ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ. ಈ ಸತ್ಯ ಅರಿತು ಮರಗಿಡ ಉಳಿಸಿ, ಬೆಳಸಬೇಕು’ ಎಂದು ಮನವಿ ಮಾಡಿದರು.

‘ಹಿಂದೆ ಸ್ವಲ್ಪ ಓದಿ, ಹೆಚ್ಚು ಶ್ರಮ ಪಡುತ್ತಿದ್ದರು. ಆನಂತರ, ಕೊಂಚ ಹೆಚ್ಚು ಕಲಿತು ಹಳ್ಳಿಗಳನ್ನು ತೊರೆದರು. ಈಗ ಉನ್ನತ ಶಿಕ್ಷಣದ ನೆಪದಲ್ಲಿ ದೇಶ ಬಿಡುತ್ತಿದ್ದಾರೆ. ಇದು ನಮ್ಮ ವ್ಯವಸ್ಥೆ. ನಾವು ಕಲಿಯುತ್ತಿರುವ ಶಿಕ್ಷಣದಿಂದ ಮನಸ್ಸು ಮಲೀನಗೊಳ್ಳುತ್ತಿದೆ’ ಎಂದು ಅವರು ನುಡಿದರು.

‘ನಾನು 1972ರಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ವಾಪಸ್‌ ಹೋದೆ. ಸಾಣೆ ಗುರೂಜಿಗಳು ಹಳ್ಳಿಗೆ ಹಿಂತಿರುಗುವಂತೆ ಸಲಹೆ ನೀಡಿದರು. ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಹಸಿ ಕಟ್ಟಿಗೆ ಉರಿಸಿ ಕಷ್ಟಪಡುವುದನ್ನು ಕಂಡು, ಖಾದಿ ಗ್ರಾಮೊದ್ಯೋಗ ಸಂಸ್ಥೆಯಲ್ಲಿ ತರಬೇತಿ ಹೊಂದಿ ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸಿದೆ’ ಎಂದು ಕಾಗಣಿಕಾರ 45 ವರ್ಷಗಳ ಹಿಂದಿನ ನೆನಪಿನ ಬುತ್ತಿ ಬಿಚ್ಚಿದರು.

‘ಪ್ರತಿ ಹಳ್ಳಿಯ, ಪ್ರತಿ ಕುಟುಂಬಕ್ಕೊಂದು ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸುವ ಉದ್ದೇಶವಿತ್ತು. ಈಗ 30,000 ಘಟಕಗಳಿವೆ. 2.5 ಲಕ್ಷ ಗಿಡಗಳನ್ನು ನೆಟ್ಟಿದ್ದೇವೆ. ಅವು ಮರಗಳಾಗಿ ಗಾಳಿ, ನೆರಳು ಕೊಡುತ್ತಿವೆ. ನೀರಿಲ್ಲದ ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದೇವೆ. ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ತೆರೆದಿದ್ದೇವೆ’ ಎಂದು ವಿವರಿಸಿದರು.

ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರ ಶಿಷ್ಟಾಚಾರವಾಗಿದೆ. ಹಣದ ಮುಂದೆ ಬೇರೇನೂ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ ಎಂದು ಶಿವಾಜಿ ಅವರು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಶಿವಾಜಿ ಕಾಗಣಿಕಾರ ಸರ್ಕಾರ ಮಾಡುವಂಥ ಕೆಲಸಗಳನ್ನು ಒಬ್ಬರು ವ್ಯಕ್ತಿಯಾಗಿ ಮಾಡಿದ್ದಾರೆ. ಗ್ರಾಮೀಣ ಜನರ ಸೇವೆ ಮಾಡಿದ್ದಾರೆ. ಶಿಕ್ಷಣ ಹಾಗೂ ಪರಿಸರ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಹೊಸ ಪೀಳಿಗೆಯ ಯುವಕರು ತಾವು ಪಡೆಯುವ ಶಿಕ್ಷಣವನ್ನು ತಮ್ಮ ಬದುಕು ಕಟ್ಟಿಕೊಳ್ಳಲು ಮಾತ್ರ ಸೀಮಿತಗೊಳಿಸಿದ್ದಾರೆ’ ಎಂದರು.

ಪದವಿ ಮುಗಿಸಿ ಹಳ್ಳಿಗೆ ವಾಪಸ್‌ ಹೋದ ಶಿವಾಜಿ ಅವರನ್ನು ಹೊಸ ಪೀಳಿಗೆ ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಎಚ್‌.ಡಿ. ರೇವಣ್ಣ, ಸಾ.ರಾ.ಮಹೇಶ್‌, ವೆಂಕಟರಮಣಪ್ಪ, ಪುಟ್ಟರಂಗಶೆಟ್ಟಿ ಹಾಜರಿದ್ದರು.

**

13 ನಿಮಿಷದಲ್ಲಿ ಆಯ್ಕೆ: ಬರಗೂರು

‘ಅರಸು ಪ್ರಶಸ್ತಿಗೆ ಶಿವಾಜಿ ಕಾಗಣಿಕಾರ ಅವರ ಹೆಸರನ್ನು 13 ನಿಮಿಷದಲ್ಲಿ ಸರ್ವಸಮ್ಮತದಿಂದ ಅಂತಿಮಗೊಳಿಸಲಾಯಿತು’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದರು.

‘ನಾಲ್ಕೂವರೆ ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅವರು ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ. ಇಂಥವರಿಗೆ ಪ್ರಶಸ್ತಿ ಕೊಡುತ್ತಿರುವುದು ಸಂತಸದ ಸಂಗತಿ’ ಎಂದು ಬಣ್ಣಿಸಿದರು.

‘ಶಿವಾಜಿ ಕಾಗಣಿಕಾರ ಅವರಿಗೆ ಸ್ವಂತ ಮನೆ ಇಲ್ಲ, ವಾಹನ ಇಲ್ಲ, ಫೋನೂ ಇಟ್ಟುಕೊಂಡಿಲ್ಲ’ ಎಂದು ಬರಗೂರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT